ADVERTISEMENT

ವಿಜಯಪುರ ಜಿಲ್ಲೆಗೆ ಬೇಕಿವೆ ಇನ್ನಷ್ಟು ಇಂದಿರಾ ಕ್ಯಾಂಟಿನ್‌

ವಿಜಯಪುರ, ಇಂಡಿ, ಬ.ಬಾಗೇವಾಡಿಯಲ್ಲಿ ನಿತ್ಯ ದಾಸೋಹ; ವಿದ್ಯಾರ್ಥಿಗಳು, ಕೂಲಿಕಾರ್ಮಿಕರಿಗೆ ಆಸರೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2022, 19:30 IST
Last Updated 16 ಅಕ್ಟೋಬರ್ 2022, 19:30 IST
ವಿಜಯಪುರ ನಗರದ ಸರ್ಕಾರಿ ಐಟಿಐ ಕಾಲೇಜು ಆವರಣದಲ್ಲಿರುವ ಇಂದಿರಾ ಕ್ಯಾಂಟಿನ್‌ನಲ್ಲಿ ಊಟ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು  –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರ ನಗರದ ಸರ್ಕಾರಿ ಐಟಿಐ ಕಾಲೇಜು ಆವರಣದಲ್ಲಿರುವ ಇಂದಿರಾ ಕ್ಯಾಂಟಿನ್‌ನಲ್ಲಿ ಊಟ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು  –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಯಪುರ: ಬಡವರು, ಕೂಲಿಕಾರ್ಮಿಕರು, ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಕಡಿಮೆ ಖರ್ಚಿನಲ್ಲಿ ಹಸಿವು ನೀಗುವ ‘ಇಂದಿರಾ ಕ್ಯಾಂಟಿನ್‌’ಗಳು ಜಿಲ್ಲೆಯಲ್ಲಿ ಸದ್ಯ ಆರು ಕಾರ್ಯನಿರ್ವಹಿಸುತ್ತಿದ್ದು, ಇನ್ನುಳಿದಂತೆ ಪ್ರತಿ ತಾಲ್ಲೂಕು ಕೇಂದ್ರಕ್ಕೆ ಒಂದಾದರೂ ಬೇಕು ಎಂಬ ಬೇಡಿಕೆ ಕೇಳಿಬಂದಿದೆ.

ವಿಜಯಪುರ ಮಹಾನಗರ ಪಾಲಿಕೆ ಸಮೀಪ, ಸೆಟಲೈಟ್‌ ಬಸ್‌ ನಿಲ್ದಾಣ ಸಮೀಪ, ಸರ್ಕಾರಿ ಐಟಿಐ ಕಾಲೇಜು ಆವರಣ ಹಾಗೂ ಎಪಿಎಂಸಿ ಆವರಣ ಸೇರಿದಂತೆ ನಾಲ್ಕು ಇಂದಿರಾ ಕ್ಯಾಂಟಿನ್‌ಗಳಿವೆ. ಇಂಡಿ ಮತ್ತು ಬಸವನ ಬಾಗೇವಾಡಿ ಪಟ್ಟಣದಲ್ಲಿ ತಲಾ ಒಂದರಂತೆ ಒಟ್ಟು ಆರು ಯಶಸ್ವಿಯಾಗಿ ನಿತ್ಯ ದಾಸೋಹ ಕಾರ್ಯದಲ್ಲಿ ತೊಡಗಿವೆ.

ಸಿಂದಗಿ, ಮುದ್ದೇಬಿಹಾಳ ಪಟ್ಟಣಕ್ಕೆ ಇಂದಿರಾ ಕ್ಯಾಂಟಿನ್‌ ಅನುಮೋದನೆಯಾಗಿ, ಅನುದಾನ ನೀಡಲಾಗಿದ್ದರೂ ಜಾಗದ ಕೊರತೆಯಿಂದ ನಾಲ್ಕು ವರ್ಷವಾದರೂ ಆರಂಭವಾಗಿಲ್ಲ.

