ADVERTISEMENT

ವಿಜಯಪುರ| ಮಕ್ಕಳ ಹಿತ ಕಾಪಾಡಲು ವೈದ್ಯರು ಆದ್ಯತೆ ನೀಡಿ: ಸಚಿವ ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 6:50 IST
Last Updated 23 ನವೆಂಬರ್ 2025, 6:50 IST
ವಿಜಯಪುರದಲ್ಲಿ ಶನಿವಾರ ಆಯೋಜಿಸಿದ್ದ ಚಿಕ್ಕಮಕ್ಕಳ ತಜ್ಞರ  ಸಮ್ಮೇಳನವನ್ನು ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಿದರು
ವಿಜಯಪುರದಲ್ಲಿ ಶನಿವಾರ ಆಯೋಜಿಸಿದ್ದ ಚಿಕ್ಕಮಕ್ಕಳ ತಜ್ಞರ  ಸಮ್ಮೇಳನವನ್ನು ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಿದರು   

ವಿಜಯಪುರ: ‘ಸಮಾಜದಲ್ಲಿ ಆರೋಗ್ಯ ಪೂರ್ಣ ಪರಿಸರ ಒದಗಿಸಲು ವಿಜ್ಞಾನ, ತಂತ್ರಜ್ಞಾನ ಮತ್ತು ಸಹಾನುಭೂತಿ ಒಗ್ಗೂಡಿ ಸಾಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಶಿಶುರೋಗ ವಿಭಾಗ, ಭಾರತೀಯ ಚಿಕ್ಕಮಕ್ಕಳ ತಜ್ಞರ ಸಂಘ, ಕರ್ನಾಟಕ ಚಿಕ್ಕಮಕ್ಕಳ ತಜ್ಞರ ಸಂಘ ಹಾಗೂ ಡಾ. ಬಿದರಿಯವರ ಅಶ್ವಿನಿ ಇನ್‌ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 39ನೇ ದಕ್ಷಿಣ ಭಾರತ ಚಿಕ್ಕಮಕ್ಕಳ ತಜ್ಞರ ಸಮ್ಮೇಳನ ಹಾಗೂ ಕರ್ನಾಟಕ ರಾಜ್ಯ 44ನೇ ಚಿಕ್ಕಮಕ್ಕಳ ತಜ್ಞರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರತಿಯೊಂದು ಮಗು ಆರೋಗ್ಯವಾಗಿ ಬೆಳೆಯಲು ಗುಣಮಟ್ಟದ ಹಾಗೂ ಸಮಾನ ಆರೈಕೆಯನ್ನು ಒದಗಿಸುವುದು ಇಂದು ತುರ್ತಾಗಿ ಆಗಬೇಕಿದೆ. ನೀತಿ ನಿರೂಪಕರು, ಶಿಕ್ಷಕರು, ವೈದ್ಯರು ಮತ್ತು ಸಂಶೋಧಕರು ಈ ನಿಟ್ಟಿನಲ್ಲಿ ರೂಪಿಸಬೇಕಿರುವ ಯೋಜನೆಗಳ ಬಗ್ಗೆ ಸಾಮೂಹಿಕವಾಗಿ ಜವಾಬ್ದಾರಿ ವಹಿಸಬೇಕಿದೆ’ ಎಂದರು.

