ವಿಜಯಪುರ: ಕೋವಿಡ್‌ನಿಂದ ಉಸಿರಾಟದ ಸಮಸ್ಯೆ ಎದುರಾಗಿ ಬದುಕುಳಿಯುವ ಆಸೆ ಕಳೆದುಕೊಂಡಿದ್ದ ಅಪ್ಪ ಕೊನೆ ಗಳಿಗೆಯಲ್ಲೂ ನಮ್ಮ ಆರೋಗ್ಯದ ಬಗ್ಗೆಯೇ ವಿಚಾರಿಸುತ್ತಿದ್ದರು. ಮೇ 13 ರಂದು ಸಹಜವಾಗಿ ಮಾತನಾಡುತ್ತಲೇ ಉಸಿರು ನಿಲ್ಲಿಸಿದ್ದು, ಈಗಲೂ ಕಣ್ಣುಮುಂದೆ ಕಟ್ಟಿದಂತಿದೆ.
ಸರ್ಕಾರಿ ನೌಕರಿಯಲ್ಲಿ ಇದ್ದಾಗ ಕುಟುಂಬಕ್ಕೆ ಹೆಚ್ಚು ಸಮಯ ನೀಡಲು ಆಗುತ್ತಿರಲಿಲ್ಲ. ಆದರೆ, ನಿವೃತ್ತಿ ನಂತರ ಕುಟುಂಬಕ್ಕೆ ಅಂಟಿಕೊಂಡಿದ್ದ ಅವರಿಗೆ ಹೊರಜಗತ್ತಿನ ಪರಿವೇ ಇರಲಿಲ್ಲ.ಮನೆಗೆ ಹುಡುಕಾಡಿ ಜವಾರಿ ಕಾಳು ಕಡಿ, ಕಾಯಿಪಲ್ಲೆ, ಹಣ್ಣು ಹಂಪಲು ತರುವುದು ಅವರಿಗೆ ಇಷ್ಟವಾದ ಕೆಲಸವಾಗಿತ್ತು. ಮಕ್ಕಳ ಆರೋಗ್ಯಕ್ಕೆ ಏನು ಉತ್ತಮ ಎಂಬುದನ್ನು ಅವರೇ ನಿರ್ಧರಿಸುತ್ತಿದ್ದರು. ತಮ್ಮ ಅಲ್ಪಾದಾಯದಲ್ಲಿ ನಾಲ್ವರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ್ದಾರೆ. ಈಗ ಅಪ್ಪ ದೈಹಿಕವಾಗಿ ನಮ್ಮೊಂದಿಗೆ ಇಲ್ಲ. ಆದರೆ, ನಮ್ಮ ಕೆಲಸ, ನಡೆ, ನುಡಿಯಲ್ಲಿ ಅವರು ಜೊತೆ ಇದ್ದಾರೆ.
ಅಪ್ಪನ ಆಸರೆಯಲ್ಲಿ ಸುರಕ್ಷತೆ ಯಾವಾಗಲೂ ಖಾತರಿ ಇರುತ್ತಿತ್ತು. ನನಗೆ ಎರಡು ಸಲ ರಸ್ತೆ ಅಪಘಾತವಾಗಿತ್ತು. ಆಸ್ಪತ್ರೆಯಲ್ಲಿ ಅವರು ಮಾಡಿದ ಆರೈಕೆಯಿಂದ ನಾನು ಬದುಕಿದ್ದೇನೆ. ನನಗೆ ಮರುಜನ್ಮ ನೀಡಿದ ತಂದೆಯನ್ನು ನೆನಪಿಸಿಕೊಳ್ಳದ ದಿನಗಳಿಲ್ಲ.
-ಡಾ. ಮಂಜುನಾಥ .ಬಿ. ಹಂಚಿನಾಳ, ವಿಜಯಪುರ
ನಿರೂಪಣೆ: ಬಸವರಾಜ್ ಸಂಪಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.