ADVERTISEMENT

ಕನ್ನಡ ಅವನತಿ ತಡೆಗೆ ಎಚ್ಚರ ಅಗತ್ಯ: ಪುರುಷೋತ್ತಮ ಬಿಳಿಮಲೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 5:59 IST
Last Updated 28 ನವೆಂಬರ್ 2025, 5:59 IST
ವಿಜಯಪುರ ನಗರದ ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ನಾಡು ನುಡಿ ಚಿಂತನ’ ಕುರಿತು ವಿಚಾರ ಕಮ್ಮಟದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಮಾತನಾಡಿದರು -ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ನಾಡು ನುಡಿ ಚಿಂತನ’ ಕುರಿತು ವಿಚಾರ ಕಮ್ಮಟದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಮಾತನಾಡಿದರು -ಪ್ರಜಾವಾಣಿ ಚಿತ್ರ   

ವಿಜಯಪುರ: ‘ಭಾರತೀಯ ಪ್ರಾದೇಶಿಕ ಭಾಷೆಗಳ ಬೆಳವಣಿಗೆ ವೇಗ ಪ್ರಸಕ್ತ ಶೇ 11ರಿಂದ 12ರಷ್ಟಿದೆ. ಆದರೆ, ಕನ್ನಡ ಭಾಷೆಯ ಬೆಳವಣಿಗೆ ವೇಗ ಶೇ 3.76 ರಷ್ಟಿದೆ. ಕನ್ನಡಿಗರು ಇತರೆ ಭಾಷೆಗಳ ಬಗ್ಗೆ ಗೌರವ ಇಟ್ಟುಕೊಳ್ಳಬೇಕು. ಆದರೆ, ನಮ್ಮ ಭಾಷೆ ಪಥನವಾಗದಂತೆ ಎಚ್ಚರ ವಹಿಸಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.

ನಗರದ ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕಮಲಾದೇವಿ ಪಾಟೀಲ ಮೆಮೋರಿಯಲ್ ಎಜ್ಯುಕೇಶನಲ್ ಅಸೋಸಿಯೇಶನ್ ಸಹಯೋಗದಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ವಿಜಯಪುರ ಜಿಲ್ಲೆ- ನಾಡು ನುಡಿ ಚಿಂತನ’ ಕುರಿತು ವಿಚಾರ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು.

‘ಶಾಲೆಗಳಲ್ಲಿ ಕನ್ನಡ ನೆಲೆ ತಪ್ಪಿದೆ. ಮುಂದಿನ 10 ವರ್ಷಗಳಲ್ಲಿ ಕನ್ನಡ ತೀವ್ರ ಹಿನ್ನಡೆ ಸಾಧಿಸಲಿದೆ. ಕನ್ನಡದಲ್ಲೇ ಪರಿಪಕ್ವವಾದ ಪದಗಳು ಇರುವಾಗ ಬೇರೆ ಭಾಷೆಯ ಪದಗಳನ್ನು ಬಳಸುವುದು ಯೋಗ್ಯವಲ್ಲ. ಈ ಬಗ್ಗೆ ಅರಿವು ಮೂಡಿಸಬೇಕಿದೆ’ ಎಂದರು.  

ADVERTISEMENT

‘ರಾಜ್ಯದಲ್ಲಿ ಹೋಟೆಲ್‌ ಉದ್ಯಮ ಬಹುತೇಕ ಕನ್ನಡೇತರರ ಪಾಲಾಗಿದೆ. ಬಹುಪಾಲು ಕೈಗಾರಿಕೋದ್ಯಮಗಳಲ್ಲಿ ಅನ್ಯ ರಾಜ್ಯಗಳ ಹೊರಗುತ್ತಿಗೆದಾರರು ಹೆಚ್ಚಾಗಿದ್ದಾರೆ. ಇದರಿಂದ ಕನ್ನಡಿಗರ ಉದ್ಯೋಗಕ್ಕೆ ಕುತ್ತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಒಂದು ಕಾಲದಲ್ಲಿ ಪ್ರಭುತ್ವವನ್ನು ಪ್ರಶ್ನಿಸುವ ಶಕ್ತಿ ಕನ್ನಡಕ್ಕೆ ಇತ್ತು. ಆದರೆ, ಇಂದು ಆ ಆತ್ಮವಿಶ್ವಾಸವನ್ನೇ ಕನ್ನಡಿಗರು ಕಳೆದುಕೊಂಡಿದ್ದೇವೆ. ಕನ್ನಡ ನಾಡು ರೂಪುಗೊಂಡ ಬಗೆಯನ್ನು ವೈಚಾರಿಕವಾಗಿ ಮತ್ತು ವಿಸ್ತಾರವಾಗಿ ತಿಳಿದು, ಹೊಸ ಬಗೆಯಲ್ಲಿ ಕನ್ನಡ ನಾಡು ಕಟ್ಟಲು ಹೆಜ್ಜೆ ಇಡಬೇಕು’ ಎಂದರು.