ADVERTISEMENT

‘ವೈದ್ಯಕೀಯ ಕ್ಷೇತ್ರದಲ್ಲಿ ಮಕ್ಕಳಹಿತ ಕಾಪಾಡುವ ಮನಸ್ಸುಗಳನ್ನು ಒಟ್ಟುಗೂಡಿಸಲು ಸಮ್ಮೇಳನಗಳಿಂದ ಸಾಧ್ಯವಾಗುತ್ತದೆ. ಹೊಸ ಆಲೋಚನೆಗಳು, ಸಹಯೋಗದ ಸಂಶೋಧನೆ ಮತ್ತು ಸುಧಾರಿತ ಚಿಕಿತ್ಸೆ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ನಿರ್ಣಾಯಕ ಪಾತ್ರ ವಹಿಸುತ್ತವೆ’ ಎಂದು ಹೇಳಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ.ಎಸ್.ವಿ.ಪಾಟೀಲ ಮಾತನಾಡಿ, ‘ವೃತ್ತಿ ನೈಪುಣ್ಯತೆ ಹೆಚ್ಚಿಸುವುದು ಮತ್ತು ನೀತಿ ಸಂಹಿತೆ ಪಾಲನೆ, ನವಜಾತ ಶಿಶುಗಳ ಆರೋಗ್ಯ ಕಾಪಾಡುವುದು, ಮಕ್ಕಳ ಆರೋಗ್ಯ ಸಂರಕ್ಷಣೆ ಚಟುವಟಿಕೆಗಳಿಗೆ ಕ್ರಮ  ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಡಾ.ರವಿಶಂಕರ ಮಾರ್ಪಳ್ಳಿ ಮಾತನಾಡಿ, ‘ಡಿಜಿಟಲ್ ಸಲಕರಣೆಗಳ ಬಳಕೆಯಿಂದ ಮಕ್ಕಳ ಮೇಲಾಗುತ್ತಿರುವ ಪರಿಣಾಮ, ಪೋಷಕರು ಎದುರಿಸುತ್ತಿರುವ ಆತಂಕಗಳ ಬಗ್ಗೆ ಗಮನ ಹರಿಸಲಾಗುವುದು’ ಎಂದರು.

ಸಂಘದ ರಾಜ್ಯ ಕಾರ್ಯದರ್ಶಿ ಡಾ.ಸಿದ್ದು ಚರಕಿ ವರದಿ ವಾಚಿಸಿದರು. ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ.ವೈ.ಎಂ. ಜಯರಾಜ, ಕುಲಪತಿ ಡಾ. ಅರುಣ ಇನಾಮದಾರ, ರಿಜಿಸ್ಟ್ರಾರ್ ಡಾ.ಆರ್.ವಿ. ಕುಲಕರ್ಣಿ, ಪ್ರಭಾರ ಪ್ರಾಚಾರ್ಯೆ ಡಾ.ತೇಜಶ್ವಿನಿ ವಲ್ಲಭ, ಚಿಕ್ಕಮಕ್ಕಳ ತಜ್ಞರಾದ ಡಾ.ಬಸವರಾಜ ಜಿ.ವಿ., ಡಾ.ಸಂತೋಷ ಸೊನ್ಸ, ಡಾ. ಪ್ರೀತಿ ಗಲಗಲಿ, ಡಾ.ಯೋಗೇಶ ಪಾರೀಖ, ಡಾ.ಕೆ. ರಾಜೇಂದ್ರನ್‌, ಡಾ.ಅಭಿಷೇಕ ಫಡಕೆ, ಡಾ.ಎಲ್.ಎಚ್. ಬಿದರಿ,  ಡಾ. ಸಾರ್ವಭೌಮ ಬಗಲಿ, ಡಾ.ಆರ್. ಟಿ. ಪಾಟೀಲ, ಡಾ.ಎಂ.ಎಂ. ಪಾಟೀಲ, ಡಾ.ಎಸ್.ಎಸ್. ಕಲ್ಯಾಣಶೆಟ್ಟರ, ಡಾ.ಪರೀಕ್ಷಿತ ಕೋಟಿ, ಡಾ.ಶ್ರೀಶೈಲ ಗಿಡಗಂಟಿ, ಡಾ.ರವಿ ಬರಡೋಲ, ಡಾ.ಎಂ. ವೆಂಕಟಾಚಲಪತಿ, ಡಾ.ಸಿಂಗಾರವೇಲು, ಡಾ. ನಂದೀಶ ಬಿ, ಡಾ.ದುರ್ಗಪ್ಪ, ಡಾ.ವಿ.ಡಿ. ಪಾಟೀಲ, ಡಾ.ಆರತಿ ಜಯಕುಮಾರ, ಡಾ.ಎಂ.ಎಂ. ಪಾಟೀಲ, ಡಾ.ಎಸ್. ಎಸ್. ಕಲ್ಯಾಣಶೆಟ್ಟರ ಇದ್ದರು.

ಮಕ್ಕಳ ತಜ್ಞ ವೈದ್ಯರು  ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಚಿಕ್ಕಮಕ್ಕಳ ಕಾಯಿಲೆಗಳನ್ನು ನಿಭಾಯಿಸಲು ಹದಿಹರೆಯದವರ ಮಕ್ಕಳಲ್ಲಿ ಆರೋಗ್ಯ ಬಲಪಡಿಸಲು ಆದ್ಯತೆ ನೀಡಬೇಕು
ಎಂ. ಬಿ. ಪಾಟೀಲ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.