ADVERTISEMENT

ಪಂಚಲಕ್ಷ ಹೆಜ್ಜೆಗಳ ಪಾದಯಾತ್ರೆ ಜ.14ರಿಂದ

ಲಿಂಗಾಯತ ಪಂಚಮಸಾಲಿಗಳಿಗೆ 2 ‘ಎ’ ಮೀಸಲಾತಿಗಾಗಿ ಹೋರಾಟ; ಬಸವಜಯ ಮೃತ್ಯುಂಜಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 11:45 IST
Last Updated 5 ಜನವರಿ 2021, 11:45 IST
ವಿಜಯಪುರದಲ್ಲಿ ಮಂಗಳವಾರ ಪಂಚಲಕ್ಷ ಪಾದಯಾತ್ರೆ ಕರಪತ್ರಗಳನ್ನು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಿಡುಗಡೆಗೊಳಿಸಿದರು
ವಿಜಯಪುರದಲ್ಲಿ ಮಂಗಳವಾರ ಪಂಚಲಕ್ಷ ಪಾದಯಾತ್ರೆ ಕರಪತ್ರಗಳನ್ನು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಿಡುಗಡೆಗೊಳಿಸಿದರು   

ವಿಜಯಪುರ: ಲಿಂಗಾಯತ ಪಂಚಮಸಾಲಿ ಸಮಾಜವನ್ನು ರಾಜ್ಯ ಸರ್ಕರ 2 ‘ಎ’ ಹಾಗೂ ಲಿಂಗಾಯತ ಸಮಾಜವನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಸೇರ್ಪಡಿಸುವಂತೆ ಒತ್ತಾಯಿಸಿ ಜನವರಿ 14 ರಿಂದ ಕೂಡಲಸಂಗಮದ ಪೀಠದಿಂದ ವಿಧಾನಸೌಧದ ಆಡಳಿತ ಪೀಠದ ವರೆಗೆ ಪಂಚಲಕ್ಷ ಪಾದಯಾತ್ರೆ ನಡೆಸುವುದಾಗಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಪಾದಯಾತ್ರೆ ಕರಪತ್ರಗಳನ್ನು ಬಿಡುಗಡೆಗೊಳಿಸಿ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾದಯಾತ್ರೆಯ ಆರಂಭದ ದಿನದಂದು ಸಮಾಜದ ಒಂದು ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ಉಳಿದ ದಿನಗಳಂದು ಪ್ರತಿ ದಿನ ಐದು ಸಾವಿರ ಜನ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಕೂಡಲಸಂಗಮದಿಂದ ಆರಂಭವಾಗುವ ಪಾದಯಾತ್ರೆ ಪ್ರತಿ ದಿನ 20 ಕಿ.ಮೀ.ಕ್ರಮಿಸಲಿದೆ. ಇಳಕಲ್‌, ಕುಷ್ಟಗಿ, ಯಲಬುರ್ಗಾ,ಕೊಪ್ಪಳ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹರಿಹರ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ಸುಮಾರು ಒಂದು ತಿಂಗಳು ಪಾದಯಾತ್ರೆ ನಡೆಯಲಿದೆ ಎಂದು ಹೇಳಿದರು.

ADVERTISEMENT

ಜನವರಿ 14ರ ಒಳಗಾಗಿ ಸರ್ಕಾರ ನಮ್ಮ ಹಕ್ಕೊತ್ತಾಯಗಳಿಗೆ ಸ್ಪಂದಿಸಬೇಕು.ಇಲ್ಲದಿದ್ದರೆ ಮುಂದೆ ನಡೆಯುವ ಎಲ್ಲ ರೀತಿಯ ಉಗ್ರ ಹೋರಾಟಗಳಿಗೆ ಸರ್ಕಾರವೇ ಜವಾಬ್ದಾರಿಯಾಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ವಿಶ್ವಾಸವಿದೆ. ಅವರಿಂದಲೇ ನಮ್ಮ ಬೇಡಿಕೆ ಈಡೇರುವ ಭರವಸೆ ಇದೆ ಎಂದು ಹೇಳಿದರು.

