ADVERTISEMENT

ವಿಜಯಪುರ: ಪ್ರತಿಭಟಿಸಿದ ಕಾಂಗ್ರೆಸಿಗರ ಬಂಧನ, ಬಿಡುಗಡೆ

ರಾಹುಲ್‌ಗಾಂಧಿ ವಿಚಾರಣೆಗೆ ತೀವ್ರ ವಿರೋಧ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 12:32 IST
Last Updated 17 ಜೂನ್ 2022, 12:32 IST
ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಡಾ. ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು
ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಡಾ. ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು   

ವಿಜಯಪುರ: ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯ (ಇ.ಡಿ) ದುರ್ಬಳಕೆ ಮಾಡಿಕೊಂಡು ರಾಹುಲ್‌ ಗಾಂಧಿ ಅವರನ್ನು ಅನಗತ್ಯವಾಗಿ ವಿಚಾರಣೆಗೆ ಒಳಪಡಿಸುತ್ತಿರುವುದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ಮಾಡಿದರು.

ನಗರದ ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು ಬಳಿಕ ಬಿಡುಗಡೆ ಮಾಡಿದರು.

ಎ.ಐ.ಸಿ.ಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಅನಾರೋಗ್ಯದಿಂದ ಬಳುತ್ತಿದ್ದರೂ ಅವರಿಗೆ ಜಾರಿ ನಿರ್ದೇಶನಾಲಯದಿಂದ ನೋಟಿಸ್ ನೀಡಿ ಕಾಂಗ್ರೆಸ್ ಪಕ್ಷದ ನಾಯಕರ ಮನೋಬಲ ಕುಗ್ಗಿಸಲು ಯತ್ನಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ADVERTISEMENT

ಪಕ್ಷ ಮುಖಂಡರಾದ ಅಬ್ದುಲ್‌ ಹಮೀದ್‌ ಮುಶ್ರಿಫ್‌ ಮಾತನಾಡಿ, ಕೇಂದ್ರ ಸರ್ಕಾರ ನಮ್ಮ ಸಂವಿಧಾನ ಬದ್ಧ ಹಕ್ಕಾದ ಪ್ರತಿಭಟನೆಯನ್ನು ಪೊಲೀಸರನ್ನು ಬಳಸಿ ಹತ್ತಿಕ್ಕುತ್ತಿರುವುದು ಖಂಡನೀಯ. ಸರ್ಕಾರ ಏನೇ ಪ್ರಯತ್ನ ಪಟ್ಟರೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಇಡೀ ದೇಶದಾದ್ಯಂತ ಇರುವ ಪಕ್ಷದ ಕಾರ್ಯಕರ್ತರು, ಮುಖಂಡರು ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರ ಪರವಾಗಿ ನಿಲ್ಲುತ್ತಾರೆ ಎಂದು ಹೇಳಿದರು.

ಕೆ.ಪಿ.ಸಿ.ಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ ಮಾತನಾಡಿ, ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ 60 ವರ್ಷ ಅಧಿಕಾರ ಮಾಡಿ ಇ.ಡಿ, ಐ.ಟಿ, ಸಿ.ಬಿ.ಐ ಅಂತಹ ಸ್ವಾಯತ್ತ ಸಂಸ್ಥೆಗಳನ್ನು ಸ್ಥಾಪಿಸಿದೆಯೇ ಹೊರತು ಎಂದೂ ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ ಮತ್ತು ವಿರೋಧ ಪಕ್ಷದ ಮೇಲೆ ದ್ವೇಶದ ರಾಜಕಾರಣ ಮಾಡಿಲ್ಲ ಎಂದರು.

ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದ ಮೋದಿ ಸರ್ಕಾರ ಜನ ವಿರೋದಿಯಾಗಿದೆ. ದೇಶದಲ್ಲಿ ಬೆಲೆ ಏರಿಕೆಯಿಂದ ಸಾಮಾನ್ಯ ಜನ ಕಂಗಾಲಾಗಿದ್ದಾರೆ. ಧರ್ವ ಧರ್ಮಗಳ ಮಧ್ಯ ಸಾಮರಸ್ಯ ಹಾಳುಮಾಡಿ ಜನತೆಯ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮುಚ್ಚಿಹೋಗಿರುವ ನ್ಯಾಷನಲ್‌ ಹೆರಾಲ್ಡ್‌ ಕೇಸನ್ನು ಪುನಃ ಮುನ್ನಲೆಗೆ ತಂದು ನಮ್ಮ ರಾಷ್ಟ್ರೀಯ ನಾಯಕರನ್ನು ಹೇಗಾದರೂ ಮಾಡಿ ಸಿಕ್ಕಿ ಹಾಕಿಸುವ ಕುತಂತ್ರ ಮಾಡಿದೆ. ಇಂತಹ ಗೊಡ್ಡು ಬೆದರಿಕೆಗಳಿಗೆ ನಮ್ಮ ಪಕ್ಷ ಬಗ್ಗುವುದಿಲ್ಲ. ಪ್ರತಿಭಟನೆ ಮಾಡುತ್ತಿರುವ ನಮ್ಮ ಸಂಸದರು, ಶಾಸಕರು, ಹಿರಿಯ ನಾಯಕರನ್ನು ಅವಮಾನಿಸುತ್ತಿರುವ, ಬಂಧಿಸುತ್ತಿರುವುದು ಅತ್ಯಂತ ಹೀನ ಕೃತ್ಯ ಎಂದು ಹೇಳಿದರು.

