ಕೊಲ್ಹಾರ: ಸರ್ಕಾರ ಕೈಗಾರಿಕಾ ವಸಾಹಾತು ಪ್ರದೇಶಕ್ಕೆ ವಶಪಡಿಸಿಕೊಳ್ಳುವ ಜಮೀನುಗಳಿಗೆ ರೈತರ ಬೇಡಿಕೆಯಂತೆ ₹50 ಲಕ್ಷ ಹಾಗೂ ಒಂದು ಕೋಟಿವರೆಗೆ ಪರಿಹಾರ ಧನ ಕೊಟ್ಟ ಉದಾಹರಣೆಗಳು ಸಾಕಷ್ಟಿದೆ. ಆದರೆ ಕೃಷ್ಣಾ ನದಿ ಹಿನ್ನೀರಿನ ಮುಳಗಡೆಯಾಗುವ ಜಮೀನುಗಳಿಗೆ ಪರಿಹಾರ ಧನ ಕೊಡುವಲ್ಲಿ ಏಕೆ ತಾರತಮ್ಯ ಮಾಡುತ್ತಿದೆ ಎಂದು ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆಯ ಪ್ರಕಾಶ ಅಂತರಗೊಂಡ ಪ್ರಶ್ನಿಸಿದರು.
ಪಟ್ಟಣದ ಯುಕೆಪಿ ವೃತ್ತದ ಪ್ರವಾಸಿ ಮಂದಿರದ ಎದುರುಗಡೆ ಮಂಗಳವಾರ ಕೃಷ್ಣಾ ಮೇಲ್ದಂಡೆ ಯೋಜನೆಯ 524ಮೀ ಎತ್ತರಿಸುವ ಅಡಿಯಲ್ಲಿ ಮುಳಗಡೆಯಾಗುವ ಜಮೀನುಗಳಿಗೆ ಯೋಗ್ಯ ಬೆಲೆ ಸಿಗಬೇಕೆಂದು ಆಗ್ರಹಿಸಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ನೇತೃತ್ವದಲ್ಲಿ ರೈತರು ಹಮ್ಮಿಕೊಂಡ ಸರದಿ ಉಪವಾಸ ಸತ್ಯಾಗ್ರಹದಲ್ಲಿ ಮಂಗಳವಾರ 2ನೇ ದಿನದ ಕಾರ್ಯಕ್ರಮದಲ್ಲಿ ಬೆಂಬಲ ನೀಡಿ ಮಾತನಾಡಿದರು.
ದೇವನಹಳ್ಳಿ ಹುಬ್ಬಳ್ಳಿ ಬಳಿ ರೈತರ ಜಮೀನುಗಳಿಗೆ ಎಕರೆಗೆ ₹50 ಲಕ್ಷ ಪರಿಹಾರ ಧನ ಕೊಡಲಾಗಿದೆ. ಅವಳಿ ಜಿಲ್ಲೆಯ ರೈತರಿಗೂ ಕೂಡ ವೈಜ್ಞಾನಿಕ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ಇಂದಿನ ಮಾರುಕಟ್ಟೆಯ ದರದಂತೆ ರೈತರಿಗೆ ಮರಳಿ ಜಮೀನು ಪಡೆಯಲು ಅನುಕೂಲವಾಗುವ ರೀತಿಯಲ್ಲಿ ಬೆಲೆ ನಿಗದಿ ಮಾಡಬೇಕು. ಇಲ್ಲದಿದ್ದರೆ ಈ ಭಾಗದ ರೈತರ ಸಮಾಧಿ ಮೇಲೆ ಸರ್ಕಾರ ನಡೆಸಿದಂತಾಗುತ್ತದೆ. ಯಾವುದೇ ಕಾರಣಕ್ಕೂ ಕೃಷ್ಣಾ ತೀರದ ರೈತರಿಗೆ ಅನ್ಯಾಯವಾಗದಂತೆ ಎಚ್ಚರವಹಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಇಂದಿನ ಸಚಿವ ಸಂಪುಟದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಅಡಿಯಲ್ಲಿ ಮುಳಗಡೆಯಾಗುವ ರೈತರ ಜಮೀನುಗಳಿಗೆ ಕೃಷಿ ಭೂಮಿಗೆ ₹40 ಲಕ್ಷ, ಒಣ ಬೇಸಾಯ ಭೂಮಿಗೆ ₹30 ಲಕ್ಷ ನಿಗದಿ ಮಾಡಿ ನಿರ್ಣಯ ಕೈಕೊಂಡಿರುವುದು ಅವೈಜ್ಞಾನಿಕವಾಗಿದೆ. ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರು ಈ ನಿರ್ಣಯವನ್ನು ಹಿಂದಕ್ಕೆ ಪಡೆಯಬೇಕು. ಇದಕ್ಕೆ ನಮ್ಮ ಸಹಮತವಿಲ್ಲ ನಮ್ಮ ಹೋರಾಟ ನಮ್ಮ ಬೇಡಿಕೆಯಂತೆ ನೀರಾವರಿ ಭೂಮಿಗೆ ಎಕರೆಗೆ ₹55 ಲಕ್ಷ, ಒಣಬೇಸಾಯಕ್ಕೆ ₹45 ಲಕ್ಷ ಪರಿಹಾರ ಧನ ಘೋಷಣೆ ಮಾಡುವವರೆಗೂ ಬಿಡುವುದಿಲ್ಲ ಎಂದರು.
