ADVERTISEMENT

ಜೋಶಿ ವಿರುದ್ಧ ಎಚ್‌ಡಿಕೆ ಹೇಳಿಕೆ ಖಂಡನೀಯ

ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಡಾ.ಬಾಬು ರಾಜೇಂದ್ರ ನಾಯಿಕ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2023, 13:07 IST
Last Updated 10 ಫೆಬ್ರುವರಿ 2023, 13:07 IST
ಡಾ.ಬಾಬು ರಾಜೇಂದ್ರ ನಾಯಿಕ
ಡಾ.ಬಾಬು ರಾಜೇಂದ್ರ ನಾಯಿಕ   

ವಿಜಯಪುರ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಗುರಿಯಾಗಿಸಿಕೊಂಡು ಬ್ರಾಹ್ಮಣ ಸಮಾಜದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಡಾ.ಬಾಬು ರಾಜೇಂದ್ರ ನಾಯಿಕ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಮಾಡುವ ಭರದಲ್ಲಿ ಯಾವುದೇ ಜಾತಿ, ಸಮುದಾಯ, ಧರ್ಮವನ್ನು ಗುರಿ ಮಾಡಿ ಮಾತನಾಡುವ ಮೂಲಕ ಸೌಹಾರ್ದಕ್ಕೆ ಧಕ್ಕೆಯಾಗುವ ಬಾಲಿಶ ಹೇಳಿಕೆ ನೀಡುವುದರಿಂದ ಕುಮಾರಸ್ವಾಮಿ ದೂರ ಇರಬೇಕು ಎಂದು ಎಚ್ಚರಿಕೆ ನೀಡಿದರು.

ಸನಾತನ ಭಾರತದಲ್ಲಿ ಹೆಜ್ಜೆ, ಹೆಜ್ಜೆಗೂ ಹತ್ತು ಹಲವು ಜಾತಿ, ಪಂಥ, ಧರ್ಮಗಳ ಅನುಯಾಯಿಗಳಿದ್ದಾರೆ. ನಾಸ್ತಿಕರು, ಆಸ್ತಿಕರೂ ಇದ್ದಾರೆ. ಅವರವರು ಅವರವರ ಧರ್ಮಗಳ ಆಚರಣೆ ಮಾಡುತ್ತಿದ್ದಾರೆ. ಅದು ಅವರವರಿಗೆ ಬಿಟ್ಟ ವಿಷಯ. ಇದನ್ನು ಮತ್ತೊಬ್ಬರು ಟೀಕಿಸುವುದು, ವಿರೋಧಿಸುವುದು ಸರಿಯಲ್ಲ ಎಂದರು.

ADVERTISEMENT

ಸ್ವತಂತ್ರ ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಸಾಮಾರ್ಥ್ಯಕ್ಕೆ ಅನುಗುಣವಾಗಿ ಯಾವ ಹುದ್ದೆಗಾದರೂ ಏರಲು ಮುಕ್ತ ಸ್ವಾತಂತ್ರ್ಯ ಇದೆ ಎಂಬುದನ್ನು ಕುಮಾರಸ್ವಾಮಿ ಅರಿತುಕೊಳ್ಳಬೇಕು ಬ್ರಾಹ್ಮಣ, ದಲಿತ, ಒಕ್ಕಲಿಗ, ಲಿಂಗಾಯತ ಸೇರಿದಂತೆ ಯಾವುದೇ ಜಾತಿಯವರು ಮುಖ್ಯಮಂತ್ರಿಯಾಗಲು ಹಕ್ಕು, ಅವಕಾಶ ಇದೆ. ಆದರೆ, ಅವರು ಗಳಿಸಿರುವ ಯೋಗ್ಯತೆ, ಸಾಮಾರ್ಥ್ಯದಿಂದ ಆ ಸ್ಥಾನ ಆಲಂಕರಿಸಬಹುದಾಗಿದೆ. ಈ ಹಿಂದೆ ಬ್ರಾಹ್ಮಣ ಸಮಾಜದವರೇ ಆದ ದಿ.ಗುಂಡೂರಾವ್‌ ಮತ್ತು ರಾಮಕೃಷ್ಣ ಹೆಗ್ಗಡೆ ಮುಖ್ಯಮಂತ್ರಿ ಆಗಿದ್ದಾರೆ. ಮುಂದೆಯೂ ಈ ಸಮಾಜದವರು ಮುಖ್ಯಮಂತ್ರಿಯಾದರೆ ಅಭ್ಯಂತರ ಏಕೆ ಎಂದು ಪ್ರಶ್ನಿಸಿದರು.