ADVERTISEMENT

ಹೊಸ ತಾಲ್ಲೂಕು ಕೇಂದ್ರಗಳಾದ ಕೊಲ್ಹಾರ, ಬಬಲೇಶ್ವರ, ತಿಕೋಟಾ, ನಿಡಗುಂದಿ, ತಾಳಿಕೋಟೆ, ದೇವರ ಹಿಪ್ಪರಗಿ, ಆಲಮೇಲ, ಚಡಚಣದಲ್ಲಿ ಇಂದಿರಾ ಕ್ಯಾಂಟಿನ್‌ಗಳಿಗೆ ಜನರಿಂದ ಬೇಡಿಕೆ ಇದ್ದರೂ ರಾಜ್ಯ ಸರ್ಕಾರ ಆರಂಭಕ್ಕೆ ಯಾವುದೇ ಪ್ರಯತ್ನ ನಡೆಸಿಲ್ಲ. ಇವುಗಳ ಹೊರತಾಗಿಯೂ ಕಲಕೇರಿ, ನಾಗಠಾಣ, ಹೊರ್ತಿ, ತಾಂಬಾ, ಆಲಮಟ್ಟಿ, ಹೂವಿನ ಹಿಪ್ಪರಗಿ ಮತ್ತು ನಾಲತವಾಡ ಪಟ್ಟಣಗಳಲ್ಲೂ ಇಂದಿರಾ ಕ್ಯಾಂಟಿನ್‌ ಆರಂಭಿಸಿದರೆ ನಿತ್ಯ ಈ ಪಟ್ಟಣಗಳಿಗೆ ಬರುವ ರೈತರು, ಕೂಲಿಕಾರ್ಮಿಕರು, ಬಡವರು, ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ, ಆಗ್ರಹ ಇದೆ.

ಇಂಡಿ ಕ್ಯಾಂಟಿನ್‌ನಲ್ಲಿಒಂದು ಹೊತ್ತಿಗೆ 500, ಬಸವನ ಬಾಗೇವಾಡಿ ಕ್ಯಾಂಟಿನ್‌ನಲ್ಲಿ ಒಂದು ಹೊತ್ತಿಗೆ 300, ವಿಜಯಪುರದ ನಾಲ್ಕೂ ಕ್ಯಾಂಟಿನ್‌ಗಳಲ್ಲಿ ತಲಾ 500 ಜನ ಒಂದು ಹೊತ್ತಿಗೆ ಟಿಪಿನ್‌, ಊಟ ಮಾಡುತ್ತಾರೆ. ಇಂಡಿ –ಮುದ್ದೇಬಿಹಾಳ ಕ್ಯಾಂಟಿನ್‌ಗಳಿಗೆ ಶೇ 75ರಷ್ಟು ಅನುದಾನ ಸರ್ಕಾರದಿಂದ ನೇರವಾಗಿ ಬರುತ್ತದೆ. ಆದರೆ, ವಿಜಯಪುರದ ನಾಲ್ಕು ಕ್ಯಾಂಟಿನ್‌ಗಳಿಗೆ ಸರ್ಕಾರದಿಂದ ಅನುದಾನ ಬರುತ್ತಿಲ್ಲ. ಪಾಲಿಕೆಯೇ ಸ್ವಂತ ಅನುದಾನದಿಂದ ನಡೆಸಬೇಕು.

