
ಕೊಲ್ಹಾರ: ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ ಅಶ್ಲೀಲ ಗೀತೆಗಳಿಗೆ ನೃತ್ಯ ಮಾಡುವುದನ್ನು ನಿಷೇಧಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ತಹಶೀಲ್ದಾರ್ ಸಂತೋಷ ಮ್ಯಾಗೇರಿ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಬಣದ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಕುಂಬಾರ ಮಾತನಾಡಿ, ‘ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಕಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಶಾಲೆ ಹಾಗೂ ಕಾಲೇಜುಗಳು ಸಂಸ್ಕೃತಿ ಕಲಿಸುವ ಕೇಂದ್ರಗಳಾಗಿವೆ. ಆದರೆ, ಕೆಲವು ಶಾಲಾ–ಕಾಲೇಜುಗಳ ವಾರ್ಷಿಕೋತ್ಸವ ಸಮಾರಂಭದಲ್ಲಿ ದೇಶ ಭಕ್ತಿ ಗೀತೆ, ಭಾವ ಗೀತೆ, ಕನ್ನಡ ನಾಡ–ನುಡಿಯ ಗೀತೆಗಳ ನೃತ್ಯಕ್ಕೆ ಆದ್ಯತೆ ನೀಡುತ್ತಿಲ್ಲ. ಅಶ್ಲೀಲ ಗೀತೆಗಳಿಗೆ ನೃತ್ಯ ಮಾಡುವುದು ಕಂಡುಬರುತ್ತಿದೆ’ ಎಂದರು.
‘ಯಾವುದೇ ಶಾಲಾ–ಕಾಲೇಜುಗಳಲ್ಲಿ ಅಶ್ಲೀಲ ಗೀತೆಗಳಿಗೆ ನೃತ್ಯಕ್ಕೆ ಅವಕಾಶ ನೀಡಬಾರದು. ಈ ಬಗ್ಗೆ ತಾಲ್ಲೂಕಿನ ಎಲ್ಲ ಶಾಲಾ– ಕಾಲೇಜುಗಳಿಗೆ ಆದೇಶ ನೀಡಬೇಕು. ಒಂದು ವೇಳೆ ಅವಕಾಶ ನೀಡಿದರೆ ಕರವೇ ಸ್ವಾಭಿಮಾನ ಬಣದಿಂದ ಉಗ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.
ಬಣದ ಪ್ರಧಾನ ಕಾರ್ಯದರ್ಶಿ ಪರಶುರಾಮ ಚಿಮ್ಮಲಗಿ, ರಫೀಕ್ ಕಡ್ಡಾಗೋಳ, ಸುನೀಲ ಕುದರಿ, ಸುದೀಪ್ ಗುಂಜಾಳಕರ, ಬಸವರಾಜ ಅಪ್ಪಣ್ಣವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.