ADVERTISEMENT

ಗಣಪತಿ ಹಬ್ಬಕ್ಕೆ ನಿರ್ಬಂಧ ವಿಧಿಸುವುದನ್ನು ಸಹಿಸೋದಿಲ್ಲ: ಬಸನಗೌಡ ಪಾಟೀಲ ಯತ್ನಾಳ್

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 15:35 IST
Last Updated 21 ಆಗಸ್ಟ್ 2021, 15:35 IST
ಶಾಸಕ ಬಸನಗೌಡ ಪಾಟೀಲ ಯತ್ನಾಳ
ಶಾಸಕ ಬಸನಗೌಡ ಪಾಟೀಲ ಯತ್ನಾಳ   

ವಿಜಯಪುರ: ಕೋವಿಡ್‌ ನೆಪದಲ್ಲಿ ಗಣಪತಿ ಹಬ್ಬದ ಮೇಲೆ, ಹಿಂದೂ ಆಚರಣೆಗಳ ಮೇಲೆ ನಿರ್ಬಂಧ ಹೇರುವುದನ್ನು ವಿಜಯಪುರದಲ್ಲಿ ಸಹಿಸಿಕೊಳ್ಳುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬಹಳ ಅಂದ್ರ ನನಗೆ ಗುಂಡು ಹಾಕಬಹುದು. ನನಗೆ ಗುಂಡು ಹಾಕಿದರೆ ಇಡೀ ಕರ್ನಾಟಕದ ತುಂಬಾ ಹತ್ತೈತಿ. ಸತ್ತರೂ ಹೆಸರು ತೆಗೆದುಕೊಂಡು ಹೋಗಬೇಕೆಂತೆ. ಈ ಸಂಬಂಧ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.

‘ಗಣಪತಿ ಹಬ್ಬ ಮಾಡಬೇಡಿ, ದೀಪಾವಳಿ ಮಾಡಬೇಡಿ, ಸಂಕ್ರಾಂತಿ ಮಾಡಬೇಡಿ ಎಂದು ನೀವೇ ಹೇಳಿದರೆ ಹೇಗೆ. ಇಳಿಕೆಯವರಿಗೆ ಮಾಡಲು ಬಿಟ್ಟು ನಮಗೆ ಮಾಡಬೇಡಿ ಎಂದರೆ ಅದು ನಡೆಯುವುದಿಲ್ಲ ಎಂದು ಮುಖ್ಯಮಂತ್ರಿಗೆ ಹೇಳಿದ್ದೇನೆ’ ಎಂದರು.

ADVERTISEMENT

‘ಗಣಪತಿ ಹಬ್ಬಕ್ಕೆ ಯಾರೂ ತೊಂದರೆ ಮಾಡಬಾರದು ಎಂದು ಮುಖ್ಯಮಂತ್ರಿ ಅವರು ಆದೇಶ ಮಾಡಿದ್ದಾರೆ. ಹೀಗಾಗಿ ಯಾರೂ ಅಂಜದೇ ಹಬ್ಬ ಆಚರಿಸಬೇಕು’ ಎಂದು ಹೇಳಿದರು.

ವಾರಾಂತ್ಯ ಕರ್ಫ್ಯೂಗೆ ವಿರೋಧ: ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಬಸನಗೌಡ ಪಾಟೀಲ ಯತ್ನಾಳ ತೀವ್ರ ವಿರೋಧ ವ್ಯಕ್ತಪಡಿಸಿದರು. ಶನಿವಾರ, ಭಾನುವಾರ ಮಾತ್ರ ಕೊರೊನಾ ವಿಜಯಪುರದಲ್ಲಿ ಅಡ್ಡಾಡುತ್ತಾ. ರಾತ್ರಿ ಮಾತ್ರ ಅಡ್ಡಾಡುತ್ತಾ. ಸೋಮವಾರ, ಶುಕ್ರವಾರ ಕೊರೊನಾ ಅಡ್ಡಾಡುವುದಿಲ್ಲವೇ? ಇದರಲ್ಲಿ ವೈಜ್ಞಾನಿಕತೆ ಎಲ್ಲಿದೆ ಎಂಬುದು ತಿಳಿಯದಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.