ADVERTISEMENT

ಗುಮ್ಮಟನಗರಿಯಲ್ಲಿ ಗಾಂಧೀಜಿ ಹೆಜ್ಜೆ ಗುರುತು...

ವಿಜಯಪುರಕ್ಕೆ ನಾಲ್ಕು ಬಾರಿ ಭೇಟಿ ನೀಡಿದ್ದ ಮಹಾತ್ಮ

ಬಸವರಾಜ ಸಂಪಳ್ಳಿ
Published 1 ಅಕ್ಟೋಬರ್ 2020, 19:30 IST
Last Updated 1 ಅಕ್ಟೋಬರ್ 2020, 19:30 IST
ವಿಜಯಪುರ ನಗರದ ಹೃದಯ ಭಾಗ ಗಾಂಧಿ ಚೌಕದಲ್ಲಿ ಇರುವ ಮಹಾತ್ಮನ ಪ್ರತಿಮೆ  ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರ ನಗರದ ಹೃದಯ ಭಾಗ ಗಾಂಧಿ ಚೌಕದಲ್ಲಿ ಇರುವ ಮಹಾತ್ಮನ ಪ್ರತಿಮೆ  ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಯಪುರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ‘ಗುಮ್ಮಟ ನಗರಿ’ ವಿಜಯಪುರಕ್ಕೆ ನಾಲ್ಕು ಬಾರಿ ಭೇಟಿ ನೀಡಿ, ಇಲ್ಲಿಯ ಸಾವಿರಾರು ಜನರನ್ನು ಸ್ವಾತಂತ್ರ್ಯ ಸಂಗ್ರಾಮ ಮತ್ತು ಅಸ್ಪೃಶ್ಯತಾ ನಿವಾರಣಾ ಆಂದೋಲನದಲ್ಲಿ ತೊಡಗಿಕೊಳ್ಳುವಂತೆ ಪ್ರೇರಣಿ ನೀಡಿರುವುದು ಇತಿಹಾಸ.

ಹೌದು, ಗಾಂಧೀಜಿ ಅವರು 1918, 1921, 1927 ಮತ್ತು 1934ರಲ್ಲಿ ಹೀಗೆ ಒಟ್ಟು ನಾಲ್ಕು ಬಾರಿ ವಿಜಯಪುರಕ್ಕೆ ಭೇಟಿ ನೀಡಿ, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವುದು ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ.

1918ರ ಆಗಸ್ಟ್‌ 5ರಂದು ಪ್ರಥಮ ಬಾರಿಗೆ ಬಸವನಾಡಿಗೆ ಭೇಟಿ ನೀಡಿದ್ದ ಅವರು, ಮುಂಬೈ ಪ್ರಾಂತ್ಯದ ರಾಜಕೀಯ ಪರಿಷತ್‌ ಸಭೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

1921ರ ಮೇ 28ರಂದು ಅಸಹಕಾರ ಚಳವಳಿಯ ಪ್ರಚಾರಕ್ಕೆಂದು ಎರಡನೇ ಬಾರಿಗೆ ಭೇಟಿ ನೀಡಿದ್ದರು. 1927ರಲ್ಲಿ ಖಾದಿ ಪ್ರಚಾರಕ್ಕಾಗಿ ಹಾಗೂ 1934 ರಂದು ಅಸ್ಪೃಶ್ಯತಾ ನಿವಾರಣಾ ಯಾತ್ರೆಯ ಅಂಗವಾಗಿ ಭೇಟಿ ನೀಡಿದ್ದ ಗಾಂಧೀಜಿ ಅವರು, ಜಿಲ್ಲೆಯ ಹೊನವಾಡ, ತಿಕೋಟಾ, ತೊರವಿಗೆ ಭೇಟಿ ನೀಡಿ, ಜಿಲ್ಲೆಯ ಜನತೆಯಲ್ಲಿ ಅಸ್ಪೃಶ್ಯತೆ ಬಗ್ಗೆ ಹಾಗೂ ಸ್ವಾತಂತ್ರ್ಯ ಚಳವಳಿಯ ಬಗ್ಗೆ ಕಿಚ್ಚನ್ನು ಹಚ್ಚಿದ್ದರು.