ವಿಜಯಪುರ ನಗರದ ನಾಲ್ಕು ಕ್ಯಾಂಟಿನ್‌ಗಳಿಗೆ ಒಂಬತ್ತು ತಿಂಗಳಿಂದ ಅನುದಾನ ಬಿಡುಗಡೆಯಾಗಿಲ್ಲ. ಎಸ್‌ಎಫ್‌ಸಿ ಅನುದಾನವನ್ನು ಕ್ಯಾಂಟಿನ್‌ಗಳ ಖರ್ಚು–ವೆಚ್ಚಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಆದರೆ, ಸದ್ಯ ಎಸ್‌ಎಫ್‌ಸಿ ಅನುದಾನ ಕಡಿತ ಆಗಿರುವುದರಿಂದ ಸಿಬ್ಬಂದಿ ವೇತನಕ್ಕೆ ಸಾಲದಾಗಿದೆ. ಹೀಗಾಗಿ ಅನುದಾನ ಬಿಡುಗಡೆಯಾಗಿಲ್ಲ. ಆದರೂ, ಗುತ್ತಿಗೆದಾರರು ನಡೆದುಕೊಂಡು ಹೋಗುತ್ತಿರುವುದು ವಿಶೇಷ.

ವಿಜಯಪುರ ನಗರದ ಗೋಳಗುಮ್ಮಟ ಎದುರು, ಕೇಂದ್ರ ಬಸ್‌ ನಿಲ್ದಾಣ,ಕೇಂದ್ರ ರೈಲ್ವೆ ನಿಲ್ದಾಣ, ಸಿದ್ದೇಶ್ವರ ಗುಡಿ, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯ್ತಿ ಕಚೇರಿ ಹಾಗೂ ಜಿಲ್ಲಾಸ್ಪತ್ರೆ, ಗಾಂಧಿ ಚೌಕ ಅಥವಾ ಮೀನಾಕ್ಷಿ ಚೌಕದ ಬಳಿ ಇಂದಿರಾ ಕ್ಯಾಂಟಿನ್‌ ಆರಂಭಿಸಬೇಕು ಎಂಬ ಬೇಡಿಕೆ ಇದೆ. ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ.

ಬಾಗೇವಾಡಿಯಲ್ಲಿ ಜನ ಮೆಚ್ಚುಗೆ
ಬಸವನಬಾಗೇವಾಡಿ ಪಟ್ಟಣದ ಬಸ್ ನಿಲ್ದಾಣ ಪಕ್ಕದಲ್ಲಿನ ಇಂದಿರಾ ಕ್ಯಾಂಟಿನ್‌ ಆರಂಭವಾದಾಗಿನಿಂದಲ್ಲೂ ಗುಣಮಟ್ಟದ ಊಟ, ಉಪಹಾರ ವಿತರಣೆ ಮಾಡುವ ಮೂಲಕ ಜನರಿಂದ ಮೆಚ್ಚುಗೆ ಪಡೆದುಕೊಂಡಿದೆ.

ಪ್ರತಿದಿನ ಬೆಳಿಗ್ಗೆ ಇಡ್ಲಿ ಜೊತೆಗೆ ಉಪ್ಪಿಟ್ಟು, ಶಿರಾ, ಫಲಾವು ಸೇರಿದಂತೆ ದಿನಕ್ಕೊಂದರಂತೆ ಬಗೆ ಬಗೆ ಉಪಹಾರ ಲಭ್ಯವಿದೆ. ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಚಪಾತಿ, ಪಲ್ಲೆ, ಅನ್ನ, ಸಾಂಬರ್ ವಿತರಣೆ ಮಾಡಲಾಗುತ್ತಿದೆ. ಮೊಸರನ್ನವೂ ಲಭ್ಯವಿರುತ್ತದೆ.

ಇಂದಿರಾ ಕ್ಯಾಂಟಿನ್‌ನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ವೃದ್ದರು, ಅಂಗವಿಕಲರಿಗೆ ಕುಳಿತುಕೊಂಡು ಊಟ ಮಾಡುವ ವ್ಯವಸ್ಥೆ ಇದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ಇಲ್ಲಿನ ಇಂದಿರಾ ಕ್ಯಾಂಟಿನ್‌ನಲ್ಲಿ ಗುಣಮಟ್ಟದ ರುಚಿಕರವಾದ ಉಪಹಾರ, ಊಟ ಸಿಗುತ್ತಿದೆ. ಕಡಿಮೆ ಹಣದಲ್ಲಿ ಉಪಹಾರ, ಊಟ ಸಿಗುತ್ತಿರುವುದರಿಂದ ಬಡವರಿಗೆ ಆಸರೆಯಾಗಿದೆ ಎನ್ನುತ್ತಾರೆ ಇಂದಿರಾ ಕ್ಯಾಂಟಿನ್‌ನಲ್ಲಿ ಊಟ ಸವಿಯುತ್ತಿದ್ದ ಕಾಂತರಾಜ ಪೂಜಾರಿ, ಮನೋಜ ಬಿರಾದಾರ.

