ADVERTISEMENT

ವಿಜಯಪುರ: ನೀರಾವರಿ ಜಮೀನಿಗೆ ₹55 ಲಕ್ಷ ಬೆಲೆ ನಿಗದಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 6:12 IST
Last Updated 14 ಸೆಪ್ಟೆಂಬರ್ 2025, 6:12 IST
ಕೊಲ್ಹಾದ ಎಸ್.ಕೆ. ಬೆಳ್ಳುಬ್ಬಿ ಪದವಿ ಪೂರ್ವ ಕಾಲೇಜು ಆವರಣದ ಕನ್ವೆನ್ಷನ್ ಹಾಲನಲ್ಲಿ ಶನಿವಾರ ನಡೆದ ಬಿಜೆಪಿ ಬಸವನಬಾಗೇವಾಡಿ ಮಂಡಲ ಸಭೆಯನ್ನು ಗಣ್ಯರು ಉದ್ಘಾಟಿಸಿದರು
ಕೊಲ್ಹಾದ ಎಸ್.ಕೆ. ಬೆಳ್ಳುಬ್ಬಿ ಪದವಿ ಪೂರ್ವ ಕಾಲೇಜು ಆವರಣದ ಕನ್ವೆನ್ಷನ್ ಹಾಲನಲ್ಲಿ ಶನಿವಾರ ನಡೆದ ಬಿಜೆಪಿ ಬಸವನಬಾಗೇವಾಡಿ ಮಂಡಲ ಸಭೆಯನ್ನು ಗಣ್ಯರು ಉದ್ಘಾಟಿಸಿದರು   

ಕೊಲ್ಹಾರ: ಜಿಲ್ಲೆಯ ಆಲಮಟ್ಟಿ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದಲ್ಲಿ ಮುಳಗಡೆ ಹಾಗೂ ಕಾಮಗಾರಿಗೆ ವಿಜಯಪುರ-ಬಾಗಲಕೋಟೆ ಜಿಲ್ಲೆಗಳ 1.30 ಲಕ್ಷ ಎಕರೆ ಭೂಮಿಗೆ ಸಂತ್ರಸ್ತರ ಬೇಡಿಕೆಯಂತೆ 1 ಎಕರೆ ನೀರಾವರಿ ಭೂಮಿಗೆ ₹55 ಲಕ್ಷ, ಒಣ ಬೇಸಾಯಕ್ಕೆ 1 ಎಕರೆಗೆ ₹45 ಲಕ್ಷ ಗಳಂತೆ ಬೆಲೆ ನಿಗದಿ ಮಾಡಿ ಪರಿಹಾರ ನೀಡಬೇಕು ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಒತ್ತಾಯಿಸಿದರು.

ಪಟ್ಟಣದ ಎಸ್.ಕೆ. ಬೆಳ್ಳುಬ್ಬಿ ಪದವಿ ಪೂರ್ವ ಕಾಲೇಜು ಆವರಣದ ಕನ್ವೆನ್ಷನ್ ಹಾಲನಲ್ಲಿ ಶನಿವಾರ ನಡೆದ ಬಿಜೆಪಿ ಬಸವನಬಾಗೇವಾಡಿ ಮಂಡಲ ಸಭೆಗೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದರು.

ಸೆ.16ರಂದು ವಿಶೇಷ ಸಂಪುಟ ಸಭೆ ಕರೆದಿದ್ದು, ಸಭೆಯಲ್ಲಿ ಹಿನ್ನೀರಿನಲ್ಲಿ ಮುಳಗಡೆಯಾಗಲಿರುವ ಮತ್ತು ಕಾಲುವೆಗಳಿಗಾಗಿ ಭೂ-ಸ್ವಾದೀನ ಮಾಡಿಕೊಂಡಿರುವ ಜಮಿನಗಳಿಗೆ ರೈತರ ಬೇಡಿಕೆಯಂತೆ ಅದೇ ಸಚಿವ ಸಂಪುಟ ಸಭೆಯಲ್ಲಿ ಜಮೀನುಗಳಿಗೆ ರೈತರ ಬೇಡಿಕೆಯಂತೆ ಬೆಲೆ ನಿಗದಿ ಮಾಡಬೇಕು ಎಂದರು.