ಬೆಂಗಳೂರಿನ ನೇಗಿಲಯೋಗಿ ಟ್ರಸ್ಟಿನ ಅಧ್ಯಕ್ಷ ಡಾ.ಎಚ್.ಆರ್.ಸ್ವಾಮಿ ಮಾತನಾಡಿ, ‘ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಏನನ್ನೂ ಪ್ರಶ್ನಿಸುವ ಪರಿಸ್ಥಿತಿ ಇಲ್ಲವಾಗಿದೆ. ಪ್ರಶ್ನಿಸಿದರೆ ಬದುಕಲು ಸಾಧ್ಯವಿಲ್ಲದಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮನೆ, ಶಾಲೆಗಳಲ್ಲಿ ಮಕ್ಕಳಿಗೆ ಓದುವ ಸಂಸ್ಕೃತಿಯನ್ನು ಬೆಳೆಸಬೇಕಿದೆ. ಶಾಲಾ ಗ್ರಂಥಾಲಯದಲ್ಲಿರುವ ಪುಸ್ತಕಗಳು ಮಕ್ಕಳ ಕೈಗೆ ಪ್ರತಿದಿನ ಸಿಗುವಂತೆ ಮಾಡಬೇಕಿದೆ’ ಎಂದರು.

‘ಆದಿಲ್ ಶಾಹಿ ಸಾಹಿತ್ಯ - ಕನ್ನಡ ಅನುವಾದಗಳು’ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದ ಕಲಬುರಗಿ ಸಾರಿಗೆ ಇಲಾಖೆಯ ವಿಶ್ರಾಂತ ಅಧೀಕ್ಷಕ  ರಿಯಾಜ್ ಅಹ್ಮದ ಬೋಡೆ, ವಿಜಯಪುರ ಆದಿಲ್‌ಶಾಹಿಗಳು ಸಾಹಿತ್ಯ, ಸಂಗೀತ, ಕಲೆಗಳಿಗೆ, ಹಲವು ಭಾಷೆ, ಧರ್ಮ, ಸಂಸ್ಕೃತಿಗೆ ರಾಜಾಶ್ರಯ ನೀಡಿದ್ದರು. ಸ್ವತಃ ರಾಜ, ರಾಣಿಯರೇ ಸಾಹಿತ್ಯ ರಚಿಸಿದ್ದಾರೆ ಎಂದು ಹೇಳಿದರು.

ಆದಿಲ್‌ಶಾಹಿಗಳು ವಿಜಯಪುರದಲ್ಲಿ 197 ವರ್ಷ ಆಡಳಿತ ನಡೆಸಿದರೂ ಒಂದೇ ಒಂದು ಹಿಂದು–ಮುಸ್ಲಿಂ ಗಲಾಟೆಗಳು ನಡೆದಿಲ್ಲ. 350 ಪರ್ಷಿಯನ್‌, ದಖ್ಖನಿ ಹಸ್ತಪ್ರತಿಗಳು ಸಿಕ್ಕಿವೆ. 300 ಪುಸ್ತಕಗಳನ್ನು ಸೂಫಿಗಳು ರಚಿಸಿದ್ದಾರೆ. ಪ್ರತಿ ಗ್ರಂಥಗಳ ಹೆಸರುಗಳು ಸೌಹಾರ್ದತೆಗೆ ಪ್ರತೀಕವಾಗಿದ್ದವು ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯೆ ದಾಕ್ಷಾಯಿಣಿ ಹುಡೇದ, ಬನಶ್ರೀ ಹತ್ತಿ, ಡಾ.ಮದಗೊಂಡ ಬಿರಾದಾರ, ಪ್ರೊ.ವಿ.ಎಂ.ಸುರಪುರ, ಡಾ.ಎಂ.ಎಂ ಪಡಶೆಟ್ಟಿ, ದಾಕ್ಷಾಯಿಣಿ ಬಿರಾದಾರ, ರೇಣುಕಾ ವೈ. ಕೊಣ್ಣೂರ, ಡಾ.ಎಸ್.ಟಿ ಮೇರವಾಡೆ ಇದ್ದರು.