ಇಂದಿರಾ ಕ್ಯಾಂಟಿನ್‌ನಲ್ಲಿ ಪ್ರತಿದಿನ 5 ಜನ ಕೆಲಸ ಮಾಡುತ್ತಿದ್ದೇವೆ. ರುಚಿಕರವಾದ ಉಪಹಾರ, ಊಟ ಸವಿಯಲು ಪ್ರತಿದಿನ 750ಕ್ಕೂ ಹೆಚ್ಚು ಜನರು ಬರುತ್ತಿದ್ದಾರೆ ಎನ್ನುತ್ತಾರೆ ಸುಪರ್‌ವೈಸರ್ ಬಸಯ್ಯ ಹಿರೇಮಠ.

ಇಂಡಿಯಲ್ಲಿ ನಿರಂತರ ದಾಸೋಹ
ಇಂಡಿ ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಇಂದಿರಾ ಕ್ಯಾಂಟೀನ್ ಪ್ರಾರಂಭವಾದಾಗಿನಿಂದ ನಿರಂತರ ಸೇವೆ ಸಲ್ಲಿಸುತ್ತಿದೆ. ಪ್ರತಿ ದಿನ ಬೆಳಿಗ್ಗೆ ಸುಮಾರು 350 ರಿಂದ 500 ಜನ ಉಪಹಾರ ಸೇವನೆ ಮಾಡುತ್ತಿದ್ದಾರೆ. ಮಧ್ಯಾಹ್ನ 300 ರಿಂದ 400 ಜನ ಊಟ ಮಾಡುತ್ತಿದ್ದಾರೆ.

ಬೆಳಿಗ್ಗೆ ಕೆಲಸಕ್ಕೆ ಹೋಗುವ ಕಾರ್ಮಿಕರು ಮತ್ತು ಗ್ರಾಮೀಣ ಪ್ರದೇಶಗಳಿಂದ ಇಂಡಿ ಪಟ್ಟಣಕ್ಕೆ ಬರುವ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಇಂದಿರಾ ಕ್ಯಾಂಟಿನ್‌ಗೆ ಹೆಚ್ಚು ಬರುತ್ತಿದ್ದಾರೆ. ಸಂಜೆ ಮಾತ್ರ ಕೇವಲ 15 ರಿಂದ 20 ಜನ ಮಾತ್ರ ಊಟ ಮಾಡುತ್ತಿದ್ದಾರೆ.

ಮಂಗಳವಾರ ಇಂಡಿ ಪಟ್ಟಣದ ಸಂತೆ ದಿನವಾಗಿರುವುದರಿಂದ ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನ ಊಟಕ್ಕೆ ಸುಮಾರು 500 ಜನ ಬರುತ್ತಾರೆ. ಅವರೆಲ್ಲರಿಗೂ ಕೊರತೆಯಾಗದಂತೆ ಉಪಹಾರ ಮತ್ತು ಊಟ ಬಡಿಸುತ್ತೇವೆ. ಇಂದಿರಾ ಕ್ಯಾಟಿನ್ ನಡೆಸುವುದಕ್ಕೆ ಅಗತ್ಯವಿರುವ ರೇಶನ್ ಮತ್ತು ಕಾಯಿಪಲ್ಲೆಯ ಕೊರತೆಯಿಲ್ಲ. ಕ್ಯಾಂಟಿನ್ ನಲ್ಲಿ ಒಟ್ಟು 6 ಜನ ಪೂರ್ಣಾವಧಿಯ ಸಿಬ್ಬಂದಿಗಳಿದ್ದೇವೆ. ಪುರಸಭೆಯ ಸಿಬ್ಬಂದಿ ಕ್ಯಾಂಟಿನ್ ಸ್ವಚ್ಛತೆಗೆ ಸಹಕಾರ ನೀಡುತ್ತಿದ್ದಾರೆ. ಕ್ಯಾಂಟಿನ್ ನಲ್ಲಿ ಪುರಸಭೆಯು 24X 7 ನಲ್ಲಿಯ ವ್ಯವಸ್ಥೆ ಮಾಡಿದ್ದು, ನೀರಿನ ಕೊರತೆಯಿಲ್ಲ ಎನ್ನುತ್ತಾರೆ ಇಂದಿರಾ ಕ್ಯಾಟಿನ್ ವ್ಯವಸ್ಥಾಪಕ ಶಿವು ಕಾಮಗೊಂಡ.

