ADVERTISEMENT

ವಿಜಯಪುರ | ಯುಕೆಪಿ ಪರಿಹಾರ ವಿಳಂಬ: ಕೆಬಿಜೆಎನ್ಎಲ್ ಕಚೇರಿ ಸಾಮಗ್ರಿ ಜಪ್ತಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 2:27 IST
Last Updated 19 ಫೆಬ್ರುವರಿ 2026, 2:27 IST
ಆಲಮಟ್ಟಿಯ ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯ ಇನ್ನೊವಾ ಕಾರು, ಬುಲೆರೊ ಜೀಪ್ ಸೇರಿ ವಿವಿಧ ಸಾಮಗ್ರಿಗಳನ್ನು  ಬುಧವಾರ ನ್ಯಾಯಾಲಯದ ಸಿಬ್ಬಂದಿ ಜಪ್ತಿ ಮಾಡಿದರು
ಆಲಮಟ್ಟಿಯ ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯ ಇನ್ನೊವಾ ಕಾರು, ಬುಲೆರೊ ಜೀಪ್ ಸೇರಿ ವಿವಿಧ ಸಾಮಗ್ರಿಗಳನ್ನು  ಬುಧವಾರ ನ್ಯಾಯಾಲಯದ ಸಿಬ್ಬಂದಿ ಜಪ್ತಿ ಮಾಡಿದರು   

ಆಲಮಟ್ಟಿ (ವಿಜಯಪುರ ಜಿಲ್ಲೆ): ಕೃಷ್ಣ ಮೇಲ್ದಂಡೆ ಯೋಜನೆ (ಯುಕೆಪಿ) ಮೂರನೇ ಹಂತದ ಕಾಲುವೆ ಕಾಮಗಾರಿಗೆ ವಶಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡದ ಕಾರಣ ಕೋರ್ಟ್ ಆದೇಶದ ಮೇರೆಗೆ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ (ಕೆಬಿಜೆಎನ್ಎಲ್‌) ವ್ಯವಸ್ಥಾಪಕ ನಿರ್ದೇಶಕ ಕಚೇರಿಯ ಸಾಮಗ್ರಿಗಳನ್ನು ಬುಧವಾರ ಜಪ್ತಿ ಮಾಡಲಾಯಿತು.

ಬಬಲೇಶ್ವರ ತಾಲ್ಲೂಕಿನ ಅರ್ಜುಣಗಿ ಗ್ರಾಮದ ಮಹಾಲಿಂಗಪ್ಪ ಮಹಾದೇವಪ್ಪ ಲಿಗಾಡೆ ಅವರಿಗೆ ಸೇರಿದ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಅದಕ್ಕೆ ₹62.59 ಲಕ್ಷ  ಪರಿಹಾರ ನೀಡುವಂತೆ ವಿಜಯಪುರದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ  ಆದೇಶಿಸಿತ್ತು.

ಇನ್ನೊಂದು ಪ್ರಕರಣದಲ್ಲಿ ಮುದ್ದೇಬಿಹಾಳ ತಾಲ್ಲೂಕಿನ ಬಿದರಕುಂದಿ ಗ್ರಾಮದ ಅಕ್ರಂಸಾಬ್ ಹುಸೇನಸಾಬ್ ಮುಲ್ಲಾ ಅವರಿಗೆ ಸೇರಿದ ಜಮೀನನ್ನು ಕಾಲುವೆಗಾಗಿ ವಶಪಡಿಸಿಕೊಳ್ಳಲಾಗಿತ್ತು. ಅವರಿಗೆ  ₹ 4.28 ಕೋಟಿ ಪರಿಹಾರ ನೀಡುವಂತೆ ವಿಜಯಪುರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಆದೇಶಿಸಿತ್ತು.

ADVERTISEMENT

‘ಈ ಎರಡೂ ಪ್ರಕರಣಗಳಲ್ಲಿ ಕೋರ್ಟ್‌ ಆದೇಶದಂತೆ ಪರಿಹಾರ ನೀಡುವಂತೆ ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮತ್ತು ಯುಕೆಪಿಯ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪರಿಹಾರ ನೀಡಿರಲಿಲ್ಲ. ಅದಕ್ಕೆ ನ್ಯಾಯಾಲಯದ ಆದೇಶದಂತೆ ಜಪ್ತಿ ಮಾಡಲಾಗುತ್ತಿದೆ’ ಎಂದು ರೈತರ ಪರ ವಕೀಲರಾದ ಆರ್.ಜಿ. ಪಾಟೀಲ (ವಿಜಯಪುರ) ಹಾಗೂ ಜಿ.ಎಸ್. ಬಿಜ್ಜೂರ (ಮುದ್ದೇಬಿಹಾಳ) ತಿಳಿಸಿದರು.

‘ಇವೆರಡೂ ಸೇರಿ ಇನ್ನೂ 22 ಪ್ರಕರಣಗಳಲ್ಲಿ ₹15 ಕೋಟಿ ಪರಿಹಾರ ನೀಡದ ಕಾರಣ ನ್ಯಾಯಾಲಯವು ಜಪ್ತಿ ಆದೇಶ ಹೊರಡಿಸಿದೆ. ಕೆಬಿಜೆಎನ್‌ಎಲ್‌ ಕಚೇರಿಗೆ ಸೇರಿದ ಒಂದು ಇನ್ನೊವಾ ಕಾರು, ಒಂದು ಜೀಪು, ಫ್ಯಾಕ್ಸ್, ಝರಾಕ್ಸ್ ಯಂತ್ರ, 16 ಅಲ್ಮೇರಾ, 13 ಕಂಪ್ಯೂಟರ್, ಟೇಬಲ್ ಕುರ್ಚಿ, ಬಲ್ಬ್‌ಗಳು, ಪ್ರಿಂಟರ್, ಸಿಲಿಂಗ್ ಫ್ಯಾನ್ ಸೇರಿ ಎಲ್ಲವನ್ನೂ ಜಪ್ತಿ ಮಾಡಿ, ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ’ ಎಂದು ವಕೀಲರು ತಿಳಿಸಿದರು.

ಆಲಮಟ್ಟಿಯ ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯ ಇನ್ನೊವಾ ಕಾರು ಬುಲೆರೊ ಜೀಪ್ ಸೇರಿ ವಿವಿಧ ಸಾಮಗ್ರಿಗಳನ್ನು  ಬುಧವಾರ ನ್ಯಾಯಾಲಯದ ಸಿಬ್ಬಂದಿ ಜಪ್ತಿ ಮಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.