ಹೊನವಾಡ ಗ್ರಾಮದ ಅಸ್ಪೃಶ್ಯರ ಕೇರಿಗೆ ಭೇಟಿ ನೀಡಿದ್ದ ಗಾಂಧೀಜಿ, ‘ನಾವೆಲ್ಲರೂ ದೇವರ ಮಕ್ಕಳು, ನಮ್ಮಲ್ಲಿ ಭೇದ–ಭಾವ ಸಲ್ಲದು, ಉಚ್ಛ–ನೀಚ, ಬಡವ–ಬಲ್ಲಿದ ಎನ್ನುವ ತಾರತಮ್ಯ ಕೂಡದು. ಅಸ್ಪೃಶ್ಯತೆ ಮಹಾಪಾಪ. ಅದನ್ನು ತೊಡೆದು ಹಾಕಲು ಎಲ್ಲರೂ ಪಣ ತೊಡಬೇಕು’ ಎಂದು ಕರೆ ನೀಡಿದ್ದರು.

1934ರಂದು ಗುಮ್ಮಟನಗರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗಾಂಧೀಜಿ ಅವರು ಸರೋಜಿನಿ ನಾಯ್ಡು ಜೊತೆಗೂಡಿ ವಿಶ್ವ ಪ್ರಸಿದ್ಧ ಗೋಳಗುಮ್ಮಟವನ್ನು ವೀಕ್ಷಿಸಿದ್ದರು.

ಮರು ದಿನ ಕೊಲ್ಹಾರಕ್ಕೆ ಭೇಟಿ ನೀಡಿದ್ದ ಗಾಂಧೀಜಿ ಅವರನ್ನು ನೋಡಲು ಮತ್ತು ಅವರ ಮಾತುಗಳನ್ನು ಆಲಿಸಲು ಸಾವಿರಾರು ಜನರು ನೆರೆದಿದ್ದರು. ಈ ಸಂದರ್ಭದಲ್ಲಿ ಕಸ್ತೂರ ಬಾ ಕೂಡ ಇದ್ದರು.

ವಿಜಯಪುರದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ‘ಪದ್ಮಶ್ರೀ’ ಕಾಕಾ ಕಾರಖಾನೀಸ ಮತ್ತು ಕೌಜಲಗಿ ಶ್ರೀನಿವಾಸ ರಾಯರು ಮಹಾತ್ಮ ಗಾಂಧೀಜಿಯನ್ನು ಜಿಲ್ಲೆಗೆ ಕರೆತರುವಲ್ಲಿ ಹಾಗೂ ಕಾರ್ಯಕ್ರಮ ಸಂಘಟಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು.

ಗಾಂಧೀಜಿ ಜಿಲ್ಲೆಗೆ ಭೇಟಿ ನೀಡಿದ ಮತ್ತು ಜನರನ್ನು ಉದ್ದೇಶಿಸಿ ಮಾತನಾಡಿರುವ ಅಂಶವನ್ನು ಸ್ವಾತಂತ್ರ್ಯ ಹೋರಾಟಗಾರರಾದ ಶಂಕರರಾವ್‌ ದೇಶಪಾಂಡೆ, ಗಂಗಾಧರ ರಾವ್‌ ದೇಶಪಾಂಡೆ ಅವರು ತಮ್ಮ ಆತ್ಮಚರಿತ್ರೆಯಲ್ಲಿಪ್ರಸ್ತಾಪಿಸಿರುವುದಾಗಿ ಪತ್ರಕರ್ತ, ಗಾಂಧಿ ಪ್ರೇಮಿ ನಿಲೇಶ ಬೇನಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.