ADVERTISEMENT

ಕೃಷ್ಣಾ ಅಚ್ಚುಕಟ್ಟು: 20ರಿಂದ ಕಾಲುವೆಗೆ ನೀರು

ನ.16ರ ವರೆಗೆ ಮುಂಗಾರು ಹಂಗಾಮಿಗೆ ನೀರು; ಸದ್ಯಕ್ಕಿಲ್ಲ ವಾರಾಬಂದಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 13:23 IST
Last Updated 17 ಜುಲೈ 2021, 13:23 IST
ಆಲಮಟ್ಟಿಯ ಕೃಷ್ಣಾ ಜಲಭಾಗ್ಯ ನಿಗಮದ ಕಚೇರಿಯಲ್ಲಿ ಶನಿವಾರ ಸಚಿವ ಉಮೇಶ ಕತ್ತಿ ಅಧ್ಯಕ್ಷತೆಯಲ್ಲಿ ನೀರಾವರಿ ಸಲಹಾ ಸಮಿತಿ(ಐಸಿಸಿ) ಸಭೆ ಜರುಗಿತು
ಆಲಮಟ್ಟಿಯ ಕೃಷ್ಣಾ ಜಲಭಾಗ್ಯ ನಿಗಮದ ಕಚೇರಿಯಲ್ಲಿ ಶನಿವಾರ ಸಚಿವ ಉಮೇಶ ಕತ್ತಿ ಅಧ್ಯಕ್ಷತೆಯಲ್ಲಿ ನೀರಾವರಿ ಸಲಹಾ ಸಮಿತಿ(ಐಸಿಸಿ) ಸಭೆ ಜರುಗಿತು   

ಆಲಮಟ್ಟಿ: ಜುಲೈ 20ರಿಂದ ನವೆಂಬರ್ 16ರ ವರೆಗೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ನೀರು ಹರಿಸಲು ಶನಿವಾರ ಇಲ್ಲಿನ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ(ಐಸಿಸಿ) ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಐಸಿಸಿ ಅಧ್ಯಕ್ಷರೂ ಆದ ಸಚಿವ ಉಮೇಶ ಕತ್ತಿ, ‘ಆಲಮಟ್ಟಿ ಜಲಾಶಯ ವ್ಯಾಪ್ತಿಯ ಎಲ್ಲ ಕಾಲುವೆಗಳು, ನಾರಾಯಣಪುರ ಎಡದಂಡೆ ಹಾಗೂ ಅದರ ವ್ಯಾಪ್ತಿಯ ಎಲ್ಲ ಶಾಖಾ ಕಾಲುವೆಗಳಿಗೆ ಜುಲೈ 20ರಿಂದ ನೀರು ಹರಿಸಲಾಗುವುದು’ ಎಂದು ಮಾಹಿತಿ ನೀಡಿದರು

‘ನಾರಾಯಣಪುರ ಬಲದಂಡೆ ಕಾಲುವೆ ವ್ಯಾಪ್ತಿಯಲ್ಲಿ ಕಾಲುವೆಯ ದುರಸ್ತಿಯ ಕಾಮಗಾರಿ ಪ್ರಗತಿಯಲ್ಲಿದ್ದು, ಅಲ್ಲಿ ಜುಲೈ 31ರಿಂದ ಆರಂಭಿಸಿ ನವೆಂಬರ್ 27ರ ವರೆಗೆ ನೀರು ಹರಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ನೀರಿನ ಸಂಗ್ರಹ:

‘ಆಲಮಟ್ಟಿಯಲ್ಲಿ ಬಳಕೆಗೆ ಯೋಗ್ಯವಾದ 76.745 ಟಿಎಂಸಿ ಅಡಿ ಹಾಗೂ ನಾರಾಯಣಪುರ ಜಲಾಶಯದಲ್ಲಿ 14.98 ಟಿಎಂಸಿ ಅಡಿ ನೀರು ಸೇರಿದಂತೆ ಶನಿವಾರದ ವರೆಗೆ ಒಟ್ಟು 91.725 ಟಿಎಂಸಿ ಅಡಿ ನೀರಿನ ಸಂಗ್ರಹವಿತ್ತು. ಕಳೆದ ವರ್ಷಕ್ಕಿಂತ ಈ ವರ್ಷ 7 ಟಿಎಂಸಿ ಅಡಿ ನೀರು ಹೆಚ್ಚಿನ ಸಂಗ್ರಹವಿದೆ’ ಎಂದು ಕತ್ತಿ ವಿವರಿಸಿದರು.

