
ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆಯ (ಯುಕೆಪಿ) ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಎಲ್ಲ ಕಾಲುವೆಗಳಿಗೆ ಹಿಂಗಾರು ಹಂಗಾಮಿಗೆ ನೀರು ಹರಿಸುವ ಮಹತ್ವದ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ನ.5ರಂದು ಬೆಂಗಳೂರಿನ ವಿಕಾಸಸೌಧದಲ್ಲಿ ಐಸಿಸಿ ಅಧ್ಯಕ್ಷರೂ ಆಗಿರುವ ಸಚಿವ ಆರ್.ಬಿ. ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಜರುಗಲಿದೆ.
ಜುಲೈ 8ರಿಂದ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ಮುಂಗಾರು ಹಂಗಾಮಿಗಾಗಿ ಅ.25ರ ವರೆಗೆ ನೀರು ಹರಿಸಲಾಗಿತ್ತು. ನ.4ರ ವರೆಗೂ ಮುಂಗಾರು ಹಂಗಾಮಿನ ಅವಧಿಯಿದೆ. ಸದ್ಯ ಹಿಂಗಾರು ಹಂಗಾಮಿಗೆ ಎಲ್ಲಿಯವರೆಗೆ ನೀರು ಹರಿಯುತ್ತದೆ ಎಂಬುದು ಸಭೆಯಲ್ಲಿ ನಿರ್ಧಾರವಾಗಲಿದೆ.
ಮಾರ್ಚ್ 15 ರವರೆಗೆ ನೀರು?: ಮುಂಗಾರು ಹಂಗಾಮಿಗೆ ಕಾಲುವೆಗೆ ನೀರು ಹರಿಸಿದರೂ ಆಲಮಟ್ಟಿ ಹಾಗೂ ನಾರಾಯಣಪುರ ಎರಡೂ ಜಲಾಶಯಗಳು ಸಂಪೂರ್ಣ ಭರ್ತಿಯಾಗಿವೆ. ಸದ್ಯ ಎರಡೂ ಜಲಾಶಯಗಳಿಂದ ಬಳಕೆಯೋಗ್ಯ 125 ಟಿಎಂಸಿ ಅಡಿ ನೀರು ಲಭ್ಯವಿದೆ. ಈ ಪೈಕಿ ನೀರಾವರಿ ಬಳಕೆಗೆ 80 ಟಿಎಂಸಿ ಅಡಿ ಲಭ್ಯವಾಗಲಿದೆ. ಆ ನೀರಿನಲ್ಲಿಯೇ 14 ದಿನ ಚಾಲು 10 ದಿನ ಬಂದ್ ಅವಧಿಯ ವಾರಾಬಂಧಿ ಅಳವಡಿಸಿ 2026ರ ಮಾರ್ಚ್ 15ರ ವರೆಗೆ ನೀರು ಹರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಸದ್ಯ ದ್ವಿಋತು ಬೆಳೆಗಳಾದ ತೊಗರಿ, ಮೆಣಸಿನಕಾಯಿ, ಈರುಳ್ಳಿ, ಸೂರ್ಯಕಾಂತಿ ಮತ್ತೀತರ ಬೆಳೆಗಳಿಗೆ ಹಾಗೂ ಹಿಂಗಾರು ಹಂಗಾಮಿನ ಬೆಳೆಗಳಿಗೂ ನೀರು ಅಗತ್ಯವಿದೆ.
ಈ ವರ್ಷ ಮೇ 19ರಿಂದ ಆಲಮಟ್ಟಿ ಜಲಾಶಯದ ಒಳಹರಿವು ಆರಂಭಗೊಂಡಿದ್ದು, ಈವರೆಗೆ 799 ಟಿಎಂಸಿ ಅಡಿ ನೀರು ಹರಿದು ಬಂದಿದೆ. 689 ಟಿಎಂಸಿ ಅಡಿ ನೀರನ್ನು ನದಿ ಪಾತ್ರಕ್ಕೆ ಬಿಡಲಾಗಿದೆ.
ಆಲಮಟ್ಟಿಯಲ್ಲೇ ಐಸಿಸಿ ಸಭೆ ನಡೆಸಿ: ‘ಪ್ರತಿ ವರ್ಷ ಆಲಮಟ್ಟಿಯಲ್ಲಿಯೇ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಐಸಿಸಿ ಸಭೆ ನಡೆಯುತ್ತಿತ್ತು. ಆದರೆ ಈ ಬಾರಿ ಮುಂಗಾರು ಸಭೆಯೂ ಬೆಂಗಳೂರಿನಲ್ಲಿ ನಡೆದಿದೆ. ಈಗ ಹಿಂಗಾರು ಹಂಗಾಮಿನ ಸಭೆಯೂ ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ, ಇದರಿಂದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಈ ಭಾಗದ ರೈತರ ನೈಜ ಸಮಸ್ಯೆಗಳ ಮನವರಿಕೆ ಆಗುವುದಿಲ್ಲ. ಆಲಮಟ್ಟಿಯಲ್ಲಿಯೇ ಸಭೆ ನಡೆಸಬೇಕು’ ಎಂದು ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಬಸವರಾಜ ಕುಂಬಾರ ಆಗ್ರಹಿಸಿದ್ದಾರೆ.
ಸಚಿವ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆಯಲ್ಲಿ ನಡೆಯುವ ಐಸಿಸಿ ಸಭೆ ನಡೆಯಲ್ಲಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಶಾಸಕರು ಸಂಸದರು ಕಂದಾಯ ಕೃಷಿ ನೀರಾವರಿ ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆಪ್ರೇಮಸಿಂಗ್ ಐಸಿಸಿ ಸದಸ್ಯ ಕಾರ್ಯದರ್ಶಿ ಮುಖ್ಯ ಎಂಜಿನಿಯರ್ ಭೀಮರಾಯನಗುಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.