ADVERTISEMENT

ವಿಜಯಪುರ: ಗಣೇಶಗೆ ಭಕ್ತರಿಂದ ಅದ್ದೂರಿ ವಿದಾಯ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2024, 15:51 IST
Last Updated 13 ಸೆಪ್ಟೆಂಬರ್ 2024, 15:51 IST
ವಿಜಯಪುರ ನಗರದ ಜೋರಾಪುರ ಪೇಠನ ಶಂಕರಲಿಂಗ ಗಜಾನನ ಮಂಡಳಿಯ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಗಮನ ಸೆಳೆದ ನಾಸಿಕ್‌ ಡೋಲ್‌ ಪ್ರದರ್ಶನ
ವಿಜಯಪುರ ನಗರದ ಜೋರಾಪುರ ಪೇಠನ ಶಂಕರಲಿಂಗ ಗಜಾನನ ಮಂಡಳಿಯ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಗಮನ ಸೆಳೆದ ನಾಸಿಕ್‌ ಡೋಲ್‌ ಪ್ರದರ್ಶನ   

ವಿಜಯಪುರ: ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಸಾರ್ವಜನಿಕ ಗಣೇಶೋತ್ಸವ ಮೂರ್ತಿಗಳನ್ನು ಏಳನೇ ದಿನವಾದ ಶುಕ್ರವಾರ ಅದ್ಧೂರಿ ಮೆರವಣಿಗೆ ಮೂಲಕ ಕೊಂಡೊಯ್ದು, ವಿಸರ್ಜನೆ ಮಾಡಲಾಯಿತು.

ನಗರದ ವಿವಿಧ ಬಡಾವಣೆ, ಕಾಲೊನಿ, ಓಣಿಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣಪನ ಮೂರ್ತಿಗಳನ್ನು ಸಾರ್ವಜನಿಕರು ಬಾಜಾ ಭಜಂತ್ರಿ, ಡಿಜೆ ಸಂಗೀತ, ನೃತ್ಯ ವೈವಿಧ್ಯದೊಂದಿಗೆ ಸಿದ್ದೇಶ್ವರ ಗುಡಿ, ಗಾಂಧಿಚೌಕ್‌, ಶಿವಾಜಿ ವೃತ್ತದ ಮೂಲಕ ಮೆರವಣಿಗೆಯಲ್ಲಿ ಕೊಂಡೊಯ್ದು ಮಹಾನಗರ ಪಾಲಿಕೆಯಿಂದ ನಿರ್ಮಿಸಿರುವ ಕೃತಕ ಹೊಂಡದಲ್ಲಿ ವಿಸರ್ಜಿಸುವ ಮೂಲಕ ಗಣಪನಿಗೆ ಭಕ್ತಿಪೂರ್ವಕ ವಿದಾಯ ಹೇಳಿದರು.

ಗಣಪತಿ ಬಪ್ಪ ಮೊರಯಾ, ಜೈ ಗಣೇಶ, ಜೈ ಗಣೇಶ ಎಂದು ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಪಟಾಕಿಗಳು ಸದ್ದು ಮಧ್ಯರಾತ್ರಿಯವರೆಗೆ ಕೇಳುತ್ತಲೇ ಇತ್ತು.

ADVERTISEMENT

ಡಿಜೆಗಳ ಸದ್ದು, ಹಾಡುಗಳಿಗೆ ಯುವಕರ ಗುಂಪು ಹೆಜ್ಜೆ ಹಾಕುತ್ತಲೇ ಇತ್ತು. ಪರಸ್ಪರ ಗುಲಾಲು ಎರಚಿ ಸಂಭ್ರಮಿಸಿದರು. ಮೆರವಣಿಗೆ ಮಾರ್ಗದುದ್ದಕ್ಕೂ ಪಟಾಕಿಗಳ ಸಿಡಿತ ಜೋರಾಗಿತ್ತು. ರಸ್ತೆಯ ಬದಿಗಳಲ್ಲಿ ಕಾದು ನಿಂತಿದ್ದ ಭಕ್ತರು ಗಣೇಶನ ಮೆರವಣಿಗೆ  ವೀಕ್ಷಿಸಿದರು.

ನಗರದ ಜೋರಾಪುರಪೇೆಠ ಶಂಕರಲಿಂಗ ಗಜಾನನ ಮಂಡಳಿಯ ಸದಸ್ಯರು ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ವಿಶೇಷ ಕಲಾ ಪ್ರದರ್ಶನದೊಂದಿಗೆ ಎಲ್ಲರ ಗಮನ ಸೆಳೆದರು. ಸುಮಾರು ನೂರು ಜನರ ತಂಡ ಆಕರ್ಷಕ ನಾಸಿಕ್‌ ಡೋಲ್‌, ವಾರಕರಿ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು.

ಸಿದ್ದೇಶ್ವರ ಗುಡಿ ಎದುರಿನ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳನ್ನು ಸ್ವಾಮಿ ವಿವೇಕಾನಂದ ಸೇನೆ ವತಿಯಿಂದ ಸನ್ಮಾನಿಸಲಾಯಿತು.

ಗಣೇಶನ ವಿಸರ್ಜನಾ ಮೆರವಣಿಗೆ ತಡರಾತ್ರಿ ವರೆಗೆ ನಡೆಯಿತು. ಮೆರವಣಿಗೆ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ಮಾರ್ಗ ಬದಲಾವಣೆ ಮಾಡಿದ್ದರಿಂದ ವಾಹನ ಸವಾರರು ಹೈರಣಾದರು. ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.

ವಿಜಯಪುರ ನಗರದ ಜೋರಾಪುರ ಪೇಠನ ಶಂಕರಲಿಂಗ ಗಜಾನನ ಮಂಡಳಿಯ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಮಹಿಳೆಯರ ವಾರ್ಕರಿ ತಾಳದ ಹೆಜ್ಜೆ ಕುಣಿತ ಗಮನ ಸೆಳೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.