ADVERTISEMENT

ಬಸವನಬಾಗೇವಾಡಿ ಕಣದಲ್ಲಿ ಕಾಣದ ಉತ್ಸಾಹ: ಬಿಜೆಪಿ ಟಿಕೆಟ್‌ ಗಿಟ್ಟಿಸಲು ಪೈಪೋಟಿ

ಬಸವರಾಜ ಸಂಪಳ್ಳಿ
Published 1 ಮಾರ್ಚ್ 2023, 19:30 IST
Last Updated 1 ಮಾರ್ಚ್ 2023, 19:30 IST
ಶಿವಾನಂದ ಪಾಟೀಲ
ಶಿವಾನಂದ ಪಾಟೀಲ   

ವಿಜಯಪುರ: ಬಿರು ಬಿಸಿಲಿನ ಝಳಕ್ಕೆ ಆಲಮಟ್ಟಿ ಜಲಾಶಯದಲ್ಲಿ ನೀರಿನ ಪ್ರಮಾಣ ನಿಧಾನವಾಗಿ ತಗ್ಗುತ್ತಿರುವಂತೆ ಬಸವನ ಬಾಗೇವಾಡಿ ಕ್ಷೇತ್ರದಲ್ಲೂ ರಾಜಕೀಯ ಚಟುವಟಿಕೆಗಳು ನಿಧಾನಗತಿಯಲ್ಲಿ ನಡೆದಿದೆ.

ಜಿಲ್ಲೆಯ ಉಳಿದ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿರುವಷ್ಟು ಪ್ರಮಾಣದಲ್ಲಿ ಬಸವನ ಬಾಗೇವಾಡಿ ಕ್ಷೇತ್ರದಲ್ಲಿ ಅಂತಹ ಉತ್ಸಾಹ, ಹುಮ್ಮಸ್ಸು ವ್ಯಕ್ತವಾಗಿಲ್ಲ. ಚುನಾವಣಾ ಕಣ ಇನ್ನೂ ಕಾವೇರಿಲ್ಲ.

ಹಾಲಿ ಶಾಸಕ ಶಿವಾನಂದ ಪಾಟೀಲ ಕಾಂಗ್ರೆಸ್‌ನಿಂದ ಮರು ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ‘ಪ್ರಜಾಧ್ವನಿ’ ಯಾತ್ರೆ ಭರ್ಜರಿಯಾಗಿ ನಡೆದಿದೆ. ಆದರೂ ಸಹ ಶಾಸಕರಿಗೆ ಬಬಲೇಶ್ವರ, ವಿಜಯಪುರ ನಗರ ಕ್ಷೇತ್ರದ ಮೇಲಿನ ವ್ಯಾಮೋಹ ಇನ್ನೂ ಕಡಿಮೆಯಾಗಿಲ್ಲ!

ADVERTISEMENT

‘ನಾನು ಮೂರು ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿರುವೆ. ಪಕ್ಷ ಎಲ್ಲಿ ಹೇಳುತ್ತದೆಯೋ ಅಲ್ಲಿ ಸ್ಪರ್ಧಿಸುವೆ’ ಎಂದು ಹೇಳುವ ಮೂಲಕ ಮತ್ತಿನ್ನೇನೋ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಈ ಹೇಳಿಕೆ ಅವರಿಗೆ ವರವಾಗಲಿದೆಯೇ ಅಥವಾ ಅವರಿಗೇ ತಿರುಗು ಬಾಣವಾಗಲಿದೆಯೋ ಎಂಬುದು ಕಾದುನೋಡಬೇಕಿದೆ.

ಹಾಗಂತ, ಕಾಂಗ್ರೆಸ್‌ನಲ್ಲಿ ಶಾಸಕ ಶಿವಾನಂದ ಪಾಟೀಲ ಅವರೊಬ್ಬರ ಹೆಸರು ಹೊರತು ಬೇರೆ ಆಕಾಂಕ್ಷಿಗಳ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿಲ್ಲ.

ಬಿಜೆಪಿಯಲ್ಲಿ ಗೊಂದಲ: ಬಿಜೆಪಿಯಿಂದ ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಹಾಗೂ ಸೋಮನಗೌಡ ಪಾಟೀಲ (ಅಪ್ಪುಗೌಡ ಮನಗೂಳಿ) ಟಿಕೆಟ್‌ಗಾಗಿ ದೊಡ್ಡ ಮಟ್ಟದ ಲಾಭಿ ನಡೆಸಿದ್ದಾರೆ. ಇಬ್ಬರೂ ನಾಯಕರು ತಮಗೇ ಟಿಕೆಟ್‌ ಸಿಗಲಿದೆ ಎಂಬ ವಿಶ್ವಾಸದಿಂದ ಪ್ರತ್ಯೇಕವಾಗಿಯೇ ಪ್ರಚಾರ ನಡೆಸಿದ್ದಾರೆ. ಪಕ್ಷ ಯಾರನ್ನು ಕಣಕ್ಕಿಳಿಸಲಿದೆ ಎಂಬುದು ಕುತೂಹಲ ಹೆಚ್ಚಿದೆ.

