ADVERTISEMENT

ಮುಂಬೈ ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಿ: ಯಶವಂತರಾಯಗೌಡ ಪಾಟೀಲ

ರಾಜ್ಯ ಸರ್ಕಾರಕ್ಕೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 7:51 IST
Last Updated 15 ಜುಲೈ 2025, 7:51 IST
ಇಂಡಿಯಲ್ಲಿ ಸೋಮವಾರ ನಡೆದ ₹4557 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶಾಸಕ ಯಶವಂತ ರಾಯಗೌಡ ಪಾಟೀಲ ಮಾತನಾಡಿದರು -ಪ್ರಜಾವಾಣಿ ಚಿತ್ರ
ಇಂಡಿಯಲ್ಲಿ ಸೋಮವಾರ ನಡೆದ ₹4557 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶಾಸಕ ಯಶವಂತ ರಾಯಗೌಡ ಪಾಟೀಲ ಮಾತನಾಡಿದರು -ಪ್ರಜಾವಾಣಿ ಚಿತ್ರ   

ವಿಜಯಪುರ: ‘ಮುಂಬೈ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ಮಂಡಳಿ ರಚನೆ ಮಾಡಬೇಕು, ಈ ಸಂಬಂಧ ವಿಜಯಪುರದಲ್ಲಿ ನಡೆಸಲು ಉದ್ದೇಶಿಸಿರುವ ಸಚಿವ ಸಂಪುಟ ಸಭೆಯಲ್ಲಿ ಘೋಷಣೆ ಮಾಡಬೇಕು’ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದರು.

ಇಂಡಿಯಲ್ಲಿ ಸೋಮವಾರ ನಡೆದ ₹4557 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು. 

‘ದಕ್ಷಿಣ ಕರ್ನಾಟಕ ಭಾಗದ ಮೈಸೂರು, ಬೆಂಗಳೂರು ರೀತಿ ಉತ್ತರ ಕರ್ನಾಟಕ ಭಾಗ ಅಭಿವೃದ್ಧಿ ಆಗಲು ರಾಜ್ಯ ಸರ್ಕಾರ ಆದ್ಯತೆ ನೀಡಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಭೀಮಾ ತೀರದಲ್ಲಿ ಈ ಹಿಂದೆ ನಡೆಯುತ್ತಿದ್ದ ರಕ್ತದೋಕುಳಿ ರಾಜಕಾರಣಕ್ಕೆ ತಿಲಾಂಜಲಿ ನೀಡಿ, ಶಾಂತಿ, ಪ್ರೀತಿಯ ರಾಜಕಾರಣ ಮಾಡಿದ್ದೇನೆ’ ಎಂದು ಹೇಳಿದರು.

‘2013–25ರ ವರಗೆ ಅಭೂತಪೂರ್ವ ಬದಲಾವಣೆಯಾಗಿದೆ, ಅಭಿವೃದ್ಧಿ ಆಗಿದೆ. ಇಂಡಿ ತಾಲ್ಲೂಕಿನ ಅಭಿವೃದ್ಧಿ ಯೋಜನೆಗಳಿಗೆ ₹8 ಸಾವಿರ ಕೋಟಿ ಅನುದಾನವನ್ನು ಕಾಂಗ್ರೆಸ್ ಸರ್ಕಾರ ನೀಡಿದೆ’ ಎಂದರು.