2 ‘ಎ’ ಮೀಸಲಾತಿಗಾಗಿ 2008ರಿಂದ ಹೋರಾಟ ನಡೆಸುತ್ತಿದ್ದೇವೆ. 2012ರಲ್ಲಿ ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಯಿತು. ಆದರೂ ಸರ್ಕಾರ ಸ್ಪಂದಿಸಲಿಲ್ಲ. 2020 ಅಕ್ಟೋಬರ್‌ನಲ್ಲಿ ಮತ್ತೊಮ್ಮೆ ಸುವರ್ಣ ಸೌಧದ ಮುಂಭಾಗ ಉಪವಾಸ ಸತ್ಯಾಗ್ರಹ ಕೈಗೊಂಡಾಗ ಸ್ವತಃ ಮುಖ್ಯಮಂತ್ರಿಗಳೇ ದೂರವಾಣಿ ಕರೆ ಮಾಡಿ ಹೋರಾಟ ಕೈಬಿಡುವಂತೆ ಮನವಿ ಮಾಡಿದರು. ಉಪವಾಸ ಅಂತ್ಯಗೊಳಿಸುವ ಸಂದರ್ಭದಲ್ಲಿ ನವೆಂಬರ್‌ 28ರ ಅಂತಿಮ ಗಡುವು ನೀಡಿ, ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುವ ಎಚ್ಚರಿಕೆ ನೀಡಲಾಗಿತ್ತು ಎಂದು ತಿಳಿಸಿದರು.

ಪ್ರಮುಖ ಪಾತ್ರ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಲ್ಲಿ ಪಂಚಮಸಾಲಿ ಸಮಾಜದ ಪಾತ್ರ ಮುಖ್ಯವಾಗಿದೆ. ಮೀಸಲಾತಿ ಕೊಟ್ಟರೆ ಸಮಾಜಕ್ಕೆ ಮುಖ್ಯಮಂತ್ರಿ ಸ್ಥಾನ ಕೊಟ್ಟಷ್ಟು, ಸಾವಿರ ಕೋಟಿ ಹಣ ಕೊಟ್ಟಿರುವುದಕ್ಕಿಂತ ಹೆಚ್ಚು ಖುಷಿಯಾಗುತ್ತಿದೆ ಎಂದು ಹೇಳಿದರು.

ಯತ್ನಾಳ ಒಂಟಿ ಸಲಗ: ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡುವಂತೆ, ಅನ್ಯಾಯ ಮಾಡದಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಧ್ವನಿ ಎತ್ತಿದ್ದಾರೆಯೇ ಹೊರತು ವೈಯಕ್ತಿಕ ಉದ್ದೇಶದಿಂದಲ್ಲ. ಅವರೊಬ್ಬ ಒಂಟಿ ಸಲಗ ಇದ್ದಂತೆ. ಅವರು ಎತ್ತಿದ ಎಲ್ಲ ವಿಷಯಗಳಿಗೆ ಸರ್ಕಾರ ಸ್ಪಂದಿಸಿರುವುದನ್ನು ಗಮನಿಸಬಹುದು ಎಂದು ಶ್ರೀಗಳು ಹೇಳಿದರು.

ಸಮಾಜದ ಮುಖಂಡರಾದಸಂಗಮೇಶ್‌ ಬಬಲೇಶ್ವರ, ಬಿ.ಎಂ.ಪಾಟೀಲ್‌, ಮಲ್ಲಿಕಾರ್ಜುನ ಹಿರೇಕೊಪ್ಪ, ಸೋಮಶೇಖರ ಆಲ್ಯಾಳ, ಅಮರೇಶ ನಾಗೂರ, ಡಾ.ಬಸನಗೌಡ ಪಾಟೀಲ್‌, ದಾನೇಶ್ವರ ಅವಟಿ, ಎಸ್‌.ಆರ್‌.ಬುಕ್ಕಣ್ಣಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

***
ಸಣ್ಣಪುಟ್ಟ ವಿಷಯಗಳಿಗೆ ಯಾರೇ ಟ್ವೀಟ್‌ ಮಾಡಿದರೂ ಸ್ಪಂದಿಸುವ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೂ ಸ್ಪಂದಿಸಲಿ.
–ಬಸವಜಯ ಮೃತ್ಯುಂಜಯ ಸ್ವಾಮೀಜಿ, ಪೀಠಾಧ್ಯಕ್ಷ, ಲಿಂಗಾಯತ ಪಂಚಮಸಾಲಿ ಪೀಠ, ಕೂಡಲಸಂಗಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.