ಚಡಚಣ ತಾಲ್ಲೂಕಿನ ಇಂಚಗೇರಿಯಲ್ಲಿ ಭಾನುವಾರ ಮಾಧವಾನಂದ ಪ್ರಭು ನೂತನ ದೇವಾಲಯವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಿದರು. ಇಂಚಿಗೇರಿ ಮಠದ ಪೀಠಾಧಿಪತಿ ರೇವಣ ಸಿದ್ದಮಹಾರಾಜ ಉಪಸ್ಥಿತರಿದ್ದರು
–ಪ್ರಜಾವಾಣಿ ಚಿತ್ರ
ವಿಜಯಪುರ: ‘ಜಾತಿ ವ್ಯವಸ್ಥೆ ಹೋಗಬೇಕಾದರೆ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು. ಆ ಮೂಲಕ ಜಾತಿ ವ್ಯವಸ್ಥೆ ಅಳಿಸಲು ಸಾಧ್ಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.
ಭಾನುವಾರ ಚಡಚಣ ತಾಲ್ಲೂಕಿನ ಇಂಚಗೇರಿ ಮಠದಲ್ಲಿ ಮಾಧವಾನಂದ ಪ್ರಭುಗಳ 44ನೇ ಪುಣ್ಯತಿಥಿ ಅಂಗವಾಗಿ ನಿರ್ಮಿಸಿರುವ ಮಾಧವಾನಂದ ಪ್ರಭು ದೇವಾಲಯ ಉದ್ಘಾಟಿಸಿ ಅವರು ಮಾತನಾಡಿದರು.
‘ಯಾರೂ ಕೂಡ ಇಂತಹದ್ದೇ ಜಾತಿಯಲ್ಲಿ ಜನಿಸಬೇಕು ಎಂದು ಅರ್ಜಿ ಹಾಕುವುದಿಲ್ಲ, ಆಪರೇಷನ್ ಮಾಡುವ ವೈದ್ಯ, ರಕ್ತ ಪಡೆದುಕೊಳ್ಳುವ ವ್ಯಕ್ತಿಯ ಜಾತಿ ನೋಡುವುದಿಲ್ಲ. ಕುರುಬರಿಗೆ ಕುರುಬರ ರಕ್ತ, ಬ್ರಾಹ್ಮಣರಿಗೆ ಬ್ರಾಹ್ಮಣರ ರಕ್ತ ಬೇಕು ಎಂದು ಯಾರೂ ಕೇಳುವುದಿಲ್ಲ, ಆದರೆ ನಾನು ಲಿಂಗಾಯತ, ನೀನು ದಲಿತ ಎಂದು ಹೇಳುತ್ತೇವೆ, ಇದು ಸ್ವಾರ್ಥವಲ್ಲದೇ?’ ಎಂದರು.
‘ಮನುಷ್ಯರು ದಾನವರಾಗಬಾರದು, ಮಾನವರಾಗಬೇಕು. ಮನುಷ್ಯರು ಮನುಷ್ಯರಾಗಿ ಬಾಳಬೇಕಿದೆ, ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕಬೇಕಿದೆ’ ಎಂದರು.
‘ಜಾತ್ಯತೀತತೆ ಆಧಾರದ ಮೇಲೆ ಜನರು ವೋಟ್ ಕೊಡದೇ ಹೋಗಿರಬಹುದು. ಆದರೆ ನಾವು ಗ್ಯಾರಂಟಿ ಯೋಜನೆಗಳ ಮೂಲಕ ಎಲ್ಲ ಬಡವರಿಗೂ ನ್ಯಾಯ ಒದಗಿಸಿದ್ದೇವೆ. ಇದು ಒಂದೇ ಜಾತಿಗೆ ಸೀಮಿತವಲ್ಲ, ಎಲ್ಲ ಜಾತಿ, ಸಮುದಾಯದವರಿಗೂ, ಎಲ್ಲ ಪಕ್ಷ, ಎಲ್ಲ ಧರ್ಮಗಳಿಗೆ ನೀಡಲಾಗುತ್ತಿದೆ’ ಎಂದು ಹೇಳಿದರು.
‘ಪಾಳೆಗಾರಿಕೆ ಸಮಾಜಕ್ಕೆ, ಜನರ ಸ್ವಾತಂತ್ರ್ಯಕ್ಕೆ ಕಂಟಕ. ಹೀಗಾಗಿ ಬಲಾಢ್ಯರ ಕೈಯಲ್ಲಿ ಅಧಿಕಾರ ಇರಬಾರದು ಎಂದು ಗಾಂಧೀಜಿ ಪ್ರತಿಪಾದಿಸಿದ್ದರು. ಬಹುತ್ವದ ಪರವಾಗಿರುವವರನ್ನು ನಾವು ಸದಾ ಸ್ಮರಿಸುತ್ತಿರಬೇಕು. ಮಾಧವಾನಂದ ಸ್ವಾಮಿಗಳು ಕೂಡ ಬಹುತ್ವದ ಪರವಾಗಿದ್ದರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.