ಒಂದು ಕಾಲದಲ್ಲಿ ಸಂಸ್ಕೃತ ಮಂತ್ರಗಳನ್ನು ಪಠಿಸುತ್ತಾ ಪೂಜಾರಿಗಳು ದೇವರನ್ನು ಪೂಜಿಸುತ್ತಿದ್ದರು. ಆದರೆ 12ನೇ ಶತಮಾನದಲ್ಲಿ ವಚನಕಾರರು ನಮ್ಮ ಭಾಷೆಯನ್ನೇ ದೇವರಿಗೆ ಕಲಿಸಿ ಕನ್ನಡದಲ್ಲೇ ದೇವರನ್ನು ಸಾಕ್ಷಾತ್ಕಾರಗೊಳಿಸಿಕೊಂಡರು 
ಡಾ.ಪುರುಷೋತ್ತಮ ಬಿಳಿಮಲೆ ಅಧ್ಯಕ್ಷ ಕನ್ನಡ ಅಭಿವೃದ್ಧಿ ಪ್ರಾಧಿಕಾರ  
ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರು ಪ್ರತಿದಿನ ‘ಪ್ರಜಾವಾಣಿ’ ದಿನಪತ್ರಿಕೆಯನ್ನು ಎರಡು ತಾಸು ಓದಬೇಕು
–ಡಾ.ಎಚ್.ಆರ್.ಸ್ವಾಮಿ ಅಧ್ಯಕ್ಷ ನೇಗಿಲಯೋಗಿ ಟ್ರಸ್ಟ್‌ ಬೆಂಗಳೂರು
- ‘ಕೇಂದ್ರದ ನೇಮಕಾತಿ; ಕನ್ನಡಿಗರಿಗೆ ಅನ್ಯಾಯ
’ ವಿಜಯಪುರ: ‘ಕೇಂದ್ರ ಸರ್ಕಾರದ ನೇಮಕಾತಿಯಲ್ಲಿ ಕನ್ನಡಿಗರಿಗೆ ತೀವ್ರ ಅನ್ಯಾಯವಾಗುತ್ತಿದ್ದು  ಯುಪಿಎಸ್‌ಸಿ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸುವಂತೆ ಕ್ರಮಕೈಗೊಳ್ಳಬೇಕು’ ಎಂದು ವಿಜಯಪುರದ ಚಾಣಕ್ಯ ಕರಿಯರ್‌ ಅಕಾಡೆಮಿ ಸಂಸ್ಥಾಪಕ ಎಂ.ಎನ್.ಬಿರಾದಾರ ಆಗ್ರಹಿಸಿದರು. ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರಿಗೆ ನೀಡಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಎಂಪ್ಲಾಮೆಂಟ್‌ ನ್ಯೂಸ್‌ ಕನ್ನಡದಲ್ಲಿ ಪ್ರಕಟವಾಗಬೇಕು ಇಂಡಿಯಾ ಹ್ಯಾಂಡ್‌ಬುಕ್‌ ಕನ್ನಡದಲ್ಲಿ ಪ್ರಕಟವಾಗಬೇಕು ರಾಜ್ಯದ ಎಲ್ಲ ಜಿಲ್ಲೆಗಳ ಗೆಜೆಟಿಯರ್‌ ಪ್ರಕಟವಾಗಬೇಕು ಎನ್‌ಡಿಎ ಬ್ಯಾಂಕ್‌ ಪರೀಕ್ಷೆಗಳು ಕನ್ನಡದಲ್ಲಿ ನಡೆಸಲು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಮನವಿ ಮಾಡಿದರು. 6 ರಿಂದ 12ನೇ ತರಗತಿ ವರೆಗಿನ ಎನ್‌ಸಿಇಆರ್‌ಟಿ ಪುಸ್ತಕಗಳು ಕನ್ನಡದಲ್ಲಿ ಲಭಿಸಬೇಕು ಕನ್ನಡ ವಿಶ್ವಕೋಶ ಪರಿಷ್ಕೃತವಾಗಬೇಕು ಸರ್ಕಾರವೇ ಸ್ಪರ್ಧಾತ್ಮಕ ತರಬೇತಿ ಕೇಂದ್ರವನ್ನು ಆರಂಭಿಸಬೇಕು ಎಂಬ ಬೇಡಿಕೆಯ ಮನವಿಯನ್ನು ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಪುರುಷೋತ್ತಮ ಬಿಳಿಮಲೆ ಈ ವಿಷಯಗಳ ಬಗ್ಗೆ ನಮ್ಮ ಸಂಸದರು ಲೋಕಸಭೆಯಲ್ಲಿ ಧ್ವನಿ ಎತ್ತಬೇಕಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.