ಏತನೀರಾವರಿಯ ಕಾಲುವೆ ಕಾಮಗಾರಿಗಾಗಿ ಬಳಸಿಕೊಂಡ ಜಮೀನುಗಳಿಗೆ ನಿಗದಿ ಮಾಡಿದ ಪರಿಹಾರ ಧನದಲ್ಲಿ ವ್ಯತ್ಯಾಸ ಮಾಡಿ ಪರಿಹಾರ ಧನ ಕೊಡುತ್ತೇವೆ ಎಂದಿರುವುದು ಕೂಡಾ ಸರಿಯಾದ ಕ್ರಮವಲ್ಲ. ಮೂರು ವರ್ಷದ ಆರ್ಥಿಕ ವರ್ಷದಲ್ಲಿ ರೈತರ ಜಮೀನುಗಳಿಗೆ ಪರಿಹಾರ ಮಂಜೂರು ಮಾಡುವುದು ಕೂಡ ಸೂಕ್ತವಾದುದಲ್ಲ ಎಂದರು.
ನಾಳೆ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಇದೇ ವೇದಿಕೆಯಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದ್ದು ತದನಂತರ ಅವಳಿ ಜಿಲ್ಲೆಗಳಿಂದ ಆಗಮಿಸುವ ರೈತ ಮುಖಂಡರೊಂದಿಗೆ ಸತ್ಯಾಗ್ರಹದ ರೂಪುರೇಷಗಳ ಕುರಿತು ಚರ್ಚಿಸಲಾಗುವುದು. ಮುಳುಗಡೆಯ ಗ್ರಾಮಗಳಾದ ಹೊಳೆಹಂಗರಗಿ, ಜೈನಾಪೂರ, ಬೆಳ್ಳುಬ್ಬಿ, ಮಂಗಳೂರು, ದ್ಯಾವಾಪೂರ, ತಾಜಪುರ, ದೇವರಗೆಣ್ಣೂರ ಭಾಗಗಳಿಂದ ಬೈಕ್ ರ‍್ಯಾಲಿ ಮುಖಾಂತರ ನೂರಾರು ರೈತರು ಆಗಮಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿ 2ನೇ ದಿನದ ಸರದಿ ಉಪವಾ ಸತ್ಯಾಗ್ರಹದಲ್ಲಿ ಪಾಲ್ಗೊಂಡರು.
ಶೀಲವಂತ ಹಿರೇಮಠದ ಕೈಲಾಸನಾಥ ಶ್ರೀಗಳು, ಜೈನಾಪೂರದ ಪ್ರಭುಸ್ವಾಮಿ ಹಿರೇಮಠ, ಸಿದ್ದು ದೇಸಾಯಿ, ಚಿನ್ನಪ್ಪ ಗಿಡ್ಡಪ್ಪಗೋಳ, ಸಗರೆಪ್ಪ ಮುರನಾಳ, ಡೋಂಗ್ರಸಾಬ ಗಿರಗಾಂವಿ, ಇಸ್ಮಾಯಿಲ್‌ಸಾಬ್ ತಹಶೀಲ್ದಾರ್, ನಂದಬಸಪ್ಪ ಚೌದರಿ, ಸಂಚಾಲಕರಾದ ಜಗದೀಶ ಸುಣಗದ, ಚಂದ್ರಶೇಖರ ಬೆಳ್ಳುಬ್ಬಿ, ರಾಮಣ್ಣ ಬಾಟಿ, ಅನೇಕ ರೈತ ಮುಖಂಡರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಪಾಲ್ಗೊಂಡಿದ್ದರು. ಜಾನಪದ ಕಲಾವಿದರಿಂದ ಭಜನಾ ಪದ, ಜಾನಪದ ಪದಗಳನ್ನು ಹಾಡುತ್ತಿರುವುದು ರೈತರಿಗೆ ಹುಮ್ಮಸ್ಸು ತುಂಬಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.