ADVERTISEMENT

ಪಂಚಾಯ್ತಿ ಗದ್ದುಗೆಗೆ ಪ್ರವಾಸ ಭಾಗ್ಯ!

ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣು; ಕುದುರೆ ವ್ಯಾಪಾರ ಜೋರು

ಬಸವರಾಜ ಸಂಪಳ್ಳಿ
Published 20 ಜನವರಿ 2021, 14:13 IST
Last Updated 20 ಜನವರಿ 2021, 14:13 IST

ವಿಜಯಪುರ: ಜಿಲ್ಲೆಯಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಯಾಗುತ್ತಿರುವಂತೆ ಆ ಸ್ಥಾನಗಳ ಮೇಲೆ ಕಣ್ಣಿಟ್ಟಿರುವ ಪ್ರಬಾವಿಗಳು ಬಹುಮತ ಸಾಬೀತಿಗಾಗಿ ಕುದುರೆ ವ್ಯಾಪಾರದಲ್ಲಿ ತೊಡಗಿದ್ದಾರೆ.

ಖರೀದಿಯಾದ ಸದಸ್ಯರಿಗೆ ಪ್ರವಾಸದ ನೆಪದಲ್ಲಿ ಮೈಸೂರು, ಮಂಗಳೂರು, ಗೋವಾ, ಹೈದರಾಬಾದ್‌, ಮುಂಬೈ ಸುತ್ತಾಡಿಸತೊಡಗಿದ್ದಾರೆ. ಬೇರೆಯವರ ಸಂಪರ್ಕಕ್ಕೂ ಸಿಗದಂತೆ ಅವರ ಮೊಬೈಲ್‌ ಫೋನ್‌ ಸ್ವಿಚ್‌ ಆಫ್‌ ಮಾಡಿಸಿ ತಮ್ಮ ಬಳಿ ಇರಿಸಿಕೊಂಡಿದ್ದಾರೆ.

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಒಂದೇ ಕೆಟಗರಿಯ ಇಬ್ಬರು, ಮೂವರು ಇರುವ ಗ್ರಾಮ ಪಂಚಾಯ್ತಿಗಳಲ್ಲಿ ಈ ರಾಜಕೀಯ ಪ್ರಹಸನ ಜೋರಾಗಿ ನಡೆದಿದೆ. ಆದರೆ, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಿಗದಿಯಾದ ಕೆಟಗರಿಗೆ ಸಂಬಂಧಿಸಿದಂತೆ ಒಬ್ಬೊಬ್ಬರೇ ಇರುವಲ್ಲಿ ಇದಕ್ಕೆ ಅವಕಾಶವಿಲ್ಲದಂತಾಗಿದೆ.

ADVERTISEMENT

ಚುನಾವಣೆಯಲ್ಲಿ ತಾವು ಮಾಡಿರುವ ಖರ್ಚನ್ನು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿಂದ ಉಳಿದವರು ವಸೂಲಿ ಮಾಡತೊಡಗಿದ್ದಾರೆ. ಅಷ್ಟೇ ಅಲ್ಲ 30 ತಿಂಗಳ ಆಡಳಿತಾವಧಿಯಲ್ಲಿ ತಾವು ಹೇಳಿದ ಕೆಲಸಗಳು ಆಗಬೇಕು, ಇಂತಿಷ್ಟು ಕಮಿಷನ್‌ ನೀಡಬೇಕು ಎಂಬ ಮೌಖಿಕ ಒಪ್ಪಂದಗಳು ಆಗಿವೆ.

‘ಮೀಸಲಾತಿ ಅಂತಿಮವಾದ ಬಳಿಕ ನಿರೀಕ್ಷೆಯಂತೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳು ಹಣ ಖರ್ಚು ಮಾಡಿದವರಿಗೆ ಲಭಿಸದೇ ಇದ್ದರೆ ಯಾರಿಗೆ ನಿಗದಿಯಾಗುತ್ತದೆಯೋ ಆ ಸದಸ್ಯರು ಈ ಖರ್ಚನ್ನು ಭರಿಸಬೇಕಾಗುತ್ತದೆ ಎಂಬ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಹಳ್ಳಿ ರಾಜಕೀಯದ ಮೇಲೆ ತಮ್ಮ ಹಿಡಿತ ಇಟ್ಟುಕೊಳ್ಳಲು ಹಾಗೂ ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಾಲಿ, ಮಾಜಿ ಶಾಸಕರು ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿಗೆ ಆರ್ಥಿಕ ಸಹಕಾರ ನೀಡಿ, ಬೆಂಬಲಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

‘ಚುನಾವಣೆಗೂ ಮುನ್ನವೇ ಜಿಲ್ಲೆಯಕೆಲವು ಗ್ರಾಮ ಪಂಚಾಯ್ತಿಗಳಲ್ಲಿ ಸದಸ್ಯ ಸ್ಥಾನಗಳು ಹಣಕ್ಕೆ ಹರಾಜಾಗಿದ್ದವು. ಇದೀಗ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳು ಮಾರಾಟವಾಗತೊಡಗಿವೆ. ಗ್ರಾಮ ಸ್ವರಾಜ್ಯದ ಮಾತುಗಳು ಕೇವಲ ಬೊಗಳೆ ಎಂಬುದು ಇದರಿಂದ ಸಾಬೀತಾಗಿದೆ. ಇಂತವರಿಂದ ಹಳ್ಳಿಗಳ ಅಭಿವೃದ್ಧಿ ಅಸಾಧ್ಯ’ ಎಂದು ಹೆಸರು ಹೇಳಲು ಇಚ್ಛಿಸದ ರಾಜಕೀಯ ಮುಖಂಡರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.