ವಿಜಯಪುರ: ಮುದ್ದೇಬಿಹಾಳ ತಾಲ್ಲೂಕಿನ ಕುದುರೆಸಾಲವಾಡಗಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಇಬ್ಬರು ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ ಕೊಲೆಗೈದು ಬಾವಿಗೆ ಎಸೆದಿರುವ ಪ್ರಕರಣದ ಕುರಿತು ತನಿಖೆ ನಡೆಸಿ ಐದು ದಿನಗಳ ಒಳಗಾಗಿ ವರದಿ ನೀಡುವಂತೆ ಕರ್ನಾಟಕ ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ಆಯೋಗದ ಸದಸ್ಯ ಎಚ್.ವೆಂಕಟೇಶ ದೊಡ್ಡೇರಿ ಅವರು ವಿಜಯಪುರ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
ಈ ಸಂಬಂಧ ವಿಜಯಪುರ ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿ ಆಯುಕ್ತರಿಗೆ ಪತ್ರ ಬರೆದಿರುವ ಅವರು, ಈ ಕೂಡಲೇ ವಾಸ್ತವಾಂಶದ ಬಗ್ಗೆ ಜಿಲ್ಲಾಧಿಕಾರಿಗಳೇ ಖುದ್ದಾಗಿ ಸ್ಥಳ ತನಿಖೆ ಮಾಡಿ ವರದಿ ನೀಡುವಂತೆ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿಯ ಸುಮಾರು 14 ಮತ್ತು 15 ವರ್ಷದ ಇಬ್ಬರು ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ ಕೊಲೆಗೈದು ಬಾವಿಗೆ ಎಸೆದಿರುವುದು ಅತ್ಯಂತ ಅಮಾನವೀಯ ಘಟನೆಯಾಗಿದೆ. ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಹೀನ ಕೃತ್ಯವಾಗಿದೆ. ಇದು ಸಂವಿಧಾನದ ಆಶಯಗಳಿಗೆ ಮತ್ತು ಕಾನೂನಿಗೆ ವಿರುದ್ಧವಾಗಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಪ್ರಕರಣ ದಾಖಲು:
ಕುದುರೆಸಾಲವಾಡಗಿ ಗ್ರಾಮದ ಇಬ್ಬರು ಬಾಲಕಿಯರನ್ನು ಕೊಲೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಂದೆ ಬಸವನ ಬಾಗೇವಾಡಿ ಠಾಣೆಗೆ ಶುಕ್ರವಾರ ರಾತ್ರಿ ದೂರು ನೀಡಿದ್ದಾರೆ.
ಕುದುರೆಸಾಲವಾಡಗಿ ಗ್ರಾಮದ ಹಬ್ಬು ಮೈಹಿಬೂಬಸಾಬ ಗುಳಬಾಳ ಎಂಬಾತ ಕಳೆದ ಐದಾರು ತಿಂಗಳಿಂದ ಹೆಣ್ಣು ಮಕ್ಕಳ ಹಿಂದೆ ಬಿದ್ದು, ಕಿರುಕುಳ ನೀಡುತ್ತಿದ್ದ. ಪ್ರೀತಿ ಮಾಡುತ್ತೇನೆ ಎಂದು ನಂಬಿಸಿ ಇಬ್ಬರನ್ನು ಪುಸಲಾಯಿಸಿ ಮೇ 12ರಂದು ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ ಇಬ್ಬರನ್ನು ಕೊಲೆಗೈದು ಬಾವಿಗೆ ತಳ್ಳಿದ್ದಾನೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ತನಿಖೆ ಪ್ರಗತಿ
ಪ್ರಕರಣ ತನಿಖೆ ನಡೆದಿದ್ದು, ಇದುವರೆಗೂ ಘಟನೆಗೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ ಎಂದು ಡಿವೈಎಸ್‌ಪಿ ಅರುಣಕುಮಾರ ಕೋಳೂರ ತಿಳಿಸಿದರು.
ಬಂಧನಕ್ಕೆ ಆಗ್ರಹ
ಪರಿಶಿಷ್ಟ ಜಾತಿಗೆ ಸೇರಿದ ಹೆಣ್ಣು ಮಕ್ಕಳನ್ನು ಅತ್ಯಾಚಾರಗೈದು ಕೊಲೆ ಮಾಡಿರುವ ಆರೋಪಿಯನ್ನು ಪೊಲೀಸರು ತಕ್ಷಣ ಬಂಧಿಸಿಬೇಕು, ಆರೋಪಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಚಿತ್ರದುರ್ಗದ ಮಾದರ ಚನ್ನಯ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.