ವಿಜಯಪುರ: ಅನಧಿಕೃತ ಬಡಾವಣೆಗಳ ನಿವೇಶನ, ಮನೆಗಳಿಗೆ ಬಿ-ಖಾತೆ ನೀಡುವ ಮಹತ್ವಾಕಾಂಕ್ಷಿ ಅಭಿಯಾನ ರಾಜ್ಯ ಸರ್ಕಾರ ಆರಂಭಿಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಗುಂಟ್ಲಾ ಪ್ಲಾಟ್‌ಗಳಿಗೆ ಬಿ ಖಾತೆ ಸಿಗುವುದು ಮರೀಚಿಕೆಯಾಗಿದೆ. ಇದರಿಂದ ನಗರದ ಸುಮಾರು 39 ಸಾವಿರ ಮನೆ/ಆಸ್ತಿಗಳ ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
‘ಬಿ ಖಾತೆ’ ಪಡೆಯಬೇಕೆಂದರೆ ಮನೆ ಅಥವಾ ಆಸ್ತಿ ಮಾಲೀಕರು ನೋಂದಾಯಿತ ದಾಖಲೆ ಪತ್ರ ನೀಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಯಾವುದೇ ಮನೆ ಅಥವಾ ನಿವೇಶನಕ್ಕೆ ‘ಬಿ ಖಾತೆ’ ಸಿಗಬೇಕಿದ್ದಲ್ಲಿ ಅಂತಹ ಆಸ್ತಿಗಳು ಮೊದಲು ನೋಂದಣಿ ಆಗಿರಬೇಕು. ಆಸ್ತಿಯ ಕ್ರಯಪತ್ರ, ವಿಭಾಗಪತ್ರ, ದಾನಪತ್ರ ದಂತಹ ಅಧಿಕೃತ ದಾಖಲೆಗಳು ಇರುವ ಸ್ವತ್ತುಗಳಿಗಷ್ಟೇ ಸಿಗಲಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ್ ಮೆಕ್ಕಳಕಿ ತಿಳಿಸಿದರು.
‘ವಿಜಯಪುರ ನಗರದಲ್ಲಿ ಗುಂಟಾ ಆಸ್ತಿಗಳ ಸಂಖ್ಯೆ ಅಪಾರ ಸಂಖ್ಯೆಯಲ್ಲಿ ಇದ್ದು, ಬಾಂಡ್ ಪೇಪರ್, ನೋಟರಿ, ಹಕ್ಕುಬಿಟ್ಟಪತ್ರ, ಭಕ್ಷೀಸ್ ಪತ್ರ(ದಾನ ಪತ್ರ)ಗಳನ್ನು ಮಾಡಿಕೊಂಡಿದ್ದಾರೆ. ಅಧೀಕೃತವಾಗಿ ನೋಂದಣಿ ಮಾಡಿಕೊಂಡಿಲ್ಲ. ಸರ್ಕಾರದ ನಿಯಮಾವಳಿ ಪ್ರಕಾರ ಇವುಗಳಿಗೆ ಬಿ ಖಾತೆ ನೀಡಲು ಆಗದು’ ಎಂದು ಹೇಳಿದರು.
‘ಗುಂಟ್ಲಾ ಪ್ಲಾಟ್‌ಗಳಿಗೆ ಬಿ ಖಾತೆ ನೀಡುವ ಸಂಬಂಧ ಇರುವ ತೊಡಕುಗಳ ನಿವಾರಣೆಗಾಗಿ ಈಗಾಗಲೇ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ಅವರು ನಗರಾಭಿವೃದ್ಧಿ ಇಲಾಖೆ ಸಚಿವರು ಹಾಗೂ ಸರ್ಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ಹುಡುಕುವುದಾಗಿ ತಿಳಿಸಿದ್ದಾರೆ’ ಎಂದರು.
ಈ ಪ್ರದೇಶದಲ್ಲೇ ಹೆಚ್ಚು:
ವಿಜಯಪುರ ನಗರದ ಬೇಗಂ ತಲಾಬ್‌ನಿಂದ ಆರಂಭಗೊಂಡು ರಿಂಗ್ ರೋಡ್, ಪಾಲಿಕೆ ಸುತ್ತಮುತ್ತ, ಕೀರ್ತಿನಗರ, ಜಿಲ್ಲಾಧಿಕಾರಿ ಕಚೇರಿ ಹಿಂಭಾಗ, ಜುಮ್ಮಾ ಮಸೀದಿ, ನವಬಾಗ ಸುತ್ತಮುತ್ತ ಪ್ರದೇಶ, ಹಮಾಲರ ಕಾಲೊನಿ ವ್ಯಾಪ್ತಿಯಲ್ಲಿ ಗುಂಟಾ ಪ್ಲಾಟ್‌ಗಳು ಅತ್ಯಧಿಕ ಪ್ರಮಾಣದಲ್ಲಿ ಇವೆ.
ಪಾಲಿಕೆಗೆ ನಷ್ಠ:
ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 39 ಸಾವಿರ ಗುಂಟಾ ಪ್ಲಾಟ್ ಮಾಲೀಕರು ದಶಕಗಳಿಂದ ಯಾವುದೇ ತೆರಿಗೆಯನ್ನು ಕಟ್ಟದೇ ನೀರು, ವಿದ್ಯುತ್, ರಸ್ತೆ, ಕಸ ವಿಲೇವಾರಿ ಸೇರಿದಂತೆ ಸಕಲ ಸವಲತ್ತು ಪುಕ್ಕಟೆಯಾಗಿ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಮಹಾನಗರ ಪಾಲಿಕೆಗೆ ವಾರ್ಷಿಕ ಸುಮಾರು ₹20 ಕೋಟಿಗೂ ಅಧಿಕ ನಷ್ಠವಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ.
‘ಪಾಲಿಕೆಯಲ್ಲಿ ಸದ್ಯ ಅಂದಾಜು ₹38 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗುತ್ತಿದೆ. ಒಂದು ವೇಳೆ ಗುಂಟಾ ಪ್ಲಾಟ್‌ಗಳಿಗೆ ಖಾತೆ ಸಿಕ್ಕರೆ ಸುಮಾರು ₹15 ರಿಂದ ₹20 ಕೋಟಿ ಹೆಚ್ಚುವರಿ ತೆರಿಗೆ ಲಭಿಸಲಿದೆ. ಇದರಿಂದ ನಗರ ಅಭಿವೃದ್ಧಿಗೆ ಸಹಾಯವಾಗುತ್ತದೆ. ಕಾರಣ ರಾಜ್ಯ ಸರ್ಕಾರ ಗುಂಟ್ಲಾ ಪ್ಲಾಟ್‌ಗಳಿಗೆ ಬಿ ಖಾತೆ ನೀಡಲು ಅಗತ್ಯ ಕ್ರಮಕೈಗೊಳ್ಳಬೇಕು’ ಎಂಬ ಆಗ್ರಹ ಕೇಳಿಬಂದಿದೆ.
ಎ-ಖಾತೆ ಬಿ ಖಾತೆ ಎಂದರೇನು?
ಎಲ್ಲ ಅಧಿಕೃತ ಆಸ್ತಿ ಮಾಲಿಕರು ತಮ್ಮ ಆಸ್ತಿಗೆ ಸಂಬಂಧಿಸಿ ಖರೀದಿ ಪತ್ರ ದಾನ ಪತ್ರ ವಿಭಾಗ ಪತ್ರ ಹಕ್ಕು ಪತ್ರ ಚಾಲ್ತಿಯಲ್ಲಿರುವ ಋಣಭಾರ ನಿವೇಶನ ಬಿಡುಗಡೆ ಪತ್ರ ಪ್ರಸ್ತುತ ಸಾಲಿನ ಆಸ್ತಿ ಹಾಗೂ ನಿರೀನ ಕರ ರಸೀದಿ ಇತರ ಸಂಬಂಧಿಸಿದ ಪೂರಕ ದಾಖಲೆಗಳೊಂದಿಗೆ ಮಹಾನಗರ ಪಾಲಿಕೆ ಕಂದಾಯ ವಿಭಾಗಕ್ಕೆ ತೆರಳಿ ಅರ್ಜಿ ಸಲ್ಲಿಸಿ ಎ-ಖಾತೆ ಡಿಜಿಟಲ್ ಪತ್ರ ಪಡೆಯಬಹುದು. ಸಮರ್ಪಕ ದಾಖಲೆ ಇಲ್ಲದ ಅನಧಿಕೃತ ನಿವೇಶನಗಳ ಮಾಲೀಕರು ಇ-ಖಾತೆಯಿಂದ ವಂಚಿತರಾಗಬಾರದು ಎಂದು ಸರ್ಕಾರವು ಅನಧಿಕೃತ ಆಸ್ತಿಗಳಿಗೆ ಸಹ ಬಿ-ಖಾತೆ ನೀಡಲು ಉದ್ದೇಶಿಸಿದೆ. ಅನಧಿಕೃತ ಆಸ್ತಿ ಮಾಲೀಕರು ಚಾಲ್ತಿ ಆಸ್ತಿ ತೆರಿಗೆ ಹಾಗೂ ನೀರಿನ ಕರವನ್ನು ಪಾವತಿಸಿ ತಮ್ಮ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಅರ್ಜಿ ಸಲ್ಲಿಸಿ ಬಿ-ಖಾತೆಯನ್ನು ಮಾಡಿಸಿಕೊಳ್ಳಬೇಕು. ಈ ಯೋಜನೆಗೆ ಮೂರು ತಿಂಗಳ ಕಾಲಾವಕಾಶವಿದೆ.
4918 ಆಸ್ತಿಗಳಿಗೆ ಖಾತೆ ವಿತರಣೆ
ವಿಜಯಪುರ ಮಹಾನಗರ ಪಾಲಿಕೆ ಸೇರಿದಂತೆ 5 ಪುರಸಭೆ 9 ಪಟ್ಟಣ ಪಂಚಾಯ್ತಿ ಸೇರಿದಂತೆ ಜಿಲ್ಲೆಯಲ್ಲಿರುವ 15 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಫೆಬ್ರುವರಿ 18ರಿಂದ ಮಾರ್ಚ್ 6 ರ ವರೆಗೆ 4476 ಆಸ್ತಿಗಳಿಗೆ ‘ಎ ಖಾತೆ’ ಹಾಗೂ 442 ಆಸ್ತಿಗಳಿಗೆ ‘ಬಿ ಖಾತೆ’ ಸೇರಿದಂತೆ ಒಟ್ಟು 4918 ಖಾತೆಗಳನ್ನು ಹೊಸದಾಗಿ ವಿತರಿಸಲಾಗಿದೆ ಎಂದು ವಿಜಯಪುರ ಜಿಲ್ಲಾ ನಗರ ಯೋಜನಾ ಕೋಶದ ಯೋಜನಾ ನಿರ್ದೇಶಕ ಬಿ.ಸೌದಾಗರ ‘ಪ್ರಜಾವಾಣಿ’ಗೆ ತಿಳಿಸಿದರು. ಗುಂಟಾ ಪ್ಲಾಟ್‌ಗಳ ಬಗ್ಗೆ ಇದುವರೆಗೆ ವಿಜಯಪುರ ಮಹಾನಗರ ಪಾಲಿಕೆಯಿಂದ ಯಾವುದೇ ಪತ್ರ ಬಂದಿಲ್ಲ. ಸರ್ಕಾರದ ನಿಯಮಾವಳಿ ಪ್ರಕಾರ ಸದ್ಯ ಅಧಿಕೃತ ನೋಂದಣಿಯಾದ ಆಸ್ತಿಗಳಿಗೆ ಮಾತ್ರ ಎ ಮತ್ತು ಬಿ ಖಾತೆ ವಿತರಿಸುತ್ತಿದ್ದೇವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.