‘ಕುಡಿಯುವ ನೀರು, ಕೈಗಾರಿಕೆ, ಭಾಷ್ಪೀಕರಣ ಸೇರಿ ಇತರ ಬಳಕೆಗೆ 12 ಟಿಎಂಸಿ ಅಡಿ, ನೀರಾವರಿಗೆ 67 ಟಿಎಂಸಿ ಅಡಿ ಸೇರಿ 79 ಟಿಎಂಸಿ ಅಡಿ ನೀರು ಅಗತ್ಯವಿದೆ. ಆದರೆಮ ಜಲಾಶಯದಲ್ಲಿ 91 ಟಿಎಂಸಿ ಅಡಿ ನೀರು ಸಂಗ್ರಹವಿದ್ದು, ಮುಂಗಾರು ಹಂಗಾಮಿಗೆ ನೀರು ಹರಿಸಲು ಯಾವುದೇ ತೊಂದರೆಯಿಲ್ಲ’ ಎಂದರು.

5.27 ಲಕ್ಷ ಹೆಕ್ಟೇರ್‌ಗೆ ನೀರು:

ಪ್ರಸಕ್ತ ಮುಂಗಾರು ಹಂಗಾಮಿಗೆ 6.590 ಲಕ್ಷ ಹೆಕ್ಟೇರ್ ಕ್ಷೇತ್ರದ ಶೇ 80 ಕ್ಷೇತ್ರಕ್ಕೆ ಅಂದರೇ 5.27 ಲಕ್ಷ ಹೆಕ್ಟೇರ್‌ಗೆ ಮುಂಗಾರು ಹಾಗೂ ದ್ವಿರುತು ಹಂಗಾಮಿನ ಬೆಳೆಗಳನ್ನು ಬೆಳೆಯಲು ನೀರು ಒದಗಿಸಲು ನಿರ್ಣಯಿಸಲಾಗಿದೆ.

ವಾರಾಬಂದಿ ಇಲ್ಲ: ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಇರುವ ತನಕ ಎಲ್ಲ ಕಾಲುವೆಗಳಿಗೂ ನಿರಂತರವಾಗಿ ನೀರು ಹರಿಸಲಾಗುವುದು. ಒಳಹರಿವು ಸ್ಥಗಿತಗೊಂಡ ನಂತರ 14 ದಿನ ಚಾಲು ಹಾಗೂ 8 ದಿನ ಬಂದ್ ಪದ್ಧತಿ ಅನುಸರಿಸಲಾಗುವುದು ಎಂದು ಕತ್ತಿ ತಿಳಿಸಿದರು.

ನವೆಂಬರ್ ತಿಂಗಳಲ್ಲಿ ಮತ್ತೆ ಐಸಿಸಿ ಸಭೆ ನಡೆಸಿ ಹಿಂಗಾರು ಹಂಗಾಮಿನ ನೀರಿನ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಕೆಎಸ್‌ಐಎಸ್‌ಎಫ್ ಭದ್ರತೆ: ಆಲಮಟ್ಟಿ ಜಲಾಶಯಕ್ಕೆ ಇರುವಂತೆ ನಾರಾಯಣಪುರ ಜಲಾಶಯ ಹಾಗೂ ಹಿಡಕಲ್ ಜಲಾಶಯಗಳಿಗೂ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ(ಕೆಎಸ್‌ಐಎಸ್‌ಎಫ್) ಭದ್ರತೆ ಒದಗಿಸಲು ಪ್ರಸ್ತಾವ ಸಲ್ಲಿಸಲಾಗುವುದು ಎಂದು ಕತ್ತಿ ಮಾಹಿತಿ ನೀಡಿದರು.

ಸಭೆಯಲ್ಲಿ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ಎ.ಎಸ್.ಪಾಟೀಲ (ನಡಹಳ್ಳಿ), ವೀರಣ್ಣ ಚರಂತಿಮಠ, ಸೋಮನಗೌಡ ಪಾಟೀಲ, ವೆಂಕಟರೆಡ್ಡಿ ಮುದ್ನಾಳ, ಶಿವನಗೌಡ ನಾಯಕ, ದೊಡ್ಡನಗೌಡ ಪಾಟೀಲ, ನರಸಿಂಹ ನಾಯಕ (ರಾಜುಗೌಡ), ಡಿ.ಎಸ್. ಹೂಲಗೇರಿ, ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಕೆಬಿಜೆಎನ್‌ಎಲ್ ಎಂ.ಡಿ ಪ್ರಭಾಕರ ಚಿಣಿ, ಮುಖ್ಯ ಎಂಜಿನಿಯರ್‌ಗಳಾದ ಎಚ್.ಸುರೇಶ, ಪ್ರದೀಪ ಮಿತ್ರ ಮಂಜುನಾಥ, ಜಿಲ್ಲಾಧಿಕಾರಿ ಪಿ.ಸುನಿಲಕುಮಾರ ಸೇರಿದಂತೆ ಕೃಷಿ, ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.