ಪ್ರಬಲ ಆಕಾಂಕ್ಷಿಯಾಗಿರುವ ಎಸ್‌.ಕೆ.ಬೆಳ್ಳುಬ್ಬಿ ಅವರು ಟಿಕೆಟ್‌ ಗಿಟ್ಟಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಸಚಿವ ಮುರುಗೇಶ ನಿರಾಣಿ ಅವರ ಮೂಲಕ ಲಾಭಿ ನಡೆಸಿದ್ದಾರೆ. ಅಲ್ಲದೇ, ಎರಡು ಬಾರಿ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಿ ಬಂದಿದ್ದಾರೆ.

ಸೋಮನಗೌಡ ಪಾಟೀಲ ಅವರು ಸುಮ್ಮನೆ ಕೂತಿಲ್ಲ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ನಂಬಿಕೊಂಡಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮೂಲಕ ಟಿಕೆಟ್‌ಗೆ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ.

ಬೆಳ್ಳುಬ್ಬಿ ಮತ್ತು ಮನಗೂಳಿ ಇಬ್ಬರಲ್ಲಿ ಯಾರನ್ನು ಕಣಕ್ಕಿಳಿಸಿದರೆ ಬಿಜೆಪಿಗೆ ಲಾಭವಾಗಲಿದೆ ಎಂಬ ಲೆಕ್ಕಾಚಾರ ಪಕ್ಷದಲ್ಲಿ ಜೋರಾಗಿ ನಡೆದಿದೆ. ಈ ಸಂಬಂಧ ಸಮೀಕ್ಷೆಗಳು ನಡೆದಿವೆ.

ಹೊಸ ಮುಖವಾದ ಸೋಮನಗೌಡ ಪಾಟೀಲ ಅವರಿಗೆ ಅವಕಾಶ ನೀಡಬೇಕು ಎಂಬ ಕೂಗು ಒಂದೆಡೆಯಾದರೆ, ಈ ಹಿಂದೆ ಶಾಸಕ, ಸಚಿವರಾಗಿ ಅನುಭವ ಇರುವ ಹಾಗೂ ಕ್ಷೇತ್ರದಲ್ಲಿ ಜನರ ಜೊತೆ ಭಾವನಾತ್ಮಕ ಒಡನಾಟ ಇಟ್ಟುಕೊಂಡಿರುವ ಬೆಳ್ಳುಬ್ಬಿಯನ್ನು ಕಣಕ್ಕಿಳಿಸಬೇಕು ಎಂಬ ಒತ್ತಾಯ ಇನ್ನೊಂದೆಡೆ ಕೇಳಿಬರುತ್ತಿದೆ.

ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಂಚಮಸಾಲಿ ಮತದಾರರು ಇದ್ದಾರೆ. ಹಾಲಿ ಶಾಸಕ ಶಿವಾನಂದ ಪಾಟೀಲ ಹಾಗೂ ಬಿಜೆಪಿಯ ಸೋಮನಗೌಡ ಪಾಟೀಲ ಅವರು ಪ್ರಬಲ ಪಂಚಮಸಾಲಿ ಸಮಾಜಕ್ಕೆ ಸೇರಿದವರಾಗಿದ್ದು, ಇಬ್ಬರ ನಡುವೆ ಸ್ಪರ್ಧೆ ಏರ್ಪಟ್ಟರೆ ಕ್ಷೇತ್ರದಲ್ಲಿ ಇನ್ನುಳಿದಂತೆ ಹೆಚ್ಚಿನ ಸಂಖ್ಯೆಯಲ್ಲಿರುವ ಕುರುಬ ಮತ್ತು ಮುಸ್ಲಿಂ ಸಮಾಜದ ಮತದಾರರು ಯಾರನ್ನು ಬೆಂಬಲಿಸಲಿದ್ದಾರೆಯೋ ಅವರಿಗೆ ಹೆಚ್ಚು ಅನುಕೂಲವಾಗಲಿದೆ. ಈ ನಿಟ್ಟಿನಲ್ಲೂ ಅಳೆದು, ತೂಗುವ ಲೆಕ್ಕಾಚಾರ ನಡೆದಿದೆ.

ಜೆಡಿಎಸ್‌ ಅಭ್ಯರ್ಥಿ ಕಣಕ್ಕೆ: ಜೆಡಿಎಸ್‌ ಈಗಾಗಲೇ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಪರಮಾನಂದ ಬಸಪ್ಪ ತನಿಖೆದಾರ ಅವರನ್ನು ಕಣಕ್ಕಿಳಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಈಗಾಗಲೇ ‘ಪಂಚರತ್ನ ರಥಯಾತ್ರೆ’ ಮೂಲಕ ಕ್ಷೇತ್ರದಲ್ಲಿ ಅಭ್ಯರ್ಥಿ ಪರ ಪ್ರಚಾರವನ್ನೂ ನಡೆಸಿ ಹೋಗಿದ್ದಾರೆ. ಆದರೆ, ಯಾತ್ರೆಯ ಬಳಿಕ ಅಭ್ಯರ್ಥಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ.

ಉಳಿದಂತೆ ಎಐಎಂಐಎಂ ಮತ್ತು ಆಮ್‌ ಆದ್ಮಿ ಪಕ್ಷಗಳು ಚುನಾವಣಾ ಕಣಕ್ಕಿಳಿಸಲು ಸಿದ್ಧತೆ ನಡೆಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.