ADVERTISEMENT

ಕನ್ಹೇರಿಶ್ರೀ ಜಿಲ್ಲೆ ಪ್ರವೇಶ ನಿರ್ಬಂಧಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 6:58 IST
Last Updated 15 ಅಕ್ಟೋಬರ್ 2025, 6:58 IST
ವಿಜಯಪುರ ಜಾಗತಿಕ ಲಿಂಗಾಯತ ಮಹಾಸಭಾ ಪದಾಧಿಕಾರಿಗಳು ಮತ್ತು ಬಸವಾದಿ ಅಭಿಮಾನಿಗಳು ಹೆಚ್ಚುವರಿ  ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರಗೆ ಮಂಗಳವಾರ ಮನವಿ ಸಲ್ಲಿಸಿದರು 
ವಿಜಯಪುರ ಜಾಗತಿಕ ಲಿಂಗಾಯತ ಮಹಾಸಭಾ ಪದಾಧಿಕಾರಿಗಳು ಮತ್ತು ಬಸವಾದಿ ಅಭಿಮಾನಿಗಳು ಹೆಚ್ಚುವರಿ  ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರಗೆ ಮಂಗಳವಾರ ಮನವಿ ಸಲ್ಲಿಸಿದರು    

ವಿಜಯಪುರ: ಕರ್ನಾಟಕದ ಲಿಂಗಾಯತ ಮಠಾಧೀಶರ ಒಕ್ಕೂಟದ ಸ್ವಾಮಿಗಳು ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಗಾರರ ಬಗ್ಗೆ ಅವಮಾನಕಾರಿ, ಮಾನಹಾನಿಕರ ಹೇಳಿಕೆ ನೀಡಿರುವ ಕ್ರಿಮಿನಲ್‌ ಹಿನ್ನೆಲೆಯುಳ್ಳ ಕನ್ಹೇರಿ ಮಠದ ಕಾಡಸಿದ್ದೇಶ್ವರ ಮಠದ ಸ್ವಾಮೀಜಿ ವಿರುದ್ಧ ದೂರು ದಾಖಲಿಸಿ, ಜೈಲಿಗೆ ಕಳುಹಿಸಬೇಕು ಹಾಗೂ ವಿಜಯಪುರ ಜಿಲ್ಲಾ ಪ್ರವೇಶ ನಿಷೇಧಿಸಬೇಕು ಎಂದು ಒತ್ತಾಯಿಸಿ ವಿಜಯಪುರ ಜಾಗತಿಕ ಲಿಂಗಾಯತ ಮಹಾಸಭಾ ಪದಾಧಿಕಾರಿಗಳು ಮತ್ತು ಬಸವಾದಿ ಅಭಿಮಾನಿಗಳು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಳಿಗೆ ಮಂಗಳವಾರ ಮನವಿ ಸಲ್ಲಿಸಿದರು.

ವಿಜಯಪುರ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸನಗೌಡ ಹರನಾಳ ಹಾಗೂ ಅಖಂಡ ಕರ್ನಾಟಕ ರೈತ ಸಂಘದ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ‘ಅಕ್ಟೋಬರ್‌ 9ರಂದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಬೀಳೂರ ಗ್ರಾಮದ ಬಸವ ಪರಂಪರೆಯ ವಿರಕ್ತ ಮಠದ ಸಾರ್ವಜನಿಕ ಸಭೆಯಲ್ಲಿ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಲಿಂಗಾಯತ ಮಠಾಧೀಶರ ಒಕ್ಕೂಟವನ್ನು ಮುಖ್ಯಮಂತ್ರಿಗಳ ಕೃಪಾಪೋಷಿತ ಕಲಾವಿದರೆಂದು ಹೇಳಿಕೆ ನೀಡಿರುವುದು ಖಂಡನೀಯ’ ಎಂದರು.