‘ಸರ್ಕಾರ ಕಾರ್ಖಾನೆ ಪುನರಾರಂಭ, ರೇವಣ ಸಿದ್ದೇಶ್ವರ ಏತನೀರಾವರಿ ಯೋಜನೆಗೆ ಅನುದಾನ, ಜಿಟಿಡಿಸಿ ಕಾಲೇಜು ಸ್ಥಾಪನೆ, ಲಿಂಬೆ ಅಭಿವೃದ್ಧಿ ಮಂಡಳಿ, ಇಂಡಿ ಪಟ್ಟಣಕ್ಕೆ 24X7 ಕುಡಿಯುವ ನೀರು ಪೂರೈಕೆ, 19 ಕೆರೆಗಳಿಗೆ ನೀರು ತುಂಬಿಸುವ ಯೋಜನೆ,  ರಸ್ತೆ ಅಭಿವೃದ್ಧಿ, ಸೇತುವೆ ನಿರ್ಮಾಣ, ಸಣ್ಣ ಕೈಗಾರಿಕೆ ಸ್ಥಾಪನೆ, ವಿದ್ಯುತ್ ಕೇಂದ್ರ ಸ್ಥಾಪನೆ, ಸಮುದಾಯ ಭವನ ನಿರ್ಮಾಣ, ವಸತಿ ನಿಲಯಗಳ ನಿರ್ಮಾಣ ಸೇರಿದಂತೆ ಶೈಕ್ಷಣಿಕ ಬೆಳವಣಿಗೆಗೆ ರಾಜ್ಯ ಸರ್ಕಾರ ಸಹಕಾರ ನೀಡಿ, ಇಂಡಿ ತಾಲ್ಲೂಕಿನ ದಶಕಗಳ ಕನಸು ನನಸು ಮಾಡಿದ್ದೀರಿ’ ಎಂದು ಸಿಎಂ ಡಿಸಿಎಂ, ಸಚಿವರನ್ನು ಯಶವಂತರಾಯಗೌಡ ಪಾಟೀಲ ಹಾಡಿಹೊಗಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ‘ವಿಜಯಪುರ ಜಿಲ್ಲೆ ಬರದ ಜಿಲ್ಲೆ, ಹಿಂದುಳಿದ ಜಿಲ್ಲೆ ಎಂದು ಬ್ರಿಟಿಷರ ಕಾಲದಿಂದಲೇ ಪರಿಗಣಿಸಲಾಗಿತ್ತು. ಬರ ಅಳಿಸಿ ಹಾಕಲು ಈ ಹಿಂದೆ ಜಲಸಂಪನ್ಮೂಲ ಸಚಿವನಾಗಿದ್ದಾಗ ನೀರಾವರಿ ಯೋಜನೆ ಜಾರಿ ಮಾಡಿದ್ದೇನೆ’  ಎಂದರು.

ಸಚಿವರಾದ ಶಿವಾನಂದ ಪಾಟೀಲ, ಎಚ್.ಸಿ.ಮಹಾದೇವಪ್ಪ, ಡಾ.ಶರಣ ಪ್ರಕಾಶ ಪಾಟೀಲ, ಎಚ್.ಕೆ.ಪಾಟೀಲ, ಶರಣ ಬಸಪ್ಪ ದರ್ಶನಾಪುರ, ದಿನೇಶ ಗುಂಡೂರಾವ್, ಶಾಸಕರಾದ ಅಶೋಕ ಮನಗೂಳಿ, ವಿಠಲ ಕಟಕದೊಂಡ, ಹಂಪನಗೌಡ ಬಾದರ್ಲಿ, ಎಂ.ವೈ.ಪಾಟೀಲ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಮಾಜಿ ಶಾಸಕ ಪ್ರೊ. ರಾಜು ಅಲಗೂರ, ಶರಣಪ್ಪ ಸುಣಗಾರ, ಮಕಬುಲ್ ಬಾಗವಾನ್, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಇಲಿಯಾಸದ ಬೋರಮಣಿ, ಕಾಂಗ್ರೆಸ್‌ ಮುಖಂಡ ಹಮೀದ್ ಮುಶ್ರಫ್, ಇಂಡಿ ಪುರಸಭೆ ಅಧ್ಯಕ್ಷ ನಿಂಬಾಜಿ ರಾಠೋಡ, ಜಿಲ್ಲಾಧಿಕಾರಿ ಡಾ.ಆನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಪಂಚಾಯ್ತಿ ಸಿಇಒ ರಿಷಿ ಆನಂದ, ಐಜಿಪಿ ಚೇತನ್ ಸಿಂಗ್ ರಾಠೋಡ, ಉಪ ವಿಭಾಗಾಧಿಕಾರಿ ಅನುರಾಧ ವಸ್ತ್ರದ ಇದ್ದರು.