ಇಂದಿರಾ ಕ್ಯಾಂಟಿನ್ ಪ್ರಾರಂಭದಿಂದಲೂ ಚೆನ್ನಾಗಿ ನಡೆದಿದೆ. ಬಡವರಿಗೆ ಉಪಯೋಗವಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರದ ಅನುದಾನ ಕೊರತೆಯ ಸಂದರ್ಭದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರು ತಮ್ಮ ಸ್ವಂತ ಖರ್ಚಿನಿಂದ ಇಂದಿರಾ ಕ್ಯಾಂಟಿನ್ ನಡೆಸಿದ್ದಾರೆ. ಇಂದಿರಾ ಕ್ಯಾಂಟಿನ್ ತೆರೆದಾಗಿನಿಂದ ಕೂಲಿ ಕಾರ್ಮಿಕರಿಗೆ ಅತೀ ಉಪಯುಕ್ತವಾಗಿದೆ ಎನ್ನುತ್ತಾರೆ ಕೂಲಿ ಕಾರ್ಮಿಕ ಬಂಡೆಪ್ಪ ನಾಗಣಸೂರ.

ಇಂದಿರಾ ಕ್ಯಾಂಟೀನ್ ನಡೆಸುವುದಕ್ಕೆ ಅನುದಾನದ ಕೊರತೆಯಿಲ್ಲ. ವಿದ್ಯಾರ್ಥಿಗಳಿಗೆ, ಕೂಲಿ ಕಾರ್ಮಿಕರಿಗೆ ಇಂದಿರಾ ಕ್ಯಾಂಟಿನ್ ನಿಂದ ಹೆಚ್ಚಿನ ಅನುಕೂಲವಾಗಿದೆ ಎನ್ನುತ್ತಾರೆಇಂಡಿ ಪುರಸಭೆ ಮುಖ್ಯಾಧಿಕಾರಿಕೆ.ಎಸ್. ಲಕ್ಮೀಶ.

ಕ್ಯಾಂಟಿನ್‌ ಆರಂಭಕ್ಕೆ ಜಾಗದ ಕೊರತೆ
ಮುದ್ದೇಬಿಹಾಳ:
ಇಂದಿರಾ ಕ್ಯಾಂಟಿನ್‌ಗೆ ನಾಲ್ಕು ವರ್ಷಗಳ ಹಿಂದೆಯೇ ಸ್ಥಳದ ಆಯ್ಕೆಗಾಗಿ ಪುರಸಭೆಯ ಅಧಿಕಾರಿಗಳು ಹುಡುಕಾಟ ನಡೆಸಿದ್ದರು.‌ ಜನ ವಸತಿ ಇರುವಲ್ಲಿ, ಕಾರ್ಮಿಕರು ಹೆಚ್ಚು ಸೇರುವ ಸ್ಥಳದಲ್ಲಿ ಮಾಡಬೇಕೆಂಬ ನಿರ್ದೇಶನದಂತೆ ಬಸ್ ನಿಲ್ದಾಣದ ಪಕ್ಕದಲ್ಲಿ ಇರುವ ಸಿಪಿಐ ಕಚೇರಿಯ ಸ್ಥಳದಲ್ಲಿ ಸ್ವಚ್ಛತೆ ಮಾಡಲಾಗಿತ್ತು. ಆದರೆ, ಅಲ್ಲಿ ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ನಡುವೆ ಸ್ಥಳದ ಮೇಲೆ ಯಾರ ಹಕ್ಕಿದೆ ಎಂಬ ವಿವಾದ ಮೊದಲಿಂದಲೂ ಇದ್ದುದರಿಂದ ಅದನ್ನು ಕೈ ಬಿಡಲಾಯಿತು.

