ADVERTISEMENT

ರೈತರ ಆದಾಯ ಏರಿಕೆ: ಈರಣ್ಣ ಕಡಾಡಿ

ಗೊಳಸಂಗಿಯಲ್ಲಿ ಬಿಜೆಪಿ ಜಿಲ್ಲಾ ಮಟ್ಟದ ರೈತ ಮೋರ್ಚಾ ಸಮಾವೇಶ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 15:36 IST
Last Updated 6 ಮಾರ್ಚ್ 2023, 15:36 IST
ಗೊಳಸಂಗಿಯ ರೈತ ಮೋರ್ಚಾ ಸಮಾವೇಶದಲ್ಲಿ ರೈತ ಗೀತೆ ಮೊಳಗಿದಾಗ ಅತಿಥಿಗಳು ಹಸಿರು ಶಾಲು ಬೀಸಿ ರೈತ ಸಮಾವೇಶಕ್ಕೆ ಸಾಕ್ಷಿಯಾದರು
ಗೊಳಸಂಗಿಯ ರೈತ ಮೋರ್ಚಾ ಸಮಾವೇಶದಲ್ಲಿ ರೈತ ಗೀತೆ ಮೊಳಗಿದಾಗ ಅತಿಥಿಗಳು ಹಸಿರು ಶಾಲು ಬೀಸಿ ರೈತ ಸಮಾವೇಶಕ್ಕೆ ಸಾಕ್ಷಿಯಾದರು   

ನಿಡಗುಂದಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ತಲಾ ಆದಾಯ ಹೆಚ್ಚಿಸಲು ದೂರದೃಷ್ಠಿಯ ಯೋಜನೆಗಳನ್ನು ಕೈಗೊಂಡ ಪರಿಣಾಮ ₹ 50 ಸಾವಿರ ಆಸಪಾಸು ಇದ್ದ ರೈತ ತಲಾ ವಾರ್ಷಿಕ ಆದಾಯ ಈಗ ₹ 1.23 ಲಕ್ಷಕ್ಕೆ ಏರಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ತಾಲ್ಲೂಕಿನ ಗೊಳಸಂಗಿಯಲ್ಲಿ ಬಿಜೆಪಿ ರೈತ ಮೋರ್ಚಾ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿಯ ಜತೆ ಕೃಷಿ ಆದಾಯ ಹೆಚ್ಚಾಗಲು ಹೈನುಗಾರಿಕೆ, ಮೀನುಗಾರಿಕೆ, ತೋಟಗಾರಿಕೆ ಕ್ಷೇತ್ರಗಳ ವಿಸ್ತರಣೆಗೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ದೇಶದ ಶೇ 49 ರಷ್ಟಿರುವ ರೈತರು ಆತ್ಮ ನಿರ್ಭರರಾಗಲು, ಅವರ ಆದಾಯ ದ್ವಿಗುಣಕ್ಕೆ ಪ್ರಧಾನಿ ಮೋದಿ ಕ್ರಮ ಕೈಗೊಂಡಿದ್ದಾರೆ. ರೈತರು ದೇಶದ ಬೆನ್ನೆಲುಬು ಎಂಬ ಘೋಷಣೆಗೆ ಸೀಮಿತಗೊಳ್ಳದೇ, ರೈತನ ಬೆನ್ನೆಲುಬು ಗಟ್ಟಿ ಮಾಡಲು ಪೂರಕ ಯೋಜನೆಗಳನ್ನು ಜಾರಿಗೆ ಕಳೆದ 8 ವರ್ಷಗಳಲ್ಲಿ ತರಲಾಗಿದೆ ಎಂದರು.

