ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಆಗ್ರಹಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಗುರುವಾರ ಕರ್ನಾಟಕ ರಾಜ್ಯ ಬೀಜ ನಿಗಮದ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ ಭೇಟಿ ನೀಡಿ, ಬೆಂಬಲ ವ್ಯಕ್ತಪಡಿಸಿದರು.
‘ಸದನದಲ್ಲೇ ಜಿಲ್ಲೆಯ ಶಾಸಕರೊಬ್ಬರು ಪಿಪಿಪಿ ಮಾಡುವುದಾದರೆ ನಾನು ₹500 ಕೋಟಿ ಹೂಡಿಕೆ ಮಾಡುತ್ತೇನೆ ಎಂದಿದ್ದಾರೆ. ಈಗಾಗಲೇ ದುಡ್ಡು ಮಾಡಿಕೊಂಡಿರುವ ಅವರು ಇನ್ನಷ್ಟು ದುಡ್ಡು ಮಾಡಬೇಕೆಂದು ಬಯಸಿದ್ದಾರೆ’ ಎಂದು ವಿಜುಗೌಡ ಪಾಟೀಲ ಆರೋಪಿಸಿದರು.
‘ಈಗಾಗಲೇ ಎರಡು ಖಾಸಗಿ ವೈದ್ಯಕೀಯ ಕಾಲೇಜುಗಳಿವೆ. ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಿದರೆ ಇವರಿಗೇನು ತ್ರಾಸಿದೆ. ಇದು ಸಣ್ಣ ಮಕ್ಕಳಿಗೂ ಅರ್ಥವಾಗುವಂತಹದ್ದು. ಹಿಂದೆಯೇ ಎಚ್.ಡಿ. ಕುಮಾರಸ್ವಾಮಿಯವರು ಬಂದು ವೈದ್ಯಕೀಯ ಕಾಲೇಜಿಗಾಗಿ ಸ್ಥಳ ವೀಕ್ಷಣೆ ಮಾಡಿದಾಗಲೂ ಕೆಲವರು ವಿರೋಧ ವ್ಯಕ್ತಪಡಿಸಿದರು’ ಎಂದರು.
‘ಪ್ರಸ್ತುತ ದಿನಗಳಲ್ಲಿ ಖಾಸಗಿ ಆರೋಗ್ಯ ಸೇವೆಗಳು ತುಂಬಾ ದುಬಾರಿಯಾಗಿವೆ, ಜಿಲ್ಲೆಯ ಅಭಿವೃದ್ಧಿ ಯಾಗಬೇಕಾದರೆ ₹500 ಕೋಟಿ ದೊಡ್ಡದಲ್ಲ ಅದನ್ನು ಸರ್ಕಾರ ಕೊಡಬೇಕು, ಸರ್ಕಾರಿ ಕಾಲೇಜು ಬರುವುದರಿಂದ ಕಡುಬಡವರಿಗೆ ಅನುಕೂಲವಾಗುತ್ತದೆ. ಆದರೆ, ರಾಜಕಾರಣಿಗಳು ತಾವು ಬೆಳೆಯುವುದು, ತಮ್ಮ ಶಿಕ್ಷಣ ಸಂಸ್ಥೆಗಳು ಬೆಳೆಸುವುದನ್ನು ಮಾತ್ರ ನೋಡುತ್ತಿದ್ದಾರೆ’ ಎಂದು ಕಿರಿಕಾರಿದರು.
ಧರಣಿಯಲ್ಲಿ ಮುಖಂಡರಾದ ರವಿಕಾಂತ ಬಗಲಿ, ಉಮೇಶ ವಂದಾಲ, ಪ್ರಕಾಶ ಮಿರ್ಜಿ, ರವೀಂದ್ರ ಲೋಣಿ, ರವಿ ಕುಲಕರ್ಣಿ, ರಾಜು ಬಿರಾದಾರ, ಬಾಬು ಚವ್ಹಾಣ, ಶಿವು ಬುಯ್ಯಾರ, ಮಲ್ಲು ಕುಂಬಾರ, ಸಂತೋಷ ಚವ್ಹಾಣ, ಗಜಾನನ ಚೌಧರಿ, ವಿನೋದ ಖೇಡ ಇದ್ದರು.
ಡಿಎಸ್‌ಎಸ್ ಬೆಂಬಲ:
ಧರಣಿ ಸತ್ಯಾಗ್ರಹಕ್ಕೆ ದಲಿತ ಸಂಘರ್ಷ ಸಮಿತಿ (ಸಾಗರ) ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣವರ, ಜಿಲ್ಲಾ ಸಂಘಟನಾ ಸಂಚಾಲಕ ವೈ.ಸಿ. ಮಯೂರ, ಪ್ರಶಾಂತ ಝಂಡೆ ನೇತೃತ್ವದಲ್ಲಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.
ಯಾವುದೇ ಕಾರಣಕ್ಕೂ ಸರ್ಕಾರ ಖಾಸಗಿಯವರಿಗೆ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ಅಂಗವಿಕಲರ ಕ್ಷೇಮಾಭಿವೃದ್ದಿ ಸಂಘದ ರಾಜ್ಯದ ಪ್ರಧಾನ ಕಾರ್ಯದರ್ಶಿ ರಂಗಪ್ಪ ದಾಸರ, ಉಪಾಧ್ಯಕ್ಷ ಹಣಮಂತ, ಸದಸ್ಯರಾದ ಜಗದೀಶ, ಉಮರಾಣ, ರಾಜು ಕುಮಟಗಿ, ಅಶೋಕ ವಾಲಿಕಾರ, ಅಂಬಣ್ಣ ಬುರಾಣಪುರ, ಮಲ್ಲಿಕಾರ್ಜುನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.