
ಗೊಳಸಂಗಿ: ‘ಇಪ್ಪತ್ತಕ್ಕಿಂತ ಕಡಿಮೆ ಮಕ್ಕಳಿರುವ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ವಿಲೀನ ಮಾಡುವ ಚಿಂತನೆ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದ್ದು, ಸರ್ಕಾರಿ ಶಾಲಾ ಶಿಕ್ಷಕರು ಯಾವುದೇ ಕಾರಣಕ್ಕೂ ತಮ್ಮ ಮಕ್ಕಳ ಸಂಖ್ಯೆ ಇಳಿಮುಖವಾಗದಂತೆ ಕಲಿಕಾ ಗುಣಮಟ್ಟದೊಂದಿಗೆ ಹಾಜರಾತಿ ಸಂಖ್ಯೆ ಹೆಚ್ಚಳ ಮಾಡುವಲ್ಲಿ ಮುತುವರ್ಜಿ ವಹಿಸಬೇಕು’ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ನುಗ್ಲಿ ಶಿಕ್ಷಕರ ಬಳಗಕ್ಕೆ ಕಿವಿಮಾತು ಹೇಳಿದರು.
ಸ್ಥಳೀಯ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಸ್ಮಾರ್ಟ್ ಕ್ಲಾಸ್‌ಗಳಿಗೆ ಚಾಲನೆ ನೀಡಿ ಮಾತನಾಡಿದರು.
‘ಈ ಭಾಗದಲ್ಲಿ ಎನ್‌ಟಿಪಿಸಿ ಸ್ಥಾಪನೆಗೆ ದಶಕದ ಹಿಂದೆ ತೀವ್ರ ವಿರೋಧವಿತ್ತು. ಆದರೆ ಅದೇ ಇಂದು ನಮ್ಮ ಮಕ್ಕಳ ಕಲಿಕೆಗೆ ಬೆನ್ನೆಲುಬಾಗಿದೆ. ಮಕ್ಕಳಿಗೆ ಬರೀ ಸರ್ಕಾರಿ ಸವಲತ್ತು ನೀಡಿದರೆ ಸಾಲದು. ಅವರಲ್ಲಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಬೇಕು’ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಬಿ.ಬಾರಿಕಾಯಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರ ದಳವಾಯಿ, ಎಸ್‌ಡಿಎಂಸಿ ಸದಸ್ಯ ಅಮರೇಶಗೌಡ ಪಾಟೀಲ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸುಮಾರು 25ಕ್ಕೂ ಅಧಿಕ ಸಾಧಕರನ್ನು ಸನ್ಮಾನಿಸಲಾಯಿತು.
ಈ ವೇಳೆ ಹುಚ್ಚಯ್ಯಸ್ವಾಮಿ ದೇವಾಂಗಮಠ ಸಾನ್ನಿಧ್ಯ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷೆ ಗೀತಾ ಪತ್ತಾರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಈರಪ್ಪ ಪರಮಗೊಂಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾವುತ ಸೀಮಿಕೇರಿ, ಎನ್‌ಟಿಪಿಸಿ ಅಧಿಕಾರಿ ಮಧುಕೇಶ ಅಂಗಡಿ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಎಂ.ಎ.ಮುಲ್ಲಾ, ಸಲೀಂ ದಡೇದ, ಹೊನ್ನಪ್ಪ ಗೊಳಸಂಗಿ, ಜಗದೀಶ ಕಾಂಬಳೆ, ಉದಯಕುಮಾರ ಬಶೆಟ್ಟಿ, ಬಿಸಿಯೂಟದ ಅಧಿಕಾರಿ ಬಿರಾದಾರ, ಆರ್.ಬಿ.ಗೌಡರ, ರಮೇಶ ಕಮದಾಳ, ಮುಖ್ಯಶಿಕ್ಷಕ ಆರ್.ಎಚ್.ಬುದ್ನಿ, ಸಿಆರ್‌ಪಿ ವಾಣಿಶ್ರೀ ಕುಂದರಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.