‘ಬಸವ ಸಂಸ್ಕೃತಿ ಅಭಿಯಾನದ ಯಶಸ್ಸನ್ನು ಕಂಡು ಹೊಟ್ಟೆ ಉರಿಯಿಂದ ಯಾರನ್ನೋ ಮೆಚ್ಚಿಸಲು ಈ ಸ್ವಾಮಿ ಈ ರೀತಿ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಯನ್ನು ನಾವು ಖಂಡಿಸುತ್ತೇವೆ, ಅವರು ಕ್ಷಮೆ ಕೇಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಕನ್ಹೇರಿ ಸ್ವಾಮೀಜಿ ಲಿಂಗಾಯತ ಮಠಾಧೀಶರನ್ನು ಅವ್ಯಾಚ್ಯವಾಗಿ ನಿಂದಿಸುವುದರೊಂದಿಗೆ ಪ್ರತಿಷ್ಠಿತ ಒಕ್ಕೂಟದ ಮಠಾಧೀಶರನ್ನು ಹೆದರಿಸುವ ಮತ್ತು ಹಿಂಸಾತ್ಮಕ ಹಲ್ಲೆ ಮಾಡುವ ಉದ್ದೇಶದಿಂದ ಕೀಳು ಮಟ್ಟದ ಭಾಷೆಯನ್ನು ಬಳಸಿ ಸಮಸ್ತ ಲಿಂಗಾಯತ ವಿರಕ್ತ ಮಠಗಳ ಪೀಠಾಧಿಪತಿಗಳನ್ನು ಅವಮಾನಿಸಿದ್ದಾರೆ ಎಂದು ಹೇಳಿದರು.

‘ಕನ್ಹೇರಿ ಸ್ವಾಮೀಜಿ ಹೇಳಿಕೆಗಳು ಧಾರ್ಮಿಕ ಸಹಿಷ್ಣುತೆಗೆ ಧಕ್ಕೆ ತರುವುದಲ್ಲದೆ, ಸಮಾಜದಲ್ಲಿ ಉದ್ರೇಕ ಮತ್ತು ದ್ವೇಷವನ್ನು ಹರಡಲು ಕಾರಣವಾಗುತ್ತದೆ. ಇದು ಲಿಂಗಾಯತ ಧರ್ಮದ ಪೀಠಾಧಿಪತಿಗಳ ಅವಹೇಳವಾಗಿರುವುದರಿಂದ ಲಿಂಗಾಯತ ಧರ್ಮಿಯರು ರೊಚ್ಚಿಗೇಳುವ ಸಂಭವ ಇರುತ್ತದೆ’ ಎಂದು ಹೇಳಿದರು.

ಉದ್ದೇಶಪೂರ್ವಕವಾಗಿ ಶಾಂತಿ ಭಂಗ ಮಾಡುವ ಉದ್ದೇಶದಿಂದ ಮಾಡಿದ ಅವಮಾನದ ಹೇಳಿಕೆಯಾಗಿದೆ. ಸೂಕ್ತ ತನಿಖೆ ನಡೆಸಿ, ಕನ್ಹೇರಿ ಮಠದ ಸ್ವಾಮೀಜಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

‘ಕನ್ಹೇರಿ ಸ್ವಾಮೀಜಿ ಅ.15, 16 ರಂದು ಬಸವನ ಬಾಗೇವಾಡಿಗೆ ಭೇಟಿ ನೀಡುತ್ತಿದ್ದು, ಅಲ್ಲಿ ಆತ ಬಸವಭಕ್ತರ ಆಕ್ರೋಶಕ್ಕೆ ಗುರಿಯಾಗುವ ಸಾಧ್ಯತೆಗಳಿವೆ. ಈ ಸ್ವಾಮಿ ಮಾತಾಡಿದ ವಿಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಾರಣ ಆತನಿಗೆ ವಿಜಯಪುರ ಜಿಲ್ಲಾ ಪ್ರವೇಶವನ್ನು ನಿಷೇಧಿಸಬೇಕು’ ಎಂದು ಆಗ್ರಹಿಸಿದರು.

ಜಾಗತಿಕ ಲಿಂಗಾಯತ ಮಹಾಸಭೆಯ ಪದಾಧಿಕಾರಿಗಳು ಹಾಗೂ ಬಸವಾಭಿಮಾನಿಗಳಾದ ಜೆ.ಎಸ್.ಪಾಟೀಲ, ಪ್ರಭುಗೌಡ ಪಾಟೀಲ, ಕಲ್ಬುರ್ಗಿ, ಹೂಗಾರ, ಅಂಗಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.