ADVERTISEMENT

ಸರ್ಕಾರ ಈರುಳ್ಳಿ ಬೆಳೆಗಾರರ ರಕ್ಷಣೆಗೆ ನಿಲ್ಲಬೇಕಿದೆ: ಚೂನಪ್ಪ‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 2:25 IST
Last Updated 2 ಮಾರ್ಚ್ 2026, 2:25 IST
ಬೆಳೆ ನಷ್ಟ ಅನುಭವಿಸಿದ ಕೊಲ್ಹಾರ ತಾಲ್ಲೂಕಿನ ಮಟ್ಟಿಹಾಳ ಗ್ರಾಮದ ರೈತ ಮಂಜುನಾಥ ಅರಕೇರಿ ಅವರ ಜಮೀನಿಗೆ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚೂನಪ್ಪ ಪೂಜಾರಿ ಹಾಗೂ ಇನ್ನಿತರ ರೈತ ಮುಖಂಡರು ಭೇಟಿ ನೀಡಿದರು
ಬೆಳೆ ನಷ್ಟ ಅನುಭವಿಸಿದ ಕೊಲ್ಹಾರ ತಾಲ್ಲೂಕಿನ ಮಟ್ಟಿಹಾಳ ಗ್ರಾಮದ ರೈತ ಮಂಜುನಾಥ ಅರಕೇರಿ ಅವರ ಜಮೀನಿಗೆ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚೂನಪ್ಪ ಪೂಜಾರಿ ಹಾಗೂ ಇನ್ನಿತರ ರೈತ ಮುಖಂಡರು ಭೇಟಿ ನೀಡಿದರು   

ಬಸವನಬಾಗೇವಾಡಿ: ‘ಪದೇಪದೇ ದರ ಕುಸಿತದಿಂದ ಬೀದಿ ಪಾಲಾಗುವ ಪರಿಸ್ಥಿತಿಯಲ್ಲಿರುವ ಉಳ್ಳಾಗಡ್ಡಿ ಬೆಳೆಗಾರರಿಗೆ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಉತ್ತಮ ಬೆಲೆ ನಿಗದಿಪಡಿಸಿ ರೈತರ ರಕ್ಷಣೆಗೆ ನಿಲ್ಲುವ ಕೆಲಸ ಮಾಡಬೇಕು’ ಎಂದು ರಾಜ್ಯ ರೈತ ಸಂಘ ಹಸಿರುಸೇನೆಯ ರಾಜ್ಯ ಘಟಕದ ಅಧ್ಯಕ್ಷ ಚೂನಪ್ಪ‌ ಪೂಜಾರಿ ಆಗ್ರಹಿಸಿದ್ದಾರೆ.

ಸಮೀಪದ ಕೊಲ್ಹಾರ ತಾಲ್ಲೂಕಿನ ಮಟ್ಟಿಹಾಳ ಗ್ರಾಮದ ರೈತ ಮಂಜುನಾಥ ಅರಕೇರಿ ಅವರ ತೋಟಕ್ಕೆ ಭಾನುವಾರ ಭೇಟಿ ನೀಡಿದ ವೇಳೆ ಮಾತನಾಡಿ, ‘ಬಹುಸಂಖ್ಯಾತರಾಗಿರುವ ರೈತಾಪಿ ವರ್ಗ ಕಷ್ಟಪಟ್ಟು ಬೆಳೆಯುವ ಪ್ರತಿಯೊಂದು ಬೆಳೆಗೂ ಹೋರಾಟದ‌ ಮೂಲಕವೇ ಸೂಕ್ತ ಬೆಂಬಲ ಬೆಲೆ ಪಡೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ರೈತ ಸಾಕಷ್ಟು ಹೈರಾಣಾಗಿ ಉಳ್ಳಾಗಡ್ಡಿ ಬೆಳೆಯಲು ಎಕರೆಗೆ ಒಂದು ಲಕ್ಷ ಖರ್ಚು ಮಾಡಬೇಕಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ರೈತರಿಗೆ ಲಾಭ ದೂರದ‌ ಮಾತು, ಕನಿಷ್ಠ ಖರ್ಚಾದಷ್ಟು ಹಣವೂ ಸಿಗದಂತಾಗಿದೆ. ಈಗಾಗಲೇ ಉಳ್ಳಾಗಡ್ಡಿ ಬೆಳೆ ಕಟಾವಾಗಿ ಮಾರುಕಟ್ಟೆಗೆ ಬರುತ್ತಿದೆ. ಹಾಗಾಗಿ ನಷ್ಟದಲ್ಲಿರುವ ರೈತರಿಗೆ ಸರ್ಕಾರ ಸೂಕ್ತ ಬೆಲೆ ನಿಗದಿಪಡಿಸಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.

ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಹೇಶ ಸುಬೇದಾರ ಮಾತನಾಡಿ, ‘ಪ್ರತಿ ಸಲ ರೈತರ ಮಾಲು ಕೈಗೆ ಬಂದಾಗಲೇ ಕೆಲ ವ್ಯಾಪಾರಸ್ಥರು ಏಕಾಏಕಿ ದರ ಕಡಿಮೆ ಮಾಡುವ ಹೊಂಚು ಹಲವಾರು ವರ್ಷಗಳಿಂದ ಮಾಡುತ್ತಿದ್ದಾರೆ. ಉಳ್ಳಾಗಡ್ಡಿ ಬೆಳೆಗೆ ಮಾರುಕಟ್ಟೆಯಲ್ಲಿ ಕೆಜಿಗೆ ಕನಿಷ್ಠ ₹20ರಿಂದ ₹30 ದರ ಸಿಗಲೇಬೇಕು. ಅಂದಾಗ ನಾಲ್ಕು ತಿಂಗಳ‌ ಪರಿಶ್ರಮಕ್ಕೆ‌ ನ್ಯಾಯ ಸಿಕ್ಕಂತಾಗುತ್ತದೆ. ಈ‌ ಭಾಗದ ಶಾಸಕ ಶಿವಾನಂದ ಪಾಟೀಲರೇ ರಾಜ್ಯದ ಎಪಿಎಂಸಿ ಸಚಿವರಾಗಿದ್ದು, ಈ‌ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ಉಳ್ಳಾಗಡ್ಡಿ ಬೆಳೆಗೆ ಸರ್ಕಾರವೇ ಯೋಗ್ಯ ಬೆಲೆ ನೀಡಿ ಖರೀದಿಸುವ ಕೆಲಸ ಮಾಡಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ರೈತ ಸಂಘದ ತಾಲ್ಲೂಕು‌ ಘಟಕದ ಅಧ್ಯಕ್ಷ ಸೋಮು ಬಿರಾದಾರ, ರೈತ ಮುಖಂಡರಾದ ಗೋಪಾಲ ಕಾಖಂಡಕಿ, ಕಲ್ಲಪ್ಪ ಗಿಡ್ಡಪಗೊಳ, ಶ್ರೀಶೈಲ ಬಾಡಗಿ, ಮುದಕಣ್ಣ ಚಲವಾದಿ, ಸತ್ಯಪ್ಪ ಕುಳ್ಳೂಳಿ, ಯಲಪ್ಪ. ಗುಳಗೊಂಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.