ಯಶವಂತರಾಯರಿಗೆ ಸಚಿವ ಸ್ಥಾನ ನೀಡಲು ಆಗ್ರಹ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರನ್ನು ಸಚಿವರನ್ನಾಗಿ ಮಾಡಿ’ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು. ‘ಸಚಿವ ಸ್ಥಾನ ಅವರೇ ಕೇಳಿಲ್ಲ ನೀವು ಹೇಳುತ್ತೀದ್ದೀರಾಲ್ಲಾ’ ಎಂದು ಮುಖ್ಯಮಂತ್ರಿ ಕೇಳಿದರು. ‘ಮುಂದಿನ ದಿನಗಳಲ್ಲಿ ಯಶವಂತರಾಯಗೌಡರಿಗೆ ಸಚಿವ ಸ್ಥಾನ ನೀಡಬೇಕು’ ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಮನವಿ ಮಾಡಿದರು. ‘ನಿಷ್ಠಾವಂತ ನಾಯಕ ಯಶವಂತ ರಾಯಗೌಡರು ಶೀಘ್ರದಲ್ಲೇ ಸಚಿವರಾಗಲಿದ್ದಾರೆ’ ಎಂದು ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಆಶಯ ವ್ಯಕ್ತಪಡಿಸಿದರು.

ಕಂಗೊಳಿಸಿದ ಇಂಡಿ: ಶಕ್ತಿ ಪ್ರದರ್ಶನ ಪಟ್ಟಣವು ಸಚಿವರು ಶಾಸಕರು ಕಾಂಗ್ರೆಸ್‌ ಮುಖಂಡರ ಫ್ಲೇಕ್ಸ್ ಕಟೌಟ್ ಬ್ಯಾನರ್‌ಗಳಿಂದ ಕಂಗೊಳಿಸುತ್ತಿತ್ತು. ತಾಲ್ಲೂಕಿನ ಮೂಲೆ ಮೂಲೆಗಳಿಂದ ಜನ ಸಾಗರ ಹರಿದು ಬಂದಿತ್ತು. ಮಹಿಳೆಯರು ಗುಂಪು ಗುಂಪಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇಂಡಿ ಪೊಲೀಸ್ ಪರೇಡ್ ಮೈದಾನದಲ್ಲಿ ಕೂರಲು ಜಾಗ ಸಾಲದೇ ಜನರು ಮೈದಾನದ ಹೊರಭಾಗದಲ್ಲಿ ಸಾಲುಗಟ್ಟಿ ನಿಂತಿದ್ದರು. ಶಾಸಕ ಯಶವಂತರಾಯಗೌಡರ ಶಕ್ತಿ ಪ್ರದರ್ಶನಕ್ಕೆ ಇದು ಸಾಕ್ಷಿಯಾಯಿತು. ಭವಿಷ್ಯದ ಜಿಲ್ಲಾ ಕೇಂದ್ರ: ಇಂಡಿಯನ್ನು ನೂತನ ಜಿಲ್ಲೆಯನ್ನಾಗಿಸುವ ಶಾಸಕ ಯಶವಂತ ರಾಯಗೌಡ ಪಾಟೀಲರ ಆಶಯ ಭರವಸೆಗೆ ಪೂರಕವಾಗುವ ನಿಟ್ಟಿನಲ್ಲಿ ಹತ್ತು ಹಲವು ಯೋಜನೆಗಳ ಲೋಕಾರ್ಪಣೆ ಶಂಕು ಸ್ಥಾಪನೆ ನೆರವೇರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.