ADVERTISEMENT

ವಿಜಯಪುರ | ಕೃಷಿ ಮೇಳ: ರೈತರಿಗೆ ಭರಪೂರ ಮಾಹಿತಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2024, 7:17 IST
Last Updated 22 ಜನವರಿ 2024, 7:17 IST
ಫಲಪುಷ್ಪ ಪ್ರದರ್ಶನದಲ್ಲಿ ತರಕಾರಿಗಳ ರಂಗೋಲಿ ಗಮನ ಸೆಳೆಯಿತು –ಪ್ರಜಾವಾಣಿ ಚಿತ್ರ/ ಸಂಜೀವ ಅಕ್ಕಿ
ಫಲಪುಷ್ಪ ಪ್ರದರ್ಶನದಲ್ಲಿ ತರಕಾರಿಗಳ ರಂಗೋಲಿ ಗಮನ ಸೆಳೆಯಿತು –ಪ್ರಜಾವಾಣಿ ಚಿತ್ರ/ ಸಂಜೀವ ಅಕ್ಕಿ   

ವಿಜಯಪುರ: ಬರಗಾಲ ಸಮಯದಲ್ಲಿ ಜಿಲ್ಲೆಯ ರೈತರಿಗೆ ಸಹಕಾರಿಯಾಗಲಿ ಎನ್ನುವ ಉದ್ದೇಶದಿಂದ ಕೃಷಿಕರ ಶ್ರಮ ಸರಳಗೊಳಿಸಲು ಆಯೋಜಿಸಿದ್ದ ಕೃಷಿಮೇಳ ರೈತರ ಜಾತ್ರೆಯಾಗಿ ಮನಸೆಳೆಯಿತು.

ಕೃಷಿಮೇಳ ರೈತರಿಗೆ ಮಾಹಿತಿ ನೀಡುವ ಮಾಮರವಾಗಿತ್ತು. ಕೃಷಿ ಪೂರಕ ಚಟುವಟಿಕೆಗಳಿಂದ ಹಿಡಿದು ಎಲ್ಲವೂ ಇಲ್ಲಿ ಅನಾವರಣಗೊಂಡಿತ್ತು.

ಸಮಾರಂಭದ ಉದ್ಘಾಟನೆ, ಮಳಿಗೆಗಳ ಉದ್ಘಾಟನೆ ಸೇರಿದಂತೆ ಇನ್ಯಾವುದರತ್ತವೂ ಚಿತ್ತ ಹರಿಸದ ರೈತ ಸಮೂಹ ತಂಡೋಪ ತಂಡವಾಗಿ, ಪ್ರತಿ ಮಳಿಗೆಗೂ ಭೇಟಿ ನೀಡಿ ಏನಿದೆ? ಎಂದು ಅಲ್ಲಿನ ವಿಶೇಷತೆ ಬಗ್ಗೆ ಮಾಹಿತಿ ಪಡೆದು ಕರಪತ್ರ, ಕೈಪಿಡಿಗಳನ್ನು ತಮ್ಮ ಕೈಚೀಲಗಳಲ್ಲಿ ಜೋಪಾನವಾಗಿ ಕಾಪಿಟ್ಟುಕೊಂಡ ದೃಶ್ಯಗಳು ಕಂಡುಬಂದವು.

ADVERTISEMENT

‘ಸುಸ್ಥಿರ ಕೃಷಿಗಾಗಿ ಬರ ನಿರ್ವಹಣೆ’ ಘೋಷ ವಾಕ್ಯದಡಿ ಹಿಟ್ನಳ್ಳಿ ಬಳಿಯ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ಭಾನುವಾರ ಆರಂಭಗೊಂಡ ಮೂರು ದಿನಗಳ ಕೃಷಿ ಮೇಳ ಪ್ರದರ್ಶನ ಇಂತಹ ಅನೇಕ ವಿಶೇಷತೆಗಳಿಂದ ಗಮನ ಸೆಳೆಯಿತು.