ಮಾಜಿ ಶಾಸಕ ವಿಠ್ಠಲ ಕಟಕದೊಂಡ, ಜಿಲ್ಲಾ ಉಪಧ್ಯಾಕ್ಷ ಚಾಂದಸಾಬ್‌ ಗಡಗಲಾವ, ಸುಭಾಸ ಕಾಲೆಬಾಗ, ಹೊನಮಲ್ಲ ಸಾರವಾಡ, ಮಹ್ಮದ ರಫೀಕ್‌ ಟಪಾಲ, ಜಮೀರ್‌ ಅಹ್ಮದ್‌ ಬಕ್ಷಿ, ವಿದ್ಯಾರಾಣಿ ತುಂಗಳ, ಮಲ್ಲನಗೌಡ ಬಿರಾದಾರ, ಆರತಿ ಶಹಾಪೂರ, ಡಾ.ಗಂಗಾಧರ ಸಂಬಣ್ಣಿ, ಡಿ.ಎಲ್.ಚವ್ಹಾಣ, ಬಾಪುಗೌಡ ಪಾಟೀಲ, ಸಾಹೇಬಗೌಡ ಬಿರಾದಾರ, ವಸಂತ ಹೊನಮೋಡೆ, ಹಾಜಿಲಾಲ್‌ ದಳವಾಯಿ, ಈರಪ್ಪ, ಜಕ್ಕನವರ, ಇರ್ಫಾನ್‌ ಶೇಖ್, ಜಮೀರ್‌ ಅಹ್ಮದ್‌ ಬಾಂಗಿ, ಅಶೋಕ ಪಾಟೀಲ, ಇಲಿಯಾಸ್‌ ಬಗಲಿ, ಮೀರಾಸಾಬ್‌ ಮುಲ್ಲಾ, ಮೊಹ್ಮದ್‌ ಹನೀಫ್‌ ಮಕಾನದಾರ, ರವಿ ಭಜಂತ್ರಿ, ರಾಜು ಚವ್ಹಾಣ, ಆಸ್ಮಾ ಕಾಲೆಬಾಗ, ಪಿರೋಜ್‌ ಶೇಖ್‌, ಕಲ್ಲಪ್ಪ ಪರಶೆಟ್ಟಿ, ಧನರಾಜ ಎ, ಉಮೇಶ ತಾರಲಟ್ಟಿ, ರಜಾಕ್‌ ಕಾಖಂಡಕಿ, ಪ್ರಭು ನಾಟೆಕಾರ, ಬಾಬು ಯಾಳವಾರ, ಅನುಪಮ ಬಬಲೇಶ್ವರ, ಎಂ.ಆರ್.ಪಾಟೀಲ ಈರಪ್ಪ ಕುಂಬಾರ, ಚಂದ್ರಗಿ ಹೊನ್ನದ, ದಸ್ಕರ್ ಶಾನವಾಲೆ, ತಿಪ್ಪಣ್ಣ ಕಮಲದಿನ್ನಿ, ಪ್ರತಿಭಾ ನಾಟಿಕಾರ, ಜಯಶ್ರೀ ಹದನೂರ, ಭಾರತಿ ಹೊಸಮನಿ, ಶಮಿಮಾ ಅಕ್ಕಲಕೋಟ, ರಾಜಶೇಖರ ಅವಜಿ, ಪಿರೋಜ್‌ ಬಳಬಟ್ಟಿ ಇದ್ದರು.

****

ಕೇಂದ್ರ ಸರ್ಕಾರವು ಅಧಿಕಾರ ದುರುಪಯೋಗ ಪಡಿಸಿಕೊಂಡು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿರುವುದು ಖಂಡನೀಯ
-ಅಬ್ದುಲ್‌ ಹಮೀದ್‌ ಮುಶ್ರಿಫ್‌, ಮುಖಂಡ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.