ಸಮಾಜದಲ್ಲಿ ಸಾಮಾರಸ್ಯ ಕೆಡಿಸುವ ಕೆಲಸ ಕುಮಾರಸ್ವಾಮಿಯವರು ಮಾಡಬಾರದು. ಸಹೋದರತೆಯಿಂದ ಬಾಳಿ, ಬದುಕಲು ಅವಕಾಶ ಕಲ್ಪಿಸಬೇಕು. ಯೋಗ್ಯತೆ ಇದ್ದವರು ಮುಖ್ಯಮಂತ್ರಿ ಆಗುತ್ತಾರೆ. ಅದಕ್ಕೆ ತಡೆಯೊಡ್ಡಲು ಯಾರಿಂದಲೂ ಸಾಧ್ಯವಿಲ್ಲ. ಅವರವರ ಹಣೆ ಬರಹ ಎಂದು ಹೇಳಿದರು.

ನೀವು ಮುಖ್ಯಮಂತ್ರಿ ಆಗುತ್ತೀರಿ ಎಂದು ಕುಮಾರಸ್ವಾಮಿಯವರೇ ನಿಮಗೆ ಗೊತ್ತಿತ್ತಾ? ರಾಜಕೀಯ ಪರಿಸ್ಥಿತಿಯಲ್ಲಿ ನೀವು ಲಾಟರಿ ಹೊಡೆದು ಮುಖ್ಯಮಂತ್ರಿ ಆಗಿರುವುದನ್ನು ಮರೆತಿದ್ದೀರಾ? ಎರಡನೇ ಬಾರಿಗೆ ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದು ನಿಮಗೆ ಕನಸು ಬಿದ್ದಿತ್ತಾ? ಮೂರನೇ ಬಾರಿಗೆ ಮತ್ತೆ ಮುಖ್ಯಮಂತ್ರಿಯಾಗುವ ತಿರುಕನ ಕನಸು ಕಾಣುತ್ತಿದ್ದೀರಿ. ನಿಮ್ಮ ರಾಜಕೀಯ ತೆವಲಿಗಾಗಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದರು.

ರಾಜ್ಯದ ಮುಖ್ಯಮಂತ್ರಿಯಾದವರು ನೀವು, ರಾಜಕೀಯದ ತೆವಲಿಗಾಗಿ ಮಾತನಾಡುವಾಗ ಅಳೆದು, ತೂಗಿ ಮಾತನಾಡಬೇಕು. ಯಾರ ಮನಸ್ಸಿಗೂ, ಧರ್ಮಕ್ಕೂ, ಜಾತಿಗೂ ನೋವಾಗದಂತೆ ಮಾತನಾಡಬೇಕು ಎಂದರು.

ಮಹಾನಗರ ಪಾಲಿಕೆ ಸದಸ್ಯರಾದ ಅಖಿಲ ಭಾರತ ಬಂಜಾರ ಸೇವಾ ಸಂಘದ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಜಾಧವ, ದೇಶ ರಕ್ಷಕ ಪಡೆ ಸಂಸ್ಥಾಪಕ ಅಧ್ಯಕ್ಷ ರೋಹನ್‌ ಆಪ್ಟೆ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ರಾಜ್‌ಪಾಲ್‌ ಚವ್ಹಾಣ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

**

ಚುನಾವಣೆ, ರಾಜಕೀಯ ಲಾಭಕ್ಕಾಗಿ ಯಾವುದೇ ಜಾತಿ, ಧರ್ಮವನ್ನು ಗುರಿಯಾಗಿಸಿ ಹೇಳಿಕೆ ನೀಡುವುದು ಸರಿಯಲ್ಲ.
–ಡಾ.ಬಾಬು ರಾಜೇಂದ್ರ ನಾಯಿಕ, ಜಿಲ್ಲಾ ಸಂಚಾಲಕ, ಬಿಜೆಪಿ ವೈದ್ಯಕೀಯ ಪ್ರಕೋಷ್ಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.