ವಿಜಯಪುರ: ನ್ಯಾಯಯುತ, ಸತ್ಯಯುತ, ಶಿಸ್ತುಬದ್ಧ ಬದುಕಿಗೆ ನಮ್ಮೆಲ್ಲರಿಗೂ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಪ್ರೇರಣೆಯಾಗಿದ್ದರು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಹೇಳಿದರು.
ನಗರದ ಜ್ಞಾನ ಯೋಗಾಶ್ರಮದಲ್ಲಿ ಶುಕ್ರವಾರ ನಡೆದ ಸಿದ್ಧೇಶ್ವರ ಸ್ವಾಮೀಜಿಯವರ 3ನೇ ವರ್ಷದ ಗುರುನಮನ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
12ನೇ ಶತಮಾನದಿಂದಲೇ ವಿಜಯಪುರ ಪುಣ್ಯಭೂಮಿಯಾಗಿದೆ. ಬಸವಣ್ಣನವರು ಕಾಯಕವೇ ಕೈಲಾಸ ಎಂದು ಸಾರುವ ಮೂಲಕ ಜಗತ್ತಿನ ಚಿತ್ತವನ್ನು ಕರ್ಮದತ್ತ, ನಿಷ್ಠೆಯತ್ತ, ಧರ್ಮದತ್ತ ಸೆಳೆದವರು. ಅದರಂತೆ 20ನೇ ಶತಮಾನದ ಶ್ರೇಷ್ಠ ಸಂತ ಸಿದ್ದೇಶ್ವರ ಅಪ್ಪನವರು ಈ ಭೂಮಿಗೆ ದೊರೆತ ಮತ್ತೊಂದು ನಕ್ಷತ್ರ. ಅವರು ಹಾಕಿ ಕೊಟ್ಟ ದಾರಿ, ಸರಳ ಬದುಕಿನ ಸೂತ್ರ, ಶಿಸ್ತು, ನಿಷ್ಠೆ ನಮ್ಮೆಲ್ಲರ ಬದುಕನ್ನು ಹಸನುಗೊಳಿಸಿವೆ ಎಂದರು.
ಬೀಳಗಿ ಶಾಸಕ ಜೆ.ಟಿ ಪಾಟೀಲ ಮಾತನಾಡಿ, ಶ್ರೀ ಸಿದ್ದೇಶ್ವರ ಸ್ವಾಮೀಜಿಯವ ಸರಳತೆ, ಅವರಲ್ಲಿದ್ದ ಸಾಗರದಷ್ಟು ಜ್ಞಾನ ಇಡೀ ಜಗತ್ತಿನ ಮನಸ್ಸನ್ನು ಗೆದ್ದಿದ್ದು ಸುಳ್ಳಲ್ಲ ಎಂದರು.
ಹಂಚಿನಾಳ ಭಕ್ತಿಯೋಗಾಶ್ರಮದ ಸಂಗಮೇಶ್ವರ ಶ್ರೀಗಳು ಮಾತನಾಡಿ, ನಾವೆಲ್ಲರೂ ಸಿದ್ದೇಶ್ವರ ಶ್ರೀಗಳು ಎಂದಿಗೂ ಪ್ರಶಸ್ತಿ, ರೊಕ್ಕ, ರೂಪಾಯಿಗೆ ಆಸೆ ಪಡಲಿಲ್ಲ. ಜ್ಞಾನದಾಸೋಹ ಬಡಿಸಲು ಆಸೆಪಟ್ಟವರು ಎಂದು ಹೇಳಿದರು.
ಚಿತ್ತರಗಿ-ಇಳಕಲ್ ವಿಜಯಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಸಿದ್ದೇಶ್ವರ ಅಪ್ಪನವರು ತಮ್ಮ ಬದುಕಿನುದ್ದಕ್ಕೂ ನಮ್ಮ ಮನಸ್ಸು ಉತ್ತಮವಾಗಿಸಲು, ನಮ್ಮಲ್ಲಿ ನಿಸ್ವಾರ್ಥತೆಯನ್ನು ತುಂಬಲು, ನಮ್ಮ ಮನಸ್ಸನ್ನು ಶುದ್ಧ ಮಾಡಲು ಪ್ರಯತ್ನಿಸಿದಂತವರು. ಸತತ 70 ವರ್ಷಗಳ ಕಾಲ ನಿರಂತರವಾಗಿ ಜನರ ಮನಶುದ್ಧಿ ಮಾಡುವಂತಹ ಕಾರ್ಯವನ್ನು ಶ್ರೀಗಳು ಮಾಡುತ್ತಾ ಬಂದರು. ತಮ್ಮ ಪ್ರವಚನಗಳ ಮೂಲಕ ಲಕ್ಷಾಂತರ ಜನರ ಬದುಕನ್ನು ಸುಧಾರಿಸಿ, ಅವರನ್ನು ಸರಿದಾರಿಗೆ ತಂದಂತವರು ಎಂದರು.
ಸಿಂದಗಿ ಸಾರಂಗ ಮಠದ ಪ್ರಭುಸಾರಂಗ ಸ್ವಾಮೀಜಿ, ಗದುಗಿನ ಜಗದ್ಗುರು ಶಿವಾನಂದ ಬೃಹ್ಮನ್ಮಠದ ಸದಾಶಿವಾನಂದ ಸ್ವಾಮೀಜಿ, ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ, ಬಾಲಗಾಂವದ ಗುರುದೇವಾಶ್ರಮದ ಅಮೃತಾನಂದ ಸ್ವಾಮೀಜಿ, ಹರ್ಷಾನಂದ ಸ್ವಾಮೀಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.