ವಿಜಯಪುರ:ಜಿಲ್ಲೆಯಲ್ಲಿ 100 ಹೆಕ್ಟೇರ್‌ನಷ್ಟು ರೇಷ್ಮೆ ಬೆಳೆಕ್ಷೇತ್ರವನ್ನು ವಿಸ್ತರಿಸಲು ಪೂರಕವಾದ ವಾತಾವರಣವಿದ್ದು, ಜಿಲ್ಲೆಯ ರೈತರು ರೇಷ್ಮೆ ಇಲಾಖೆಯಡಿ ಸಿಗುವ ಸೌಲಭ್ಯಗಳನ್ನು ಪಡೆಯಲು ಮುಂದೆ ಬರಬೇಕು ಎಂದುಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಹೇಳಿದರು.
ತಾಲ್ಲೂಕಿನ ನವರಸಪುರದಲ್ಲಿರುವ ರೇಷ್ಮೆ ಇಲಾಖೆಗೆ ಭೇಟಿ ನೀಡಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಭೆ ನಡೆಸಿ, ರೈತರಿಗೆ ರೇಷ್ಮೆ ಇಲಾಖೆಯಿಂದ ದೊರೆಯುವ ಸಹಾಯಧನ ಹಾಗೂ ಸೌಲಭ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಪ್ರಸ್ತುತ ಸಾಲಿನಲ್ಲಿ ಸ್ವ-ಸಹಾಯ ಸಂಘಗಳ ಮೂಲಕ ಹಿಪ್ಪು ನೇರಳೆ ನರ್ಸರಿ ಬೆಳೆಸಿ ಹೆಚ್ಚುವರಿಯಾಗಿ ಇನ್ನು 200 ಎಕರೆ ಹಿಪ್ಪುನೇರಳೆ ನಾಟಿ ವಿಸ್ತರಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಇಲಾಖೆಯ ಸಂಕೀರ್ಣದಲ್ಲಿ ಖಾಲಿ ಇರುವ ಜಾಗದಲ್ಲಿ ಹಿಪ್ಪುನೇರಳೆ ಮರಗಳನ್ನು ಬೆಳೆಸಬೇಕು. ಇಲಾಖೆಯ ಸುಪರ್ಧಿಯಲ್ಲಿರುವನಾಲ್ಕು ಕೇಂದ್ರಗಳಲ್ಲಿರುವ ಹಳೆಯ ನಿರುಪಯುಕ್ತ ರೇಷ್ಮೆ ನೂಲು ಬಿಚ್ಚಣಿಕಾ ಯಂತ್ರಗಳನ್ನು ಕೇಂದ್ರ ಕಚೇರಿಯಿಂದ ಅನುಮತಿ ಪಡೆದು ವಿಲೇವಾರಿಗೆ ಕ್ರಮ ವಹಿಸಲು ರೇಷ್ಮೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಹಾಯಧನ ಅನುಕೂಲ:
ರೇಷ್ಮೆ ಇಲಾಖೆ ಉಪನಿರ್ದೇಶಕ ಎಸ್.ಸಿದ್ದರಾಜು ಮಾತನಾಡಿ, ಸಾಮಾನ್ಯ ವರ್ಗದವ ಜನರಿಗೆ ಹಿಪ್ಪು ನೇರಳೆ ನಾಟಿ ಮಾಡಲು ಪ್ರತಿ ಎಕರೆಗೆ ₹ 37,500 ಮತ್ತು ಹಿಪ್ಪು ನೇರಳೆ ನರ್ಸರಿ ಮಾಡಲು ಪ್ರತಿ ಎಕರೆಗೆ ₹ 1,12,500 ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಜನರಿಗೆ ಹಿಪ್ಪು ನೇರಳೆ ನಾಟಿ ಮಾಡಲು ₹ 45 ಸಾವಿರ ಮತ್ತು ಹಿಪ್ಪು ನೇರಳೆ ನರ್ಸರಿ ಮಾಡಲು ಪ್ರತಿ ಎಕರೆಗೆ ₹ 1.35 ಲಕ್ಷ ಸಹಾಯಧನ ನೀಡಲಾಗುತ್ತದೆ ಎಂದರು.
