
ವಿಜಯಪುರ: ಇಂಡಿಯ ಚಿನ್ನದ ವ್ಯಾಪಾರಿ ನಾಮದೇವ ಡಾಂಗೆ ಎಂಬುವವರಿಗೆ ಹಣಕ್ಕಾಗಿ ಜೀವ ಬೆದರಿಕೆ ಒಡ್ಡಿದ್ದ ಭೀಮಾ ತೀರದ ಮಹಾದೇವ ಸಾವುಕಾರ ಭೈರಗೊಂಡ ಎಂಬಾತನನ್ನು ಚಡಚಣ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
‘ಜುಲೈ 19ರಂದು ಮಹಾದೇವ ಸಾಹುಕಾರ ಎಂಬಾತ ಫೋನ್ ಮಾಡಿ, ಕೆರೂರ ಗ್ರಾಮದ ತೋಟದ ಮನೆಗೆ ಕರೆಯಿಸಿದ್ದಾರೆ. ಈ ಸಂದರ್ಭದಲ್ಲಿ ಸಾವಕಾರ ಹಾಗೂ ಆತನ ಸಹಚರರು ಕೂಡಿಕೊಂಡು ₹ 5 ಕೋಟಿ ಹಣ ಕೊಡಬೇಕು, ಇಲ್ಲವೇ 3 ಕೆ.ಜಿ.ಬಂಗಾರ ಕೊಡಬೇಕು. ಇಲ್ಲವಾದರೆ ನಿನ್ನ ಮನೆ ಹೊಕ್ಕು ಹಣೆಗೆ ಗುಂಡಿಟ್ಟು ಹೊಡೆಯುತ್ತೇವೆ’ ಎಂದು ಬೆದರಿಕೆ ಒಡ್ಡಿದ್ದರು ಎಂದು ಡಾಂಗೆ ದೂರಿನಲ್ಲಿ ತಿಳಿಸಿದ್ದರು.
‘ಈ ವಿಷಯವನ್ನು ಪೊಲೀಸರಿಗೆ ಅಥವಾ ಬೇರೆ ಯಾರಿಗಾದರೂ ತಿಳಿಸಿದರೆ ನಿನ್ನ ಅಂಗಡಿ, ಮನೆ, ಲೂಟಿ ಮಾಡಿಸುತ್ತೇನೆ’ ಎಂದು ಹೆದರಿಸಿದ್ದರು ಎಂದು ಡಾಂಗೆ ಚಡಚಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ಬೆನ್ನತ್ತಿದ ಚಡಚಣ ಪೊಲೀಸರು, ಆರೋಪಿ ಮಹಾದೇವ ಸಾವುಕಾರ ಭೈರಗೊಂಡನನ್ನು ಬಂಧಿಸಿ, ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ. ಇನ್ನುಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಕೋವಿಡ್ ದೃಢ: ಬಂಧಿತ ಆರೋಪಿ ಮಹಾದೇವ ಸಾವುಕಾರ ಭೈರಗೊಂಡಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಆರೋಪಿಯನ್ನು ಜೈಲಿನಲ್ಲಿ ಪ್ರತ್ಯೇಕವಾಗಿ ಇರಲಿಸಲಾಗಿದೆ. ಆರೋಪಿಯ ಬಂಧನ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರು ಪರೀಕ್ಷೆಗೆ ಒಳಗಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.