ADVERTISEMENT

ನಾಲತವಾಡ | ಹದಗೆಟ್ಟ ರಸ್ತೆಗಳು: ಹೆಚ್ಚಿದ ಧೂಳು-ತಪ್ಪದ ಗೋಳು

ರೋಗಿಗಳು, ವಯೋವೃದ್ದರು ಮನೆಯಿಂದ ಹೊರಗೆ ಬಾರದ ಪರಿಸ್ಥಿತಿ ನಿರ್ಮಾಣ

ಮಹಾಂತೇಶ ವೀ.ನೂಲಿನವರ
Published 4 ಡಿಸೆಂಬರ್ 2025, 5:10 IST
Last Updated 4 ಡಿಸೆಂಬರ್ 2025, 5:10 IST
ಧೂಳಿನಿಂದ ಆವರಿಸಿದ ನಾಲತವಾಡ ಪಟ್ಟಣದ ಮುಖ್ಯರಸ್ತೆಯ ನೋಟ
ಧೂಳಿನಿಂದ ಆವರಿಸಿದ ನಾಲತವಾಡ ಪಟ್ಟಣದ ಮುಖ್ಯರಸ್ತೆಯ ನೋಟ   

ನಾಲತವಾಡ: ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣದಲ್ಲಿ ರಸ್ತೆಗಳು ತೀರಾ ಹದಗೆಟ್ಟಿದ್ದು, ಧೂಳಿನ ಮಜ್ಜನ ಜನರಿಗೆ ನರಕಯಾತನೆ ಉಂಟುಮಾಡುತ್ತಿದೆ.

ಸ್ಥಳೀಯ ಎಪಿಎಂಸಿಯಿಂದ ಶರಣ ಶ್ರೀ ವೀರೇಶ್ವರ ವೃತ್ತ, ನಾರಾಯಣಪೂರ ರಸ್ತೆ, ಅಯ್ಯನಗುಡಿ ರಸ್ತೆ, ಲೊಟಗೇರಿ, ಆಲೂರ ಗ್ರಾಮದಿಂದ ಪಟ್ಟಣದ ಬಸ್‌ ನಿಲ್ದಾಣವರೆಗಿನ ಮುಖ್ಯ ರಸ್ತೆಗಳ ಡಾಂಬರ್‌ ಕಿತ್ತು ಗುಂಡಿಗಳು ನಿರ್ಮಾಣವಾಗಿವೆ. ಬಸ್ ನಿಲ್ದಾಣದಿಂದ ವೀರೇಶ್ವರ ಕಾಲೇಜಿನವರೆಗೆ ಡಾಂಬರ್ ರಸ್ತೆಯ ಪಕ್ಕದಲ್ಲಿರುವ ಪಾದಚಾರಿ ರಸ್ತೆ ಮಣ್ಣು ಕಿತ್ತುಕೊಂಡು ಹೋಗಿ ಕಚ್ಚಾರಸ್ತೆ ಆಗಿದೆ. ರಸ್ತೆಯಲ್ಲಿ ಮಣ್ಣಿನ ದಿನ್ನೆಗಳು, ಪಟ್ಟಣಕ್ಕೆ ಕೂಡುವ ವಿವಿಧ ರಸ್ತೆಗಳ ತೆಗ್ಗು, ದಿನ್ನೆಗಳನ್ನು ಈ ಹಿಂದೆ ಮಣ್ಣಿನಿಂದ ತುಂಬಿಸಲಾಗಿತ್ತು. ಆದರೆ, ವಾಹನಗಳ ಸಂಚಾರದಿಂದ ರಸ್ತೆ ತುಂಬೆಲ್ಲಾ ಮಣ್ಣು ಹರಡಿ ವ್ಯಾಪಕ ಧೂಳು ಹರಡಿ ಪ್ರಯಾಣಿಕರು ಯಾತನೆ ಪಡುವಂತಾಗಿದೆ.

ಧೂಪದಂತೆ ಧೂಳು: ಅಪಾರ ಪ್ರಮಾಣದ ಧೂಳಿನಿಂದ ಬೈಕ್‌ ಸವಾರರು, ಪಾದಚಾರಿಗಳಿಗೆ ರಸ್ತೆಯೇ ಕಾಣದಂತಾಗುತ್ತದೆ. ವಾಹನಗಳು ಧೂಳಿನಿಂದ ಮೆತ್ತಿಕೊಂಡರೆ ಬಟ್ಟೆಗಳೆಲ್ಲ ಧೂಳಿನ ಮಜ್ಜನವಾಗುತ್ತದೆ. ರಸ್ತೆಯಲ್ಲಿ ಧೂಳು ಇದೆಯೋ ಅಥವಾ ಧೂಳಿನಲ್ಲಿಯೇ ರಸ್ತೆಗಳಿವೆಯೋ ಎಂಬ ಅನುಮಾನ ಜನರಲ್ಲಿ ಮೂಡಿಸಿದೆ. ಶರಣರ ನಾಡು ಅಕ್ಷರಶಃ ಧೂಳು ಪಟ್ಟಣವಾಗಿ ಪರಿವರ್ತನೆಗೊಂಡಿದೆ.

