ADVERTISEMENT

ಅಫಜಲಪುರ ನಿವಾಸಿಗಳಿಗೆ ಕುಡಿಯಲು ಚರಂಡಿ ನೀರು!

ಚರಂಡಿ ಮೂಲಕ ಭೀಮಾ ನದಿ ಸೇರಿದ ನೀರೇ ಮತ್ತೆ ಪೂರೈಕೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 19:30 IST
Last Updated 28 ಫೆಬ್ರುವರಿ 2020, 19:30 IST
ಅಫಜಲಪುರ ಪಟ್ಟಣದ ಚರಂಡಿ ನೀರು ಹಳ್ಳ ಹರಿದಂತೆ ಹರಿದು ದಿನಾಲು ಭೀಮಾ ನದಿ ಸೇರುತ್ತಿದೆ
ಅಫಜಲಪುರ ಪಟ್ಟಣದ ಚರಂಡಿ ನೀರು ಹಳ್ಳ ಹರಿದಂತೆ ಹರಿದು ದಿನಾಲು ಭೀಮಾ ನದಿ ಸೇರುತ್ತಿದೆ   

ಅಫಜಲಪುರ: ಪಟ್ಟಣದ 30 ವಾರ್ಡುಗಳ ಮತ್ತು ಕೊಳಚೆ ಪ್ರದೇಶಗಳಲ್ಲಿ ಜನರು ಬಳಕೆ ಮಾಡಿದ ನೀರು ಚರಂಡಿ ಮೂಲಕ ಭೀಮಾ ನದಿಯನ್ನು ಸೇರುತ್ತಿದೆ. ಅದೇ ನದಿ ನೀರು ಶುದ್ಧೀಕರಣಗೊಳ್ಳದೆ ಕುಡಿಯಲು ಪೂರೈಕೆ ಆಗುತ್ತಿದೆ.

ಪುರಸಭೆಯು ಭೀಮಾ ನದಿ ನೀರನ್ನು ಶುದ್ಧೀಕರಿಸಲು ವ್ಯವಸ್ಥೆ ಮಾಡದಿರುವುದರಿಂದ ಜನರು ನದಿ ನೀರನ್ನು ಅನಿವಾರ್ಯವಾಗಿ ನೇರವಾಗಿ ಕುಡಿಯಲು ಬಳಸುವಂತಾಗಿದೆ.

ಪಟ್ಟಣದಲ್ಲಿ ಸುಮಾರು 40 ಸಾವಿರ ಜನಸಂಖ್ಯೆ ಇದ್ದು, ಜನರು ಬಳಕೆ ಮಾಡುವ ನೀರು, ತ್ಯಾಜ್ಯ ಎಲ್ಲವೂ ಪ್ರತಿದಿನ ಭೀಮಾ ನದಿಗೆ ಸೇರುತ್ತಿದೆ. ಪಟ್ಟಣದ ಪ್ರತಿಯೊಂದು ವಾರ್ಡಿನಲ್ಲಿ ಚರಂಡಿ ವ್ಯವಸ್ಥೆ ಇದೆ. ಆದರೆ ಚರಂಡಿಗಳನ್ನು ಸ್ವಚ್ಛ ಮಾಡದ ಕಾರಣ ಕಾರಣ ರಸ್ತೆ ಮೇಲೆ ನೀರು ಹರಿಯುತ್ತಿದೆ.

ADVERTISEMENT

ಚರಂಡಿ ನೀರು ಹರಿದು ದೇವಲ ಗಾಣಗಾಪುರದ ದತ್ತ ದೇವಸ್ಥಾನ ಹತ್ತಿರ ಸಂಗಮದಲ್ಲಿ ಸೇರುತ್ತದೆ. ಅದರಲ್ಲಿಯೇ ಜನರು ಸ್ನಾನ ಮಾಡುತ್ತಾರೆ ಮತ್ತು ಸಂಗಮದ ನೀರನ್ನು ತೀರ್ಥವೆಂದು ಯಾತ್ರಿಕರು ಸೇವನೆ ಮಾಡುತ್ತಾರೆ.