ರೇಷ್ಮೆ ಬೆಳೆಗಾರರಿಗೆ ಉಚಿತವಾಗಿ ಸೋಂಕು ನಿವಾರಕಗಳನ್ನು ವಿತರಿಸಲಾಗುತ್ತದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಚಿಕ್ಕ ಹಿಡುವಳಿದಾರರು ಹಾಗೂ ಪ.ಜಾ ಮತ್ತು ಪ.ಪಂ ವರ್ಗದ ರೈತರಿಗೆ ಹಿಪ್ಪು ನೇರಳೆ ತೋಟ ಸ್ಥಾಪನೆಗೆ ಪ್ರತಿ ಎಕರೆಗೆ 221 ಮಾನವ ದಿನಗಳು, 2 ಮತ್ತು 3ನೇ ವರ್ಷದ ತೋಟಗಳ ನಿರ್ವಹಣೆಗೆ 163 ಮಾನವ ದಿನಗಳು, ಮರ ಪದ್ಧತಿ ಬೇಸಾಯಕ್ಕೆ ಪ್ರತಿ ಎಕರೆಗೆ 112 ಮಾನವ ದಿನಗಳು ಹಾಗೂ 2 ಮತ್ತು 3ನೇ ವರ್ಷದ ಮರ ಪದ್ಧತಿ ನಿರ್ವಹಣೆಗೆ ಪ್ರತಿ ಎಕರೆಗೆ 152 ಮಾನವ ದಿನಗಳು ಮತ್ತು ಹಿಪ್ಪು ನೇರಳೆ ನರ್ಸರಿ ಅಭಿವೃದ್ಧಿ ಪ್ರತಿ ಎಕರೆಗೆ 283 ಮಾನವ ದಿನಗಳನ್ನು ಕೆಲಸ ನಿರ್ವಹಿಸಲು ರೈತರಿಗೆ ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯ ಕೇಂದ್ರ ಪುರಸ್ಕೃತ ಯೋಜನೆಯಡಿ ರೇಷ್ಮೆ ಹುಳು ಸಾಕಾಣಿಕಾ ಮನೆಗೆ ಸಹಾಯಧನ, ತಾತ್ಕಾಲಿಕ ಶೆಡ್‌ಗೆ ಸಹಾಯಧನ, ದ್ವಿತಳಿ ಚಾಕಿ ವೆಚ್ಚ ಪ್ರತಿ 100 ಮೊಟ್ಟೆಗೆ ₹1 ಸಾವಿರ ಸಹಾಯಧನ, ಉತ್ತರ ಕರ್ನಾಟಕದ ರೇಷ್ಮೆ ಬೆಳೆಗಾರರಿಗೆ ದ್ವಿತಳಿ ಗೂಡು ಸಾಕಾಣಿಕೆ ಮಾಡಲು ಪ್ರತಿ ಕೆ.ಜಿ ಗೆ ₹ 10 ಸಹಾಯಧನ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರೇಷ್ಮೆ ಬೆಳೆಗಾರರಿಗೆ ಘಟಕದ ದರ ಹಾಗೂ ಅಳತೆಗನುಗುಣವಾಗಿ ಸಾಮಾನ್ಯ ರೈತರಿಗೆ ಶೇ 75 ರಷ್ಟು ಹಾಗೂ ಪ.ಜಾ ಹಾಗೂ ಪ.ಪಂ. ರೈತರಿಗೆ ಶೇ 90 ರಷ್ಟು ಸಹಾಯಧನ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ವಿಜಯಪುರ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಬಿ.ವೈ.ಬಿರಾದಾರ, ರೇಷ್ಮೆ ವಿಸ್ತರಣಾಧಿಕಾರಿ ಎಸ್.ಬಿ. ಬಿರಾದಾರ, ಕಚೇರಿ ಅಧೀಕ್ಷಕ ಎಸ್.ಎಂ. ಹಿರೇಮಠ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.