ADVERTISEMENT

ಸಮ್ಮೇಳನಾಧ್ಯಕ್ಷ ಮಾಡಿದರೂ ಆಗುವವನಲ್ಲ: ಕುಂ.ವೀ.

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 15:05 IST
Last Updated 27 ಏಪ್ರಿಲ್ 2025, 15:05 IST
   

ವಿಜಯಪುರ: ‘ಬಳ್ಳಾರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನನ್ನಾಗಿ ಮಾಡಿದರೂ ನಾನು ಆಗುವವನಲ್ಲ. ಯಾವುದೇ ಅಧ್ಯಕ್ಷ ಸ್ಥಾನದ ಆಸೆ ನನಗಿಲ್ಲ’ ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.

ನಗರದ ಕಂದಗಲ್ ಹಣಮಂತರಾಯ ರಂಗ ಮಂದಿರದಲ್ಲಿ ವಿಜಯಪುರದ ಚನ್ನಬಸಮ್ಮಾ ಚಂದಪ್ಪ ಪ್ರತಿಷ್ಠಾನ, ಸಮಾನ ಮನಸ್ಕರ ವೇದಿಕೆಯಿಂದ ಭಾನುವಾರ ಆಯೋಜಿಸಿದ್ದ ಸಾಹಿತಿ ಸುಜಾತಾ ಚಲವಾದಿ ವಿರಚಿತ ‘ಲಚಮವ್ವ ಮತ್ತು ಇತರ ಕತೆಗಳು’ ಹಾಗೂ ‘ಅಂಬೇಡ್ಕರ್ ಅರಿವಿನ ಜತೆಗಾರ’ ಗ್ರಂಥಗಳ ಜನಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕುಂ.ವೀರಭದ್ರಪ್ಪ ಬಳ್ಳಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗಿರಿ ಮೇಲೆ ಕಣ್ಣಿಟ್ಟಿದ್ದಾನೆ. ಹೀಗಾಗಿ ಮಹೇಶ ಜೋಶಿ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾನೆ’ ಎಂದು ಬೆಂಗಳೂರು, ಮೈಸೂರು ಜನ ಆರೋಪ ಹೊರಿಸಿರುವುದು ಖಂಡನೀಯ’ ಎಂದರು.

ADVERTISEMENT

‘ಬುದ್ಧ, ಬಸವಣ್ಣ, ಅಂಬೇಡ್ಕರ್‌ ಅವರಂತ ದಾರ್ಶನಿಕರ ಮೇಲೆ ಆಣೆ ಮಾಡಿ ಹೇಳುತ್ತಿದ್ದೇನೆ. ನಾನು ಯಾವುದೇ ಆಮಿಷಕ್ಕೆ ಒಳಗಾಗಿರುವ ಲೇಖಕನಲ್ಲ. ನನ್ನನ್ನು ಯಾರೂ ಮಿಸುಕಾಡಿಸಲು ಸಾಧ್ಯವಿಲ್ಲ. ಯಾವುದೇ ಬಿರುಗಾಳಿ, ಚಂಡಮಾರುತ ನನ್ನನ್ನು ಅಲ್ಲಾಡಿಸಲು ಸಾಧ್ಯವಿಲ್ಲ’ ಎಂದರು.

‘ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ ಜೋಶಿ ಸೇರಿದಂತೆ ಯಾವುದೇ ಸರ್ವಾಧಿಕಾರಿ, ಭ್ರಷ್ಟಾಧಿಕಾರಿ ಸಮರ್ಥಕ ನಾನಲ್ಲ, ಸರ್ವಾಧಿಕಾರಿ ಶಕ್ತಿ ವಿರುದ್ಧ ನಾನು ಮೌನವಾಗಿಯೇ ವಿರೋಧಿಸುತ್ತಾ ಬಂದಿದ್ದೇನೆ. ಬಳ್ಳಾರಿ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿಲಿ ಎಂಬ ಒಂದೇ ಕಾರಣಕ್ಕೆ ನಾನು ಸುