ADVERTISEMENT

ಬಿಜೆಪಿಯಿಂದ ದ್ವೇಷದ ರಾಜಕಾರಣ: ರಾಠೋಡ

ಜೆಡಿಎಸ್‌ನಿಂದ ಬಿಜೆಪಿಗೆ ಅನುಕೂಲಕರ ವಾತಾವರಣ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 10:44 IST
Last Updated 4 ಏಪ್ರಿಲ್ 2022, 10:44 IST
ಪ್ರಕಾಶ ರಾಠೋಡ
ಪ್ರಕಾಶ ರಾಠೋಡ   

ವಿಜಯಪುರ: ಯಾವೊಂದು ಅಭಿವೃದ್ಧಿ ಕೆಲಸ ಮಾಡಲಾಗದ ರಾಜ್ಯ ಬಿಜೆಪಿ ಸರ್ಕಾರಕ್ಕೆ ಮುಂಬರುವ ಚುನಾವಣೆ ವೇಳೆ ಜನರ ಬಳಿ ಹೋಗಲು ಯಾವುದೇ ವಿಷಯವಿಲ್ಲದ ಕಾರಣ ಧಾರ್ಮಿಕ ವಿಷಯಗಳನ್ನು ಎತ್ತಿಕೊಂಡು, ಸೌಹಾರ್ದ ವಾತಾವರಣವನ್ನು ಕೆಡಿಸುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಪ್ರಕಾಶ ರಾಠೋಡ ಆರೋಪಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರಿಂದ ಬಂಡವಾಳ ಹೂಡಿಕೆದಾರರು, ಕಂಪನಿಗಳು ರಾಜ್ಯದಿಂದ ಹೊರನಡೆಯುತ್ತಿವೆ ಎಂದು ದೂರಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಡಳಿತ ವೈಕರಿ ನೋಡಿದರೆ ಅವರ ತಂದೆ, ಸಮಾಜವಾದಿ ಸಿದ್ಧಾಂತದ ರಾಜಕಾರಣಿಯಾಗಿದ್ದ ದಿ. ಎಸ್‌.ಆರ್‌.ಬೊಮ್ಮಾಯಿ ಅವರ ಆತ್ಮದ ಶಾಂತಿಗೆ ಭಗ್ನವಾಗದೇ ಇರದು ಎಂದು ಲೇವಡಿ ಮಾಡಿದರು.

ADVERTISEMENT

ರಾಜ್ಯದಲ್ಲಿ ಬಿಜೆಪಿಗೆ ಅನುಕೂಲಕರ ವಾತಾವರಣ ಸೃಷ್ಟಿ ಮಾಡುತ್ತಿರುವುದೇ ಜೆಡಿಎಸ್‌ ಮತ್ತು ಎಚ್‌.ಡಿ.ಕುಮಾರಸ್ವಾಮಿ ಎಂದು ಹೇಳಿದರು.

ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಅನುಷ್ಠಾನಕ್ಕೆ ಕನಿಷ್ಠ ಒಂದು ಲಕ್ಷ ಕೋಟಿ ಅನುದಾನದ ಅಗತ್ಯವಿದೆ. ಆದರೆ, ಬಜೆಟ್‌ನಲ್ಲಿ ಕೇವಲ ₹ 5 ಸಾವಿರ ಕೋಟಿ ನೀಡಿರುವುದು ನೋಡಿದರೆ ಈ ಭಾಗವನ್ನು ಬಿಜೆಪಿ ಸರ್ಕಾರ ನಿರ್ಲಕ್ಷ್ಯ ಮಾಡಿರುವುದು ಕಂಡುಬರುತ್ತದೆ ಎಂದು ಟೀಕಿಸಿದರು.

ವಿಜಯಪುರ ನಗರಕ್ಕೆ 24X7 ಕುಡಿಯುವ ನೀರು ಪೂರೈಸುವ ಯೋಜನೆ ಕುಂಟುತ್ತಾ ಸಾಗಿದೆ. ನಗರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ ಎಂದು ಆರೋಪಿಸಿದರು.

ವಿಜಯಪುರದಲ್ಲಿ ಕೃಷಿ ವಿಶ್ವವಿದ್ಯಾಲಯ ಆರಂಭಿಸಬೇಕು, ಒಳನಾಡು ಮೀನುಗಾರಿಕೆಗೆ ಆದ್ಯತೆ ನೀಡಬೇಕು, ಫುಡ್‌ ಪಾರ್ಕ್‌ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡಬೇಕು, ಸೈಕ್ಲಿಂಗ್‌ ವೆಲೋಡ್ರೋಮ್‌ ಶೀಘ್ರ ಪೂರ್ಣಗೊಳಿಸಬೇಕು, ಪ್ರತ್ಯೇಕ ಕ್ರೀಡಾಂಗಣ ನಿರ್ಮಾಣ ಮಾಡಬೇಕು ಎಂದು ಸದನದಲ್ಲಿ ಸರ್ಕಾರದ ಗಮನ ಸೆಳೆದೆ. ಆದರೆ, ಸರ್ಕಾರದಿಂದ ತೃಪ್ತಿಕರ ಉತ್ತರ ಲಭಿಸಲಿಲ್ಲ ಎಂದು ಹೇಳಿದರು.

ಮುಖಂಡರಾದ ಚಾಂದ್‌ ಸಾಬ್‌ ಗಡಗಲಾವ್‌, ಸಾಹೇಬಗೌಡ ಬಿರಾದಾರ, ವಸಂತ ಹೊನಮೋಡೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

***

ಬಿಜೆಪಿ ಆಡಳಿತಾವಧಿಯಲ್ಲಿ ವಿಜಯಪುರ ಜಿಲ್ಲೆಗೆ ಒಂದೇ ಒಂದು ಸಚಿವ ಸ್ಥಾನವೂ ಲಭಿಸಲಿಲ್ಲ. ಅಲ್ಲದೇ, ಬಜೆಟ್‌ನಲ್ಲಿ ಅನುದಾನವೂ ಲಭಿಸದೇ ಮಲತಾಯಿ ಧೋರಣೆ ಅನುಸರಿಸಲಾಗಿದೆ

–ಪ್ರಕಾಶ ರಾಠೋಡ,ವಿಧಾನ ಪರಿಷತ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.