ತಹಶೀಲ್ದಾರ್ ಕಚೇರಿಯ ಪಕ್ಕದಲ್ಲಿ ಸ್ಥಳ ಪರಿಶೀಲನೆ ನಡೆಯಿತಾದರೂ ಅಲ್ಲಿರುವ ಗಿಡಗಳನ್ನು ಕಡಿಯಲು ಪರಿಸರ ಪ್ರೇಮಿಗಳು ವಿರೋಧ ಮಾಡಿದ್ದರಿಂದ ಅದನ್ನೂ ಕೈ ಬಿಡಲಾಯಿತು.

ನಂತರ ಹುಡ್ಕೋ ಬಡಾವಣೆಯ ಹೇಮರೆಡ್ಡಿ ಮಲ್ಲಮ್ಮ ವೃತ್ತದ ಹತ್ತಿರದ ಒಳಚರಂಡಿ ಮಂಡಳಿಯ ನೀರು ಶುದ್ಧೀಕರಣ ಘಟಕದ ಸ್ಥಳದಲ್ಲಿ ಸ್ವಚ್ಛತೆ ನಡೆಸಿದರೂ ಕೆಲವು ಜನರು ಸ್ವಚ್ಛತೆಯ ಪ್ರಶ್ನೆ ಎತ್ತಿ ಅದನ್ನೂ ಬದಲಿಸಿದರು.

ಕೊನೆಗೆ ಹುಡ್ಕೋ ಬಡಾವಣೆಯಲ್ಲಿ ಶಾಸಕರ ಭವನಕ್ಕೆ ಮೀಸಲಿಟ್ಟ ಸ್ಥಳದಲ್ಲಿ (ಬಾಂಡ್ ರೈಟರ್ಸ್ ಅಂಗಡಿಗಳ ಹಿಂದೆ) ಗುತ್ತಿಗೆದಾರರು ಬಂದು ನೋಡಿ ಹೋಗಿದ್ದಾರೆ. ಈ ಸಂಬಂಧಿಸಿದಂತೆ ಪತ್ರ ಸಹ ಬರೆಯಲಾಗಿದೆ. ಇದುವರೆಗೂ ಕ್ಯಾಂಟಿನ್‌ ಆರಂಭವಾಗುವ ಲಕ್ಷಣ ಕಂಡುಬರುತ್ತಿಲ್ಲ.

ಅಪೂರ್ಣ ಸ್ಥಿತಿಯಲ್ಲಿ ಸಿಂದಗಿ ಕ್ಯಾಂಟಿನ್
ಸಿಂದಗಿ
: ಮೂರು ವರ್ಷದಿಂದ ಇಂದಿರಾ ಕ್ಯಾಂಟಿನ್ ನಿರ್ಮಾಣ ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿದೆ. ಈಗ ಇದು ಹಂದಿಗಳ ತಾಣವಾಗಿದೆ. ಸಾರ್ವಜನಿಕರ ಮೂತ್ರಾಲಯವಾಗಿದೆ. ಈ ಜಾಗದ ತುಂಬೆಲ್ಲ ಮುಳ್ಳು ಕಂಟೆ ಬೆಳೆದುಕೊಂಡು ಜಂಗಲ್ ಆಗಿ ರೂಪುಗೊಂಡಿದೆ.

