ADVERTISEMENT

ಬಸವನಬಾಗೇವಾಡಿ: ಸ್ವಾಮೀಜಿಯ ಕೃಷಿ ಪ್ರೀತಿ

3 ಎಕರೆ 20 ಗುಂಟೆಯಲ್ಲಿ ಹನಿ ನೀರಾವರಿ, ದ್ರಾಕ್ಷಿ ಬೆಳೆ

ಪ್ರಕಾಶ ಎನ್.ಮಸಬಿನಾಳ
Published 14 ಅಕ್ಟೋಬರ್ 2019, 20:00 IST
Last Updated 14 ಅಕ್ಟೋಬರ್ 2019, 20:00 IST
ಬಸವನಬಾಗೇವಾಡಿಯ ತೋಟದಲ್ಲಿ ಕೃಷಿ ಕಾಯದಲ್ಲಿ ತೊಡಗಿಕೊಂಡಿರುವ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ
ಬಸವನಬಾಗೇವಾಡಿಯ ತೋಟದಲ್ಲಿ ಕೃಷಿ ಕಾಯದಲ್ಲಿ ತೊಡಗಿಕೊಂಡಿರುವ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ   

ಬಸವನಬಾಗೇವಾಡಿ: ಶ್ರಾವಣ ಮಾಸ ಸೇರಿದಂತೆ ವಿವಿಧ ಹಬ್ಬ, ಹರಿದಿನಗಳು, ಜಾತ್ರೆಗಳ ಸಂದರ್ಭದಲ್ಲಿ ಪ್ರವಚನಗಳ ಮೂಲಕ ಆಧ್ಯಾತ್ಮಿಕ ಚಿಂತನೆಗಳಲ್ಲಿ ಜನರು ತೊಡಗುವಂತೆ ಮಾಡುತ್ತಿರುವ ಇಲ್ಲಿನ ಪಟ್ಟದ ಪದ್ಮರಾಜ ಒಡೆಯರ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಅವರು ಕೃಷಿ ಚಟುವಟಿಕೆಯಲ್ಲೂ ತೊಡಗಿಕೊಳ್ಳುವ ಮೂಲಕ ಕೃಷಿಯ ಮಹತ್ವವನ್ನೂ ಸಾರುತ್ತಿದ್ದಾರೆ.

ಇಲ್ಲಿನ ಮುದ್ದೇಬಿಹಾಳ ರಸ್ತೆಯಲ್ಲಿನ ಬಸ್ ಡಿಪೋ ಸಮೀಪದಲ್ಲಿನ ತಮ್ಮ ತೋಟದಲ್ಲಿ ಕೃಷಿ ಕಾಯಕದಲ್ಲಿ ತೊಡಗಿಕೊಂಡಿರುವ ಸ್ವಾಮೀಜಿ ಬೆಳೆಗಳಲ್ಲಿ ಉತ್ತಮ ಇಳುವರಿ ಪಡೆಯುತ್ತಿದ್ದಾರೆ.

10 ಎಕೆರೆ ಬೆಳೆಗೆ ಸಾಕಾಗುವಷ್ಟು ನೀರು ಲಭ್ಯವಾಗುವುದಿಲ್ಲ ಎಂಬುದನ್ನು ಅರಿತು ಇದ್ದ ಕಡಿಮೆ ನೀರಿನಲ್ಲೇ ಹೆಚ್ಚಿನ ಇಳುವರಿ ಬರುವ ಬೆಳೆ ತೆಗೆಯಲು ನಿರ್ಧರಿಸಿದರು. ಎಂಟು ವರ್ಷಗಳ ಹಿಂದೆ 3 ಎಕರೆ 20 ಗುಂಟೆ ಜಮೀನಿಗೆ ಹನಿ ನೀರಾವರಿ ಅಳವಡಿಸಿ ದ್ರಾಕ್ಷಿ ಬೆಳೆದು ಉತ್ತಮ ಲಾಭ ಪಡೆಯುತ್ತಿದ್ದಾರೆ. ಇನ್ನುಳಿದ ಜಮೀನಿನಲ್ಲಿ ಜೋಳ, ತೊಗರಿ ಸೇರಿದಂತೆ ವಿವಿಧ ಒಣಬೇಸಾಯದ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ADVERTISEMENT