ADVERTISEMENT

2014 ರ ಮೊದಲು ಕೃಷಿ ಕ್ಷೇತ್ರದಿಂದ ದೇಶದ ಜಿಡಿಪಿ ಬೆಳವಣಿಗೆ ಶೇ 11 ರಷ್ಟಿತ್ತು. ಆದರೆ, ಈಗ ಅದು ಶೇ 20 ರಷ್ಟು ದಾಟಿದೆ. ಕೃಷಿ ಕ್ಷೇತ್ರವೂ ದೇಶದ ಆರ್ಥಿಕ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡುತ್ತಿದೆ. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿ 2.95 ಮಿಲಿಯನ್ ಟನ್ ಆಹಾರವನ್ನು ಪ್ರತಿ ವರ್ಷ ಬೇರೆ ಬೇರೆ ರಾಷ್ಟ್ರಗಳಿಗೆ ರಫ್ತು ಮಾಡುವ ಮಟ್ಟಿಗೆ ಭಾರತ ಬೆಳೆದಿದೆ ಎಂದರು.

ರಾಸಾಯನಿಕ ಮುಕ್ತ ಆಹಾರ ಉತ್ಪಾದನೆಗಾಗಿ ಸಾವಯವ ಕೃಷಿಗೆ ಉತ್ತೇಜನ ನೀಡಿ, ಸಾವಯವ ಕೃಷಿ ಕೈಗೊಳ್ಳುವ ಪ್ರತಿ ಹೆಕ್ಟೇರ್ ಗೆ ₹50 ಸಾವಿರ ಸಹಾಯ ಧನವನ್ನು ದೇಶದ 10 ಲಕ್ಷ ರೈತರಿಗೆ ನೀಡಲು ಈ ವರ್ಷ ಬಜೆಟ್ ನಲ್ಲಿ ಹಣ ಮೀಸಲಿಡಲಾಗಿದೆ ಎಂದರು.

ಕೃಷಿ ಉತ್ಪನ್ನಗಳಿಗೆ ದೇಶಾದ್ಯಂತ ಮಾರಾಟ ಮಾಡಲು ಆನ್ ಲೈನ್ ಮಾರುಕಟ್ಟೆ ವ್ಯವಸ್ಥೆ, ಕೃಷಿ ಉತ್ಪನ್ನಗಳನ್ನು ಸಾಗಿಸಲು ಕಡಿಮೆ ಬೆಲೆಗೆ ರೈಲ್ವೆ, ವಿಮಾನದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

2014 ಕ್ಕೂ ಮೊದಲು ಕೃಷಿಗಾಗಿ ಬಜೆಟ್ ನಲ್ಲಿ ₹21,933 ಕೋಟಿ ನಿಗದಿ ಮಾಡಿತ್ತು. 2014 ರ ನಂತರ ಪ್ರತಿ ವರ್ಷ ಕೃಷಿಗೆ ಆದ್ಯತೆ ಹೆಚ್ಚಿಸಿ ಈ ವರ್ಷ ₹ 1.45 ಲಕ್ಷ ಕೋಟಿ ಮೀಸಲಿಟ್ಟ ಪ್ರಧಾನಿ ಮೋದಿ ರೈತ ಪರ ಎಂಬುದನ್ನು ತೋರಿಸುತ್ತದೆ ಎಂದರು.

ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ರೈತ ಹಾಗೂ ನೇಕಾರರ ಆರ್ಥಿಕ ಅಭಿವೃದ್ಧಿಗೆ ಬಿಜೆಪಿ ಸಾಕಷ್ಟು ಕ್ರಮ ಕೈಗೊಂಡಿದೆ ಎಂದರು.

ಮುಖಂಡ ಸೋಮನಗೌಡ ಪಾಟೀಲ (ಮನಗೂಳಿ), ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್. ಪಾಟೀಲ (ಕೂಚಬಾಳ), ಚಂದ್ರಶೇಖರ ಕವಟಗಿ, ಶಂಕರಗೌಡ ಪಾಟೀಲ, ಕಾಸುಗೌಡ ಬಿರಾದಾರ, ಡಾ ಎಂ.ಡಿ. ಮೇತ್ರಿ, ಕುಮಾರಗೌಡ ಪಾಟೀಲ, ಎಂ.ಐ. ಹೆಬ್ಬಾಳ, ಗುರುಲಿಂಗಪ್ಪ ಅಂಗಡಿ, ಚಿದಾನಂದ ಚಲವಾದಿ, ಸಂಜುಗೌಡ ಪಾಟೀಲ,ಮಲ್ಲಿಕಾರ್ಜುನ ಜೋಗೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.