ಅಂದಿನ ಜಿಲ್ಲಾಧಿಕಾರಿಗಳು ಬಸ್ ನಿಲ್ದಾಣದ ಎದುರಿನ ತಾಲ್ಲೂಕು ಪಂಚಾಯ್ತಿಯ ಹಳೆಯ ಗೆಸ್ಟ್ ಹೌಸ್ ಆವರಣದಲ್ಲಿ ಇಂದಿರಾ ಕ್ಯಾಂಟಿನ್ ನಾಮಫಲಕ ಹಾಕಿ ಕಾಮಗಾರಿ ಪ್ರಾರಂಭಿಸುವ ಮೊದಲೇ ಅಂದಿನ ಶಾಸಕರು ಬೇರೆ ಉದ್ದೇಶದಿಂದಾಗಿ ಅಲ್ಲಿ ಆಗಬೇಕಿದ್ದ ಇಂದಿರಾ ಕ್ಯಾಂಟಿನ್ ನ್ನು ತಾಲ್ಲೂಕು ಆಡಳಿತ ಸೌಧಕ್ಕೆ ಸ್ಥಳಾಂತರಿಸಿದ್ದರು.

ಇಂದಿರಾ ಕ್ಯಾಂಟಿನ್ ರೆಡಿಮೇಡ್ ಶೆಡ್ ಟೆಂಡರ್ ಪ್ರಕ್ರಿಯೆ ಬೆಂಗಳೂರಿನ ಕಂಪನಿಯೊಂದಕ್ಕೆ ದೊರಕಿದ್ದು, ಈ ವರೆಗೂ ಶೆಡ್ ಸ್ಥಳದಲ್ಲಿಲ್ಲ. ಇಂದಿರಾ ಕ್ಯಾಂಟಿನ್ ಪ್ರಾರಂಭಗೊಂಡಿಲ್ಲ.

2019-20ನೇ ಸಾಲಿನ ಪುರಸಭೆ 14ನೇ ಹಣಕಾಸು ಯೋಜನೆಯಡಿ ಇಂದಿರಾ ಕ್ಯಾಂಟಿನ್ ಕಂಪೌಂಡ್ ಗೋಡೆ ಹಾಗೂ ಸೆಪ್ಟಿಕ್ ಟ್ಯಾಂಕ್ ನಿರ್ಮಾಣಕ್ಕಾಗಿ ₹ 11.64 ಲಕ್ಷ ಅನುದಾನದ ಅನುಮೋದನೆ ದೊರಕಿತ್ತು. ಆದರೆ, ಎರಡು ಬದಿ ಕಂಪೌಂಡ್ ಗೋಡೆ ಹಾಗೂ ಸೆಪ್ಟಿಕ್ ಟ್ಯಾಂಕ್ ನಿರ್ಮಾಣವಾಗಿದೆ. ಮುಂದಿನ ಕಂಪೌಂಡ್ ಗೋಡೆ ನಿರ್ಮಾಣವಾಗಿಲ್ಲ. ಕಾಮಗಾರಿಗೆ ಸಂಬಂಧಿಸಿದಂತೆ ₹ 8 ಲಕ್ಷ ಬಿಲ್ ಅನ್ನು ಗುತ್ತಿಗೆದಾರ ಪಡೆದುಕೊಂಡಿದ್ದಾರೆ ಎಂದು ಪುರಸಭೆಯಿಂದ ತಿಳಿದು ಬಂದಿದೆ.

ಪ್ರಜಾವಾಣಿ ತಂಡ: ಬಸವರಾಜ್‌ ಸಂಪಳ್ಳಿ, ಪ್ರಕಾಶ ಮಸಬಿನಾಳ, ಶಾಂತೂ ಹಿರೇಮಠ,‌ ಎ.ಸಿ.ಪಾಟೀಲ, ಮಹಾಬಲೇಶ್ವರ ಗಡೇದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.