ADVERTISEMENT

ಎರಡು ತಿಂಗಳ ಹಿಂದೆ ಇದ್ದ ಮಳೆ ಪಟ್ಟಣದ ರಸ್ತೆಗಳನ್ನು ಕೆಸರಿನ ಗದ್ದೆಯಂತಾಗಿಸಿದ್ದವು. ಇದೀಗ ಬಿಸಿಲು ಬಿದ್ದ ಪರಿಣಾಮ ರಸ್ತೆಯಲ್ಲಿನ ಕೆಸರು ಒಣಗಿ ಹುಡಿ ಮಣ್ಣಾಗಿ ಧೂಳನೆಬ್ಬಿಸುತ್ತಿದೆ. ಬೆಳಗ್ಗೆ ಹಾಗೂ ಸಂಜೆಯ ಮಾಗಿಯ ಚಳಿಯಲ್ಲಿ ದಟ್ಟನೆಯ ಧೂಳು ಮಂಜಿನೊಂದಿಗೆ ಸೇರಿ ರಸ್ತೆ ಕಾಣದ ಸ್ಥಿತಿ ನಿರ್ಮಾಣವಾಗುತ್ತದೆ. ಒಂದು ಹಂತದಲ್ಲಿ ಕೆಸರು ಸಹಿಸಿಕೊಳ್ಳಬಹುದು. ಆದರೆ, ಈ ಧೂಳಿನ ಕಿರಿಕಿರಿ ಸಹಿಸಿಕೊಳ್ಳವುದು ಕಷ್ಟಸಾಧ್ಯ ಎನ್ನುತ್ತಿದ್ದಾರೆ ಜನರು.

ಜನರು ಮನೆ ಬಿಟ್ಟು ಹೊರ ಬರಬೇಕಾದರೆ, ತಲೆ, ಮುಖ ಮುಚ್ಚಿಕೊಂಡು ಹೊರಬೀಳುವುದು ಸಾಮಾನ್ಯವಾಗಿದೆ. ಹಿರಿಯರು, ಮಹಿಳೆಯರು, ಮಕ್ಕಳು ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ತಿರುಗಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಈ ಧೂಳು ಅನೇಕರಿಗೆ ಶ್ವಾಸಕೋಶ, ಚರ್ಮ ರೋಗ ಸೇರಿದಂತೆ ಹತ್ತಾರು ಕಾಯಿಲೆಗೆ ತುತ್ತಾಗುವಂತೆ ಮಾಡಿದ್ದು,ಧೂಳಿನ ಅಲರ್ಜಿಯಿಂದ ಬಳಲುತ್ತಿರುವರು ತೀವ್ರ ಸಂಕಟ ಅನುಭವಿಸುತ್ತಿದ್ದಾರೆ. ಅಸ್ತಮಾ, ಉಸಿರಾಟ ಸಮಸ್ಯೆಯಿಂದ ಜನ ಬಳಲುವಂತಾಗಿದೆ. ಇದೇ ಸ್ಥಿತಿ ಮುಂದುವರೆದರೆ ಜನರ ಆರೋಗ್ಯ ಮತ್ತಷ್ಟು ಹದಗೆಡುವ ಆತಂಕ ಎದುರಾಗಿದೆ. ಸಾರ್ವಜನಿಕರು ಹಿಡಿಶಾಪ ಹಾಕುತ್ತಲೇ ಧೂಳಿನ ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಪರಿಹಾರ ಮಾತ್ರ ಸಿಗುತ್ತಲೇ ಇಲ್ಲ.

ಜಂಟಿ ಕ್ರಮ ಅಗತ್ಯ: ರಸ್ತೆಯಲ್ಲಿ ತುಂಬಿಕೊಂಡ ಮಣ್ಣನ್ನು ತೆಗೆದು, ನಿಯಮಿತವಾಗಿ ರಸ್ತೆಗಳಿಗೆ ನೀರನ್ನು ಸಿಂಪರಿಸುವುದು ಸೇರಿದಂತೆ, ಅಕ್ರಮ ಮಣ್ಣು ತುಂಬಿಕೊಂಡು ತಿರುಗಾಡುವ ಬೃಹತ್ ವಾಹನಗಳು, ಕಬ್ಬು ತುಂಬಿದ ಟ್ರ್ಯಾಕ್ಟರ್, ಟ್ರಕ್, ಮಿತಿಮೀರಿದ ವಾಹನ ಸಂಚಾರದಿಂದ ಹೆಚ್ಚುತ್ತಿರುವ ವಾಯುಮಾಲಿನ್ಯ ರಸ್ತೆ ಅವಘಡ ತಪ್ಪಿಸಲು ಪಟ್ಟಣ ಪಂಚಾಯಿತಿ ಮತ್ತು ಪಿಡಬ್ಲ್ಯುಡಿ ಇಲಾಖೆ ಜಂಟಿಯಾಗಿ ಕ್ರಮ ವಹಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.