ದ್ರಾಕ್ಷಿ ಬೆಳೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಬೆಳೆಗೆ ನಿಯಮಿತವಾಗಿ ನೀರುಣಿಸುವುದು, ಕೀಟ ಬಾಧೆ ತಾಗದಂತೆ
ಗಮನ ಹರಿಸಿದ್ದಾರೆ. ಇವರ ಕೃಷಿ ಕಾಯಕ ಬೆಳಿಗ್ಗೆಯಿಂದಲೇ ಆರಂಭವಾಗುವುದು ವಿಶೇಷ.

ದ್ರಾಕ್ಷಿಯಲ್ಲಿ ಉತ್ತಮ ಇಳುವರಿ ಪಡೆಯುತ್ತಿರುವ ಇವರು ತಮ್ಮ ತೋಟದಲ್ಲಿಯೇ ಗುಣಮಟ್ಟದ ಮಣುಕ (ಒಣ ದ್ರಾಕ್ಷಿ) ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಕಳೆದ ವರ್ಷ ₹17 ಲಕ್ಷ ಮೊತ್ತದ ಒಣ ದ್ರಾಕ್ಷಿ ಮಾರಾಟ ಮಾಡಿದ್ದಾರೆ.

‘ನಾವು ಮಾಡುವ ಯಾವುದೇ ಕೆಲಸದಲ್ಲಿ ಶ್ರದ್ಧೆ ಇದ್ದರೆ ಯಶಸ್ಸು ಕಾಣುತ್ತೇವೆ. ತೋಟದ ಬೆಳೆಗಳಿಗೆ ನಿಷ್ಕಾಳಜಿ ತೋರದೆ ವರ್ಷವಿಡೀ ನಿರಂತರ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು. ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಹಾಗೆಯೇ ಬೆಳೆಗಳ ಬಗ್ಗೆ ಕಾಳಜಿ ವಹಿಸಬೇಕು’ ಎಂದು ಶ್ರೀಗಳು ಅಭಿಪ್ರಾಯಪಡುತ್ತಾರೆ.

‘ದ್ರಾಕ್ಷಿ ಕ್ಷೇತ್ರವನ್ನು ವಿಸ್ತರಿಸುವ ಉದ್ದೇಶವಿದೆ. ಆದರೆ, ನೀರಿನ ಅಭಾವದಿಂದಾಗಿ ಸಾಧ್ಯವಾಗಿಲ್ಲ. ರೈತರು ಆದಾಯದ ಬೆಳೆ ತೆಗೆಯಲು ಮುಂದಾಗಬೇಕು. ಅದು ನಮ್ಮ ಶ್ರಮದ ಮೇಲೆ ನಿಂತಿದೆ ಎಂಬುದನ್ನು ಅರಿಯಬೇಕು’ ಎಂದು ತಮ್ಮ ಕೃಷಿ ಕಾಯಕದ ಅನುಭವ ಹಂಚಿಕೊಳ್ಳುತ್ತಾರೆ.

*
ಎಲ್ಲ ಕಾಯಕಗಳು ಶ್ರೇಷ್ಠವಾಗಿವೆ. ಯುವಕರು ಉದ್ಯೋಗ ಅರಸಿ ಪಟ್ಟಣಕ್ಕೆ ವಲಸೆ ಹೋಗದೇ ತಮ್ಮ ಜಮೀನಿನಲ್ಲಿ ಲಾಭದಾಯಕ ಬೆಳೆಗಳನ್ನು ಬೆಳೆಯಲು ಮುಂದಾಗಿ, ಆರ್ಥಿಕವಾಗಿ ಸಬಲರಾಗಬೇಕು.
-ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.