ADVERTISEMENT

ವಿಜಯಪುರ: ತೊಗರಿ ಖರೀದಿ ಕೇಂದ್ರ ಆರಂಭಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 6:50 IST
Last Updated 23 ನವೆಂಬರ್ 2025, 6:50 IST
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿಜಯಪುರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿಜಯಪುರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು   

ವಿಜಯಪುರ: ಮೆಕ್ಕೆಜೋಳ, ತೊಗರಿ ಸೇರಿದಂತೆ ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರ ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ವಿಪರಿತ ಮಳೆಯಿಂದಾಗಿ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು ಸಂಪೂರ್ಣ ನಷ್ಟಗೊಂಡಿರುವ ಹಿನ್ನೆಲೆಯಲ್ಲಿ ಜಂಟಿ ಸಮೀಕ್ಷೆ ಸಹ ನಡೆದಿದೆ.ಆದರೆ ಈ ಎಲ್ಲ ಪ್ರಕ್ರಿಯೆ ಮುಗಿದು 50 ದಿನ ಕಳೆದರೂ ರೈತರ ಖಾತೆಗೆ ಬಿಡಿಗಾಸು ಜಮಾ ಆಗಿಲ್ಲ. 2025-26 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಅನೇಕ ರೈತರು ಮೆಕ್ಕೆಜೋಳ ಬೆಳೆದಿದ್ದಾರೆ. ಆದರೆ ದಲ್ಲಾಳಿಗಳ ಹಾವಳಿಯಿಂದ ₹1,500 ರಿಂದ ₹1,850ರ ವರೆಗೆ ಮಾತ್ರ ಖರೀದಿಸುತ್ತಿದ್ದಾರೆ. ಕೂಡಲೇ ಸರ್ಕಾರ ಬೆಂಬಲ ಬೆಲೆಯೊಂದಿಗೆ ಖರೀದಿ ಕೇಂದ್ರ ಆರಂಭಿಸಬೇಕು, ತೊಗರಿಗೂ ಬೆಂಬಲ ಬೆಲೆ ಘೋಷಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಸಗರ ಮಾತನಾಡಿದರು. ರಾಜ್ಯ ಉಪಾಧ್ಯಕ್ಷ ಕಲ್ಲು ಸೋನ್ನದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ, ಮುಖಂಡರಾದ ಮಹಾದೇವ ಬನಸೋಡೆ, ಪ್ರಕಾಶ ತೆಲಿ, ಸಚಿನ ಜೇವರ್ಗಿ, ಸಿದ್ದು ಕುಂಬರ, ಶಿವು ಅಂಬಲಿ, ಸೀತಾರಮ ಭಜಂತ್ರಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.