ಪಟ್ಟಣದಲ್ಲಿ ಹರಿಯುವ ಚರಂಡಿ ನೀರನ್ನು ಒಂದು ಕಡೆ ಸಂಗ್ರಹಿಸಿ ನೀರು ಪುನರ್ ಬಳಕೆಗೆ ಯೋಗ್ಯವನ್ನಾಗಿ ಮಾಡಬೇಕು. ಆಗ ಮಾತ್ರ ಚರಂಡಿ ನೀರು ಭೀಮಾ ನದಿಗೆ ನೇರವಾಗಿ ಸೇರುವುದಿಲ್ಲ. ಇದರಿಂದ ಜನರಿಗೆ ಅನುಕೂಲ ಆಗುತ್ತದೆ, ನೀರಿನ ಸದ್ಬಳಕೆ ಆಗುತ್ತದೆ ಎಂದು ಪಟ್ಟಣದ ನಾಗರಿಕರಾದ ಸಿದ್ರಾಮಪ್ಪಾ ಮನ್ಮಿ, ಸದಾಶಿವ ಮೇತ್ರಿ, ತಾಲ್ಲೂಕು ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮಂತ ಬಿರಾದಾರ್ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ್ ಜಮಾದಾರ್ ಸಲಹೆ ನೀಡಿದ್ದಾರೆ.

ವಾರಕ್ಕೊಮ್ಮೆ ಚರಂಡಿಗಳನ್ನು ಸ್ವಚ್ಛಗೊಳಿಸಲುಪುರಸಭೆ ಕ್ರಮ ಜರುಗಿಸಬೇಕು. ತಿಪ್ಪೆಗುಂಡಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕು. ಮಳೆ ಬಂದಾಗ ನೀರಿನ ರಭಸಕ್ಕೆ ಕಸಕಡ್ಡಿ ಎಲ್ಲಾ ತ್ಯಾಜ್ಯ ವಸ್ತುಗಳು ನದಿ ಸೇರಿಕೊಳ್ಳುತ್ತದೆ. ಅದಕ್ಕಾಗಿ ಪುರಸಭೆಯವರು ಚರಂಡಿಗಳನ್ನು ಸ್ವಚ್ಛಗೊಳಿಸುವುದು ಒಳ್ಳೆಯದು ಎನ್ನುತ್ತಾರೆ ಅವರು.

ಈ ಕುರಿತು ಪುರಸಭೆಯ ಮುಖ್ಯಾಧಿಕಾರಿ ಅಶೋಕ ಬಿಲಗುಂದಿ ಅವರನ್ನ ಪ್ರಶ್ನಿಸಿದಾಗ ‘ಚರಂಡಿ ನೀರು ಒಂದು ಕಡೆ ಸಂಗ್ರಹ ಮಾಡುವ ವ್ಯವಸ್ಥೆ ಮಾಡಬೇಕಾಗಿದೆ. ಅದಕ್ಕಾಗಿ ಸಭೆಯಲ್ಲಿ ಚರ್ಚೆ ಮಾಡುತ್ತೇವೆ’ ಎಂದರು.

‘ಚರಂಡಿಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಲು ಸಿಬ್ಬಂದಿಗೆ ತಿಳಿಸಲಾಗುವುದು. ಜನರು ಕಸಕಡ್ಡಿಗಳನ್ನು ತ್ಯಾಜ್ಯ ವಸ್ತುಗಳನ್ನು ಬೀದಿಗಳಲ್ಲಿ ಹರಡಬಾರದು. ಪುರಸಭೆ ಗುರುತು ಮಾಡಿದ ಸ್ಥಳಗಳಲ್ಲಿ ಹಾಕಿದರೆ ನಮಗೆ ಬೇರೆ ಕಡೆಗೆ ಸಾಗಿಸಲು ಅನುಕೂಲವಾಗುತ್ತದೆ’ ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.