ADVERTISEMENT

ಆಲಮಟ್ಟಿ ಜಲಾಶಯದಲ್ಲಿ ಮುಳಗಡೆಯಾದ ಟಕ್ಕಳಕಿ ಗ್ರಾಮಕ್ಕೆ ಹಾಕಿದ 3 ಷರತ್ತು ಸಡಿಲಗೊಳಿಸಿ ಎಲ್ಲಾ ಸಂತ್ರಸ್ತರಂತೆ ಪರಿಹಾರ ನೀಡಲಾಗಿದೆ. ಆದರೆ ಕೊಲ್ಹಾರದ 1498 ಮನೆಗಳಿಗೆ ಹಾಕಿದ 3 ಷರತ್ತುಗಳ ಪೈಕಿ 2 ಷರತ್ತು ತೆಗೆದು ಹಾಕಲಾಗಿದೆ. 3ನೇ ಷರತ್ತು ಹೆಚ್ಚುವರಿ ಪರಿಹಾರಕೆ ನ್ಯಾಯಾಲಯಕ್ಕೆ ಹೋಗಬಾರದು ಎನ್ನುವ ಕರಾರು ಮಾತ್ರ ಬಾಕಿ ಇದೆ. 1498 ಮನೆ ಮಾಲೀಕರಿಗೆ ಇಡೀ ಆಲಮಟ್ಟಿ ಯೋಜನೆ ಅಡಿಯಲ್ಲಿ ಕೊಲ್ಹಾರಕ್ಕೆ ಮಾತ್ರ ಅನ್ಯಾಯವಾಗಿದ್ದು, ಹೆಚ್ಚುವರಿ ಪರಿಹಾರ ನೀಡಿ ಸರಿಪಡಿಸಬೇಕು ಎಂದರು.

ಪರಿಹಾರಕ್ಕೆ ಆಗ್ರಹಿಸಿ ಬಜೆಪಿ ಹಾಗೂ ಸಂತ್ರಸ್ತರ ಜೊತೆ ಸೇರಿ ಸೆ.14ರಂದು ವಿಜಯಪುರ ಜಿಲ್ಲೆಯ ಕೊಲ್ಹಾರ ಹತ್ತಿರದ ಹುಬ್ಬಳ್ಳಿ-ವಿಜಯಪುರ-ಹುಮ್ನಾಬಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಸಾಂಕೇತಿಕವಾಗಿ ರಸ್ತೆ ತಡೆದು ಪ್ರತಿಭಟಿಸಲಾಗುವುದು. ಸೆ.15ರಿಂದ 20ರ ವರೆಗೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಹತ್ತಿರ ಬೆಳಿಗ್ಗೆ 10.30 ರಿಂದ ಸಂಜೆ 5.30ರ ವರೆಗೆ ಉಪವಾಸ ಸತ್ಯಾಗ್ರಹ ಪ್ರಾರಂಭಿಸಲಾಗುವುದು. ಸರಕಾರ ಸೆ.16ರಂದು ನಡೆಯುವ ಸಂಪುಟ ಸಭೆಯಲ್ಲಿ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಸೆ.21ರಿಂದ ಆಮರಣ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಬು ಮಾಶ್ಯಾಳ, ರಾಜ್ಯ ಸಂಚಾಲಕ ಸಂಜಯ ಪಾಟೀಲ ಕನಮಡಿ, ಮಂಡಲ ಅಧ್ಯಕ್ಷ ಸಿದ್ರಾಮ ಕಾಖಂಡಕಿ, ಮಲ್ಲಮ್ಮ ಜೋಗೂರ, ಅಶ್ವಿನಿ ಪಟ್ಟಣಶೆಟ್ಟಿ, ರಾಜಶೇಖರ ಹೊಳ್ಳಿ, ಇಸ್ಮಾಯಿಲ್ ತಹಶೀಲ್ದಾರ,ಪೀರ ಅಹಮ್ಮದ್ ಗಿರಗಾಂವಿ, ಸಂಗಮೇಶ ಗೂಗಿಹಾಳ, ಹಣಮಂತ ಗುಡದಿನ್ನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.