ವಿಜಯಪುರ: ಎಲ್ಲರ ಮನೆಯ ಮುಂದೆ ದೀಪಗಳ ಸಾಲಿನಲ್ಲಿ ಬೆಳಕಿನ ವೈಭವ... ಆಕಾಶ ಬುಟ್ಟಿಯಲ್ಲಿ ಬೆಳಕಿನ ರಂಗವಲ್ಲಿ.... ಮನೆ-ಅಂಗಡಿಗಳಲ್ಲಿ ಮಹಾಲಕ್ಷ್ಮೀ ಪೂಜೆ....ಕಾರ್, ಬೈಕ್ ಖರೀದಿ ಭರ್ಜರಿ.... ಪಟಾಕಿಗಳ ಕಿವಿಗಡಚಿಕ್ಕುವ ಸದ್ದು.... ಪೂಜಾ ಪರಿಕರಗಳ ಖರೀದಿಯಲ್ಲಿ ಜನರ ದಂಡು.... ಮಾರುಕಟ್ಟೆ ತುಂಬಾ ಜನಜಂಗುಳಿ…
ಇಂದು ಗುಮ್ಮಟ ನಗರಿಯಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದ ದೃಶ್ಯಗಳಿವು. ದೀಪಾವಳಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ.
ಸೋಮವಾರ ವ್ಯಾಪಾರ-ವಹಿವಾಟು ಮಾಡುವ ಅಂಗಡಿ, ಕಚೇರಿಗಳಲ್ಲಿ ಮಹಾಲಕ್ಷ್ಮೀ ಪೂಜೆ ಶ್ರದ್ಧಾ-ಭಕ್ತಿಯಿಂದ ನೆರವೇರಿತು. ಆಯಾ ಅಂಗಡಿ ಮಾಲೀಕರು, ಆಫೀಸ್ ಮುಖ್ಯಸ್ಥರು ತಮ್ಮ ಕುಟುಂಬ ಸದಸ್ಯರೊಂದಿಗೆ ತಮ್ಮ ಅಂಗಡಿ, ಕಚೇರಿಗೆ ಬಂದು ಲಕ್ಷ್ಮಿಗೆ ಪೂಜೆ ಸಲ್ಲಿಸಿದರು.
ಅಂಗಡಿಯ ಮುಂಭಾಗದಲ್ಲಿ ಶಾಮಿಯಾನ ಹಾಕಿ, ಚಿತ್ತಾಕರ್ಷಕ ಲೈಟಿಂಗ್ ಹಾಕಿ, ಔತಣಕೂಟ ಏರ್ಪಡಿಸಲಾಗಿತ್ತು. ಬಗೆ ಬಗೆಯ ಸಿಹಿ ತಿನಿಸುಗಳು, ಪಕ್ವಾನಗಳನ್ನು ಉಣಬಡಿಸಿದರು. ತಮ್ಮ ಅಂಗಡಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಹೊಸ ಬಟ್ಟೆ, ವಿಶೇಷ ಉಡುಗೊರೆಯ ಪೊಟ್ಟಣಗಳನ್ನು ನೀಡಿ ಹಬ್ಬದ ಶುಭ ಕೋರಿದ್ದು ಕಂಡು ಬಂದಿತು.
ಹಬ್ಬದ ಅಂಗವಾಗಿ ವ್ಯಾಪಾರಸ್ಥರು ಕೂಡ ಅಂಗಡಿಗಳನ್ನು ಸ್ವಚ್ಛಗೊಳಿಸಿ ಸುಣ್ಣ-ಬಣ್ಣದೊಂದಿಗೆ ಶೃಂಗಾರದಲ್ಲಿ ತೊಡಗಿದ್ದರು.
ಲಾಲ್ ಬಹಾದೂರ್ ಶಾಸ್ತ್ರಿ ಮಾರುಕಟ್ಟೆ, ಸಿದ್ದೇಶ್ವರ ದೇವಸ್ಥಾನ ರಸ್ತೆ, ಆಶ್ರಮ ರಸ್ತೆ, ಸ್ಟೇಶನ್ ರಸ್ತೆ, ಡಾ.ಅಂಬೇಡ್ಕರ್ ವೃತ್ತದ ಸಮೀಪ ಮತ್ತು ಜಲನಗರದ ಮುಖ್ಯ ರಸ್ತೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೂವುಗಳು, ಪೂಜಾ ಪರಿಕರಗಳು ಮಾರಾಟವಾಗುತ್ತಿವೆ.
ದೀಪಾವಳಿ ಹಬ್ಬದಲ್ಲಿ ಚೆಂಡು ಹೂವು ಪ್ರಮುಖ. ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಚೆಂಡು ಹೂವುಗಳು ರಾರಾಜಿಸುತ್ತಿವೆ. ಚೆಂಡುಹೂವುಗಳು ಕೆಜಿಗೆ ₹100 ರಿಂದ 120 , ಮಲ್ಲಿಗೆ ಹೂವು ಕೆಜಿಗೆ ₹ 900ಕ್ಕೆ ಮಾರಾಟವಾಗುತ್ತಿವೆ. ಸೇಬು, ದಾಳಿಂಬೆ, ಮೋಸಂಬಿ ಮೊದಲಾದ ಹಣ್ಣುಗಳು ಬೆಲೆ ಏರಿಕೆಯಾಗಿದ್ದರೂ ಸಹ ಜನರು ಈ ಎಲ್ಲ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೊಸ ವಸ್ತುಗಳ ಖರೀದಿಸುವುದು ವಾಡಿಕೆ. ಹೀಗಾಗಿ ವಿಜಯಪುರದ ಕಾರ್ ಷೋರೂಂ, ಬೈಕ್ ಷೋರೂ, ಎಲೆಕ್ಟ್ರಾನಿಕ್ಸ್ ಉಪಕರಣಗಳ ಅಂಗಡಿಗಳು ತುಂಬಿ ತಿಳುಕುತ್ತಿದ್ದವು.
ದೀಪಾವಳಿ ಸಂಭ್ರಮದ ಹಬ್ಬ. ಹೊಸ ಬಟ್ಟೆ ಉಟ್ಟು ವಿಶೇಷ ಪೂಜೆಯಲ್ಲಿ ಭಾಗಿಯಾಗುತ್ತೇವೆ ಬಗೆ ಬಗೆಯ ತಿನಿಸು ತಯಾರಿಸಿ ಔತಣಕೂಟ ಏರ್ಪಡಿಸುತ್ತೇವೆ. ಒಟ್ಟಿನಲ್ಲಿ ದೀಪಾವಳಿ ಎಂದರೆ ಸಂಭ್ರಮಮಲ್ಲಿಕಾರ್ಜುನ್ ರೂಗಿ ಸ್ಥಳೀಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.