ಮೇಳಕ್ಕೆ ಬೆಳಿಗ್ಗೆಯಿಂದ ಜಿಲ್ಲೆಯ ವಿವಿಧೆಡೆಯಿಂದ ಜನಸಮೂಹ ತಂಡೋಪ ತಂಡವಾಗಿ ಮುಸ್ಸಂಜೆ ವರೆಗೂ ಆಗಮಿಸಿತು. ಆವರಣದಲ್ಲಿ 140ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ಅತಿ ಎತ್ತರ ಬೆಳೆಯುವ ಕಬ್ಬು, ಹೆಚ್ಚು ಇಳುವರಿ ಕೊಡುವ ದ್ರಾಕ್ಷಿ, ವಿವಿಧ ಬಗೆಯ ಅಲಂಕಾರಿಕ ಸಸ್ಯಗಳು, ತೋಟಗಾರಿಕೆ ಬೆಳೆಗಳು, ತರಕಾರಿ ಬೆಳೆಗಳ ಬಿತ್ತನೆ ಬೀಜಗಳು, ಕೃಷಿ ಪರಿಕರಗಳು, ಯಂತ್ರೋಪಕರಣಗಳ ಮಳಿಗೆಗಳ ಮುಂದೆ ರೈತರು ಮುಗಿಬಿದ್ದು ಮಾಹಿತಿ ಪಡೆದರು.

ಎರೆಹುಳು ಗೊಬ್ಬರ, ಎರೆಹುಳ ಜಲ ಘಟಕ, ಕೃಷಿ ಮಾದರಿಗಳು, ವಿವಿಧ ಕಂಪನಿಗಳ ಮಳಿಗೆಗಳು ಗಮನ ಸೆಳೆಯುತ್ತಿವೆ. ಟ್ರ್ಯಾಕ್ಟರ್, ಬಿತ್ತನೆ ಯಂತ್ರ, ರಾಶಿ ಮಾಡುವ ಯಂತ್ರ, ಔಷಧ ಸಿಂಪಡಣೆ ಮಾಡುವ ಟ್ರ್ಯಾಕ್ಟರ್, ನೀರು ಕಾಯಿಸುವ ಬಂಬ್, ವಿವಿಧ ಬಗೆಯ ತರಕಾರಿ, ಹಣ್ಣುಗಳು, ಹೂ ನೋಡಲು ಜನರು ನಾಮುಂದು, ತಾಮುಂದು ಎಂದು ಸರತಿಯಲ್ಲಿ ನಿಲ್ಲುತ್ತಿದ್ದರು.

ಕೃಷಿಮೇಳದಲ್ಲಿ ಆಗಮಿಸಿದ್ದ ಬಿತ್ತನೆ ಯಂತ್ರವನ್ನು ವೀಕ್ಷಿಸಿಸುತ್ತಿರುವ ರೈತರು. ಪ್ರಜಾವಾಣಿ ಚಿತ್ರ/ ಸಂಜೀವ ಅಕ್ಕಿ
ಕೃಷಿಮೇಳದ ಮಳಿಗೆಯೊಂದರಲ್ಲಿ ಗೋಧಿಯ ಹೊಸ ತಳಿಗಳ ಬಗ್ಗೆ ರೈತನೊಬ್ಬ ಮಾಹಿತಿ ಪಡೆದರು. ಪ್ರಜಾವಾಣಿ ಚಿತ್ರ/ ಸಂಜೀವ ಅಕ್ಕಿ
ಬೆಳೆಗಳಿಗೆ ಔಷಧ ಸಿಂಪಡಿಸುವ ಡ್ರೋನ್ ಕೃಷಿ ಮೇಳದಲ್ಲಿ ರೈತರ ಗಮನ ಸೆಳೆಯಿತು. ಪ್ರಜಾವಾಣಿ ಚಿತ್ರ/ ಸಂಜೀವ ಅಕ್ಕಿ
ಕೃಷಿ ಮೇಳವನ್ನು ರೈತರು ಬರ ಪರಿಸ್ಥಿತಿಯನ್ನು ಸರ್ಮರ್ಥವಾಗಿ ನಿರ್ವಹಸಲು ಅನೂಕೂಲವಾಗಲೆಂದು ಆಯೋಜಿಸಲಾಗಿದೆ. ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಾಹಿತಿ ಪಡೆಯಬೇಕು
ಆರ್‌.ಬಿ ಬೆಳ್ಳಿ ಸಹವಿಸ್ತರಣಾ ನಿರ್ದೇಶಕ
ಬರಗಾಲ ಸಂದರ್ಭದಲ್ಲಿ ರೈತರ ಅನುಕೂಲಕ್ಕಾಗಿ ಕೃಷಿಮೇಳ ಆಯೋಜಿಸಿದ್ದು ಸಂತಸ. ವಿವಿಧ ತಳಿಯ ಬೀಜಗಳನ್ನು ಖರೀದಿಸಿದ್ದೇನೆ
ಶಿವಪ್ಪ ಕಂಬಾರ ಇಬ್ರಾಹಿಂಪುರ ರೈತ
ಬೆಳೆಗೆ ಔಷಧ ಸಿಂಪಡಿಸುವ ಡ್ರೋನ್!
ಬೆಳೆಗಳಿಗೆ ಔಷಧ ಸಿಂಪಡಿಸುವ ಡ್ರೋನ್ ಕೃಷಿ ಮೇಳದಲ್ಲಿ ರೈತರ ಗಮನ ಸೆಳೆಯಿತು. 10 ಲೀಟರ್ ಸಾಮರ್ಥ್ಯದ ಟ್ಯಾಂಕ್ ಹೊಂದಿರುವ ಈ ಡ್ರೋನ್ 10 ರಿಂದ 15 ನಿಮಿಷ ಚಾರ್ಜ್ ಮಾಡಿದರೆ ಒಂದು ಗಂಟೆಯಲ್ಲಿ ಸುಮಾರು 6 ರಿಂದ 7 ಎಕರೆ ಪ್ರದೇಶದ ಬೆಳೆಗೆ ಔಷಧ ಸಿಂಪಡಿಸುವ ಸಾಮರ್ಥ್ಯ ಹೊಂದಿದೆ.

ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ

ಮುಖ್ಯ ವೇದಿಕೆಯಿಂದ ಅಣತಿ ದೂರದಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಸಾರ್ವಜನಿಕರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ದ್ವಾರದ ಮುಂಭಾಗದಲ್ಲಿ ವಿವಿಧ ಹಣ್ಣು ತರಕಾರಿಗಳಿಂದ ತಯಾರಿಸಿದ ರಂಗೋಲಿ ರೈತರನ್ನು ಸ್ವಾಗತಿಸಿತು.  ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ನಿಶ್ಚಿತಾ.ಪಿ ಪಾಟೀಲ ಕೈಚರಳಕದಲ್ಲಿ ಕಲ್ಲಂಗಡಿಯಲ್ಲಿ ಅರಳಿದ ಶಿವ ಸುಭಾಷಚಂದ್ರ ಭೋಸ್‌ ಅಬ್ದುಲ್‌ ಕಲಾಂ ದ.ರಾ ಬೇಂದ್ರೆ ಬುದ್ಧರ ಕಲಾಕೃತಿಗಳು ಗಮನ ಸೆಳೆದವು. ಜರ್ಬೇರಾ ಕಾರ್ನೇಷನ್ ಸುಗಂಧರಾಜ ಗುಲಾಬಿ ಸೆವಂತಿ ಆರ್ಕಿಡ್ಸ್ ಜಿಪ್ಸೋಫಿಲಾ ಆಲ್ಪಿನಿಯ ಬರ್ಡ್ ಆಫ್ ಪ್ಯಾರಾಡೈಸ್ ಗೋಲ್ಡನ್ ರಾಡ್ ಆ್ಯಂಥೋರಿಯಮ್ ಹೆಲಿಕೋನಿಯ ಹೀಗೆ ಹತ್ತಾರು ಬಗೆಯ ಹೂಗಳು ಆಕರ್ಷಿಸಿದವು. ಇಲ್ಲಿನ ವಿದ್ಯಾರ್ಥಿಗಳೇ ಹೂವುಗಳಿಂದ ನಿರ್ಮಿಸಿದ ಗೋಳಗುಮ್ಮಟ ನೋಡಿದ ಜನರು ಮೊಬೈಲ್‌ನಲ್ಲಿ ಫೋಟೊ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.