ADVERTISEMENT

ಕಾರ್ಗಿಲ್‌ ವಿಜಯ ದಿವಸ್‌: ಸೈನಿಕರಿಗೆ ಸಿಂದಗಿ ‘ಸಲಾಂ’

‘ಪ್ರಜಾವಾಣಿ’ ‘ಡೆಕ್ಕನ್‌ ಹೆರಾಲ್ಡ್‌’ ಸಹಭಾಗಿತ್ವ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 3:05 IST
Last Updated 27 ಜುಲೈ 2025, 3:05 IST
ಸಿಂದಗಿ ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಶನಿವಾರ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ದಿನಪತ್ರಿಕೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ  ‘ಕಾರ್ಗಿಲ್‌ ವಿಜಯ ದಿವಸ್‌’ನಲ್ಲಿ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು  –ಪ್ರಜಾವಾಣಿ ಚಿತ್ರ
ಸಿಂದಗಿ ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಶನಿವಾರ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ದಿನಪತ್ರಿಕೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ  ‘ಕಾರ್ಗಿಲ್‌ ವಿಜಯ ದಿವಸ್‌’ನಲ್ಲಿ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು  –ಪ್ರಜಾವಾಣಿ ಚಿತ್ರ   

ಸಿಂದಗಿ: ಜೈ ಜವಾನ್‌, ಜೈ ಹಿಂದ್‌, ಭಾರತ್‌ ಮಾತಾಕಿ ಜೈ ಘೋಷಣೆಗಳ ಅನುರಣನ...

ಮಾಜಿ ಸೈನಿಕರು, ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ...

ಪೊಲೀಸರಿಂದ ಪುಷ್ಪನಮನ... ದೇಶ ಭಕ್ತಿ ಗೀತೆಗಳ ಗಾಯನ...

ADVERTISEMENT

ನರನಾಡಿಗಳಲ್ಲಿ ದೇಶಾಭಿಮಾನ ಉದ್ದೀಪನಗೊಳಿಸಿದ ನರ್ತನ...

ಮಾಜಿ ಸೈನಿಕರಿಗೆ ಅಭಿಮಾನದ ಸನ್ಮಾನ, ಶ್ರೀಗಳಿಂದ ಆಶೀರ್ವಚನ...

ರಾಜಕೀಯ ಮರೆತು ವೇದಿಕೆಯಲ್ಲಿ ಒಂದಾದ ಹಾಲಿ, ಮಾಜಿ ಶಾಸಕರಿಂದ ದೇಶಾಭಿಮಾನದ ನುಡಿನಮನ...

‘ಕಾರ್ಗಿಲ್‌ ವಿಜಯೋತ್ಸವ’ದ ಅಂಗವಾಗಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ದಿನಪತ್ರಿಕೆಗಳ ಸಹಯೋಗದಲ್ಲಿ ಪ್ರಥಮ ಬಾರಿಗೆ ಸಿಂದಗಿ ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಸೈನಿಕರಿಗೆ ಸಲಾಂ’ ವಿನೂತನ ಕಾರ್ಯಕ್ರಮದಲ್ಲಿ ಕಂಡುಬಂದ ಚಿತ್ರಣವಿದು.

ದೇಶಾಭಿಮಾನದ ಜಯಘೋಷ, ಬ್ಯಾಂಡ್‌ ವಾದನಗಳ ನಡುವೆ ಅಂಬಿಗರ ಚೌಡಯ್ಯ ವೃತ್ತದಿಂದ ಮಾಜಿ ಸೈನಿಕರನ್ನು ಜ್ಞಾನ ಭಾರತಿ ವಿದ್ಯಾ ಮಂದಿರದ ವಿದ್ಯಾರ್ಥಿಗಳ ಸಮೂಹ ಮೆರವಣಿಗೆ ಮೂಲಕ ಕರೆದೊಯ್ಯವ ಹೊತ್ತಿಗೆ ತುಂತುರು ಮಳೆ ಹನಿಗಳ ಸಿಂಚನದ ಮೂಲಕ ವರುಣ ಶುಭ ಕೋರಿದಂತೆ ಭಾಸವಾಯಿತು.

ಬಸ್‌ ನಿಲ್ದಾಣ ಮಾರ್ಗವಾಗಿ ಸಾಗಿದ ಮೆರವಣಿಗೆಯನ್ನು ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ನಿಂತು ಕಣ್ಮನ ತುಂಬಿಕೊಂಡರು. ಸಿಂದಗಿ ಪೊಲೀಸ್‌ ಠಾಣೆ ಎದುರು ಮೆರವಣಿಗೆ ಸಾಗುತ್ತಿರುವಾಗ ಮಾಜಿ ಸೈನಿಕರು, ವಿದ್ಯಾರ್ಥಿಗಳ ಮೇಲೆ ಆರಕ್ಷಕರು ಪುಷ್ಪವೃಷ್ಟಿಗೈದು ಗೌರವ ಸಲ್ಲಿಸಿದರು.

ತ್ರಿವರ್ಣ ಧ್ವಜ, ಬ್ಯಾಂಡ್‌ ವಾದನ, ಜಯಘೋಷಣೆಯ ನಡುವೆ ಶಾಲಾ ಮಕ್ಕಳು, ಮಾಜಿ ಸೈನಿಕರ ಪಟ್ಟಣದಲ್ಲಿ ದೇಶಭಕ್ತಿಯ ಚಲನ ಸೃಷ್ಟಿಸಿದರು. ನೋಡುಗರಿಗೆ ಸ್ವಾತಂತ್ರ್ಯ ದಿನಾಚರಣೆ ನೆನಪಿಸಿತು.

ಮಾಜಿ ಸೈನಿಕರಿಗೆ ಗೌರವ: ದೇಶದ ಗಡಿಯಲ್ಲಿ ದಶಕಗಳ ಕಾಲ ಪ್ರಾಣದ ಹಂಗು ತೊರೆದು ಭಾರತ ಮಾತೆಯ ಸೇವೆ ಮಾಡಿರುವ ಮಾಜಿ ಸೈನಿಕರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಕೊರಳಿಗೆ ಹೂವಿನ ಹಾರ ಹಾಕಿ, ಸ್ಮರಣಿಕೆ ನೀಡಿ ಗೌರವಿಸಿ, ಸನ್ಮಾನಿಸಲಾಯಿತು.   

ಗಾಯನ, ನೃತ್ಯ ಅನಾವರಣ: ಗಾಯಕಿ ಪೂಜಾ ಹಿರೇಮಠ, ರಾಗ ರಂಜಿನಿ ಸಂಗೀತ ಅಕಾಡೆಮಿ ಸಂಚಾಲಕ ಪ್ರಕಾಶ, ವಿಜಯಪುರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ದೇಶಭಕ್ತಿಗಳನ್ನು ಹಾಡಿ ಮೈಮನಗಳಲ್ಲಿ ದೇಶಾಭಿಮಾನವನ್ನು ಹುರಿಗೊಳಿಸಿದರು. 

ಬಾಲಕಿ ಅವನಿ ಕುರಿಮನಿ ಭರತ ನಾಟ್ಯದ ಮೂಲಕ ಆಕರ್ಷಕ ಸ್ವಾಗತ ನೃತ್ಯ ಮಾಡಿದರು. ಜ್ಞಾನಭಾರತಿ ವಿದ್ಯಾಮಂದಿರದ ಮಕ್ಕಳು ಪ್ರೇಮಾ ನಾಯಕ್‌ ನಿರ್ದೇಶನದಲ್ಲಿ ದೇಶಭಕ್ತಿಗೀತೆಗಳಿಗೆ ನೃತ್ಯ ನಾಟ್ಯ, ಸಾಮೂಹಿಕ ನೃತ್ಯ ಪ್ರದರ್ಶಿಸಿದರು.

ಶಾಸಕ ಅಶೋಕ ಮನಗೂಳಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾರಂಗಮಠ–ಗಚ್ಚಿನಮಠದ ಪೀಠಾಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ.ಎಂ.ಎಂ.ಪಡಶೆಟ್ಟಿ ವಿಶೇಷ ಉಪನ್ಯಾಸ ನೀಡಿದರು.

ಮಾಜಿ ಶಾಸಕ ರಮೇಶ ಭೂಸನೂರ, ಕೆಪಿಸಿಸಿ ವಕ್ತಾರ ಎಸ್‌.ಎಂ.ಪಾಟೀಲ ಗಣಿಹಾರ, ಪ್ರಥಮ ದರ್ಜೆ ಗುತ್ತಿಗೆದಾರ ಎಂ.ಎಂ.ಮುಂಡೇವಾಡಗಿ, ಪ್ರೇರಣಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್.ಡಿ.ಕುಲಕರ್ಣಿ, ಸಿಂದಗಿ ತಾಲ್ಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶ್ರೀಶೈಲ ಯಳಮೇಲಿ, ಅರೆಸೇನಾ ಪಡೆ ಸಂಘದ ಅಧ್ಯಕ್ಷ ಶಬ್ಬಿರಪಟೇಲ್, ಕೆಎಎಸ್ ಅಧಿಕಾರಿ ಕನಕಪ್ಪ ವಡ್ಡರ, ಮುಖಂಡರಾದ ಅಶೋಕ ಅಲ್ಲಾಪುರ, ಅರವಿಂದ ಮನಗೂಳಿ, ಅಶೋಕ ಕೊಳಾರಿ, ಬಿ.ಪಿ.ಕರ್ಜಗಿ, ಪ್ರೊ.ಎಂ.ಎಸ್.ಹಯ್ಯಾಳಕರ, ಸತೀಶ ಹಿರೇಮಠ, ಸಾಯಬಣ್ಣ ಪುರದಾಳ ಉಪಸ್ಥಿತರಿದ್ದರು.

ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ಕರವೇ ರಾಜ್ಯ ಪ್ರಮುಖ ಸಂತೋಷ ಪಾಟೀಲ ಡಂಬಳ, ಪ್ರಥಮ ದರ್ಜೆ ಗುತ್ತಿಗೆದಾರ ರವಿಕಾಂತ ನಾಯ್ಕೋಡಿ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ್ದರು.

ಸಿಂದಗಿ ಪೊಲೀಸ್‌ ಠಾಣೆ ಎದುರು ಮೆರವಣಿಗೆ ಸಾಗುತ್ತಿರುವಾಗ ಮಾಜಿ ಸೈನಿಕರು ವಿದ್ಯಾರ್ಥಿಗಳ ಮೇಲೆ ಆರಕ್ಷಕರು ಪುಷ್ಪವೃಷ್ಟಿಗೈದು ಗೌರವ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.