ADVERTISEMENT

ವಿದೇಶದಿಂದ ಬಂದವರ ಮಾಹಿತಿ ನೀಡಿ

ಮುಖಂಡರ ಸಭೆ; ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮನವಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2020, 14:06 IST
Last Updated 15 ಮಾರ್ಚ್ 2020, 14:06 IST
ವಿಜಯಪುರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧ್ಯಕ್ಷತೆಯಲ್ಲಿ ವಿವಿಧ ಸಮುದಾಯಗಳ ಮುಖಂಡ ಸಭೆ ಜರುಗಿತು
ವಿಜಯಪುರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧ್ಯಕ್ಷತೆಯಲ್ಲಿ ವಿವಿಧ ಸಮುದಾಯಗಳ ಮುಖಂಡ ಸಭೆ ಜರುಗಿತು   

ವಿಜಯಪುರ: ‘2020ರ ಫೆಬ್ರುವರಿ 1ರಿಂದ ಇದುವರೆಗೆ ವಿದೇಶಗಳಿಂದ ಜಿಲ್ಲೆಗೆ ಬಂದಿರುವವರ ಬಗ್ಗೆ ಜಿಲ್ಲಾ ವಿಪತ್ತು ನಿರ್ವಹಣಾ ಉಚಿತ ಸಹಾಯವಾಣಿ ಸಂಖ್ಯೆ 1077ಗೆ ಮಾಹಿತಿ ನೀಡಬೇಕು’ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಎಲ್ಲ ಸಮುದಾಯದ ಮುಖಂಡರಲ್ಲಿ ಮನವಿ ಮಾಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಿಂದೂ, ಮುಸ್ಲಿಂ ಸೇರಿದಂತೆ ವಿವಿಧ ಸಮುದಾಯದ ಮುಖಂಡರೊಂದಿಗೆ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾಹಿತಿ ನೀಡಲು ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

‘ಕೇಂದ್ರ, ರಾಜ್ಯ ಸರ್ಕಾರ ಹಾಗೂ ಡಬ್ಲ್ಯೂಎಚ್‍ಒ ನಿರ್ದೇಶನದಂತೆ ವಿದೇಶಿಗರ ಬಗ್ಗೆ ತೀವ್ರ ನಿಗಾ ಇಡಲಾಗುತ್ತಿದೆ. ಬೇರೆ ಬೇರೆ ದೇಶಗಳಿಂದ ಜಿಲ್ಲೆಗೆ ಬಂದಿರುವವರ ಮಾಹಿತಿಯನ್ನು ನೀಡುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಸಹಕರಿಸಬೇಕು. ಉಚಿತ ಸಹಾಯವಾಣಿ 1077, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಂದ್ರ ಕಾಪ್ಸೆ (94498 43043) ಅಥವಾ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ.ಬಿ.ಬಿರಾದಾರ (95382 40225) ಇವರಿಗೆ ಮಾಹಿತಿ ನೀಡಬೇಕು’ ಎಂದು ತಿಳಿಸಿದರು.

ADVERTISEMENT

‘ವಿದೇಶಿಗರನ್ನು ಗುರುತಿಸಲು ಜಿಲ್ಲೆಯಾದ್ಯಂತ ಈಗಾಗಲೇ ತಂಡಗಳನ್ನು ರಚಿಸಿ, ಪರಿಶೀಲನೆ ನಡೆಸಲಾಗುತ್ತಿದೆ. ಇಲ್ಲಿಯವೆರೆಗೆ 81 ಜನರು ವಿದೇಶಗಳಿಂದ ಬಂದಿರುವುದು ಖಚಿತವಾಗಿದೆ. ಈ ಪೈಕಿ ಐದು ಜನರ ಗಂಟಲು ಸ್ವ್ಯಾಬ್‌ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ನಾಲ್ವರದ್ದು ನೆಗೆಟಿವ್ ಬಂದಿದೆ. ಇನ್ನೂ ಒಬ್ಬರ ಪರೀಕ್ಷಾ ವರದಿ ಬರಬೇಕಾಗಿದ್ದು, ಬಾಕಿ ಉಳಿದ 76 ಜನರಲ್ಲಿ ಕೊರೊನಾ ಲಕ್ಷಣಗಳು ಕಂಡು ಬಂದಿಲ್ಲ’ ಎಂದು ಹೇಳಿದರು.

ಡಬ್ಲ್ಯೂಎಚ್‍ಒ ಅಧಿಕಾರಿ ಡಾ.ಮುಕುಂದ ಗಲಗಲಿ ಮಾತನಾಡಿ, ‘ಈ ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ, ಮದ್ದು, ಲಸಿಕೆ ಇಲ್ಲ. ಕೆಮ್ಮು, ಜ್ವರ, ನೆಗಡಿ, ಉಸಿರಾಟದ ತೊಂದರೆ ಈ ಕಾಯಿಲೆಯ ಲಕ್ಷಣಗಳಾಗಿವೆ. ವಿಶೇಷವಾಗಿ ರೋಗನಿರೋಧಕ ಶಕ್ತಿ ಕಡಿಮೆ ಇರುವಂತಹ 65 ರಿಂದ 75 ವಯೋಮಾನದವರು, ಹೃದಯ, ಅಸ್ತಮಾ, ಕಿಡ್ನಿ ಮತ್ತು ಸಕ್ಕರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಮತ್ತು ಮಕ್ಕಳಿಗೆ ಈ ಸೋಂಕು ತಗಲುವ ಸಾಧ್ಯತೆ ಹಿನ್ನೆಲೆಯಲ್ಲಿ ಸುರಕ್ಷಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದ ರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ ಎಲ್.ಅರಿಸಿದ್ಧಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.