ADVERTISEMENT

ಯತ್ನಾಳ ವಿರುದ್ಧ ಮಾನನಷ್ಟ ಮೊಕದ್ದಮೆ: ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 6:22 IST
Last Updated 11 ಡಿಸೆಂಬರ್ 2025, 6:22 IST
ವಿಜಯಪುರ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಬುಧವಾರ ಸರ್ಕಾರಿ ವೈದ್ಯಕೀಯ ಕಾಲೇಜು ಸಮಿತಿ ಹೋರಾಟಗಾರರು ಪ್ರತಿಭಟನೆ ನಡೆಸಿದರು 
ವಿಜಯಪುರ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಬುಧವಾರ ಸರ್ಕಾರಿ ವೈದ್ಯಕೀಯ ಕಾಲೇಜು ಸಮಿತಿ ಹೋರಾಟಗಾರರು ಪ್ರತಿಭಟನೆ ನಡೆಸಿದರು    

ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟಗಾರನ್ನು ಪೇಮೆಂಟ್ ಗಿರಾಕಿಗಳು ಎಂದು ಹೀಯಾಳಿಸಿದ  ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ನಿರ್ಧರಿಸಲಾಗಿದೆ ಎಂದು ಹೋರಾಟಗಾರರು ತಿಳಿಸಿದ್ದಾರೆ.

ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ 84 ದಿನಗಳಿಂದ ನಡೆಯುತ್ತಿರುವ ಧರಣಿಗೆ ಬೆಂಬಲಿಸದೆ ಜನ ವಿರೋಧಿ ನೀತಿ ಅನುಸರಿಸಿರುವ ಶಾಸಕ ಯತ್ನಾಳ, ಧರಣಿ ನಿರತರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ತಕ್ಷಣ ತಮ್ಮ ಹೇಳಿಕೆ ಹಿಂಪಡೆದು, ಕ್ಷಮೆ ಯಾಚಿಸಬೇಕು, ಒಂದು ವೇಳೆ ತಮ್ಮ ಹೇಳಿಕೆಗೆ ಬದ್ಧವಾಗಿದ್ದರೆ ಶಿವಾನಂದ ಪಾಟೀಲರಿಂದ ಪಡೆದ ಪೇಮೆಂಟ್ ಎಷ್ಟು? ಪಡೆದಿದ್ದೆ ಆದರೆ, ನಗದು ರೂಪದಲ್ಲಿಯೇ, ಚೆಕ್ ಮೂಲಕವೆ ಅಥವಾ ಫೋನ್ ಪೇ ಮೂಲವೇ ಎಂಬುವದು ಸಾಕ್ಷಿ ಸಮೇತ ಸಾರ್ವಜನಿಕರಿಗೆ ಬಹಿರಂಗಪಡಿಬೇಕು ಎಂದು ಸವಾಲು ಹಾಕಿದರು.

ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿಯು ಮುಂದಿನ ದಿನಗಳಲ್ಲಿ ಜಿಲ್ಲೆಯ ಸಮಸ್ಯೆಗಳು ಏನೇ ಇದ್ದರೂ ಕೈಗೆತ್ತಿಕೊಂಡು ಹೋರಾಟ ರೂಪಿಸಲು ಶಾಶ್ವತ ಹೋರಾಟ ಸಮಿತಿ ರಚನೆಗೊಂಡಿದೆ.  ಈ ಹೋರಾಟ ಸಮಿತಿಯಲ್ಲಿ ಜಿಲ್ಲೆಯ ಸುಮಾರು 200ಕ್ಕೂ ಹೆಚ್ಚು ಸಂಘಟನೆಗಳು ಒಗ್ಗಟ್ಟಾಗಿವೆ, ಮುಂದೆ ನಮ್ಮ ಜಿಲ್ಲೆಗೆ ಯಾವುದೇ ಅನ್ಯಾಯ ಆಗಲೂ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.

ADVERTISEMENT

ಜಿಲ್ಲೆಯ ಸಂಸದರು, ಸಚಿವರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಜನ ವಿರೋಧಿ ಧೋರಣೆಯನ್ನು ಗಮನಿಸಿರುವ ಜಿಲ್ಲೆಯ ಜನತೆ ಬೇಸತ್ತು ಹೋಗಿದ್ದಾರೆ. ನಾವು ಈಗಾಗಲೇ ನಮ್ಮ ಜಿಲ್ಲೆಗೆ ಸಿಗಬೇಕಾಗಿದ್ದ ಆರ್ಟಿಕಲ್ 371ಜೆ ಕೈಬಿಟ್ಟು ಹೋಗಿರುವುದು, ಹೈಕೋರ್ಟ್ ಪೀಠ, ತೋಟಗಾರಿಕಾ ವಿಶ್ವವಿದ್ಯಾಲಯ, ಪುರಾತತ್ವ ಇಲಾಖೆಯ ಕಚೇರಿ ಸೇರಿದಂತೆ ಹಲವು ಯೋಜನೆಗಳು ನಮ್ಮ ಜನ ಪ್ರತಿನಿಧಿಗಳ ನಿಷ್ಕಾಳಜಿಯಿಂದ ಕೈಬಿಟ್ಟು ಹೋಗಿರುವುದು ಜಿಲ್ಲೆಯ ಜನತೆ ಗಮನಿಸಿದ್ದಾರೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಜಿಲ್ಲೆಯ ಜನತೆ ಪಕ್ಷಾತೀತವಾಗಿ, ಜ್ಯಾತ್ಯತೀತವಾಗಿ, ಧರ್ಮಾತಿತವಾಗಿ ಈ ಸಮಿತಿಯಲ್ಲಿ ಸೇರಿಕೊಂಡು ಹೋರಾಟ ರೂಪಿಸಲು ಮುಂದಾಗುವಂತೆ ಮನವಿ ಮಾಡಿದ್ದಾರೆ.

ಹೋರಾಟ ಸಮಿತಿ ಪ್ರಮುಖರಾದ ಅರವಿಂದ ಕುಲಕರ್ಣಿ, ಬಿ.ಭಗವಾನ್ ರೆಡ್ಡಿ, ಅನಿಲ ಹೊಸಮನಿ, ಅಕ್ರಂ ಮಾಶ್ಯಾಳಕರ, ಸುರೇಶ ಬಿಜಾಪುರ, ಶ್ರೀನಾಥ ಪೂಜಾರಿ, ಲಲಿತಾ ಬಿಜ್ಜರಗಿ, ಮಲ್ಲಿಕಾರ್ಜುನ ಬಟಗಿ, ಜಗದೇವ ಸೂರ್ಯವಂಶಿ, ಸಿ.ಬಿ. ಪಾಟೀಲ, ಮಲ್ಲಿಕಾರ್ಜುನ ಎಚ್.ಟಿ, ಗೀತಾ ಎಚ್, ಶ್ರೀಕಾಂತ ಉಪ್ಪಾರ, ಬಾಬುರಾವ್ ಬಿರಕಬ್ಬಿ, ಸಿದ್ದರಾಯ ಹಿರೇಮಠ, ಜಿತೇಂದ್ರ ಕಾಂಬಳೆ, ಯಲ್ಲಪ್ಪ ಡೋಮನಾಳ, ಜಬೀನಾ ಅಥಣಿ, ಲಲಿತಾ ಮಿಣಜಗಿ, ಚಂದು ಜಾಧವ, ಮೆಹಬೂಬ್ ದಳವಾಯಿ, ಭರತಕುಮಾರ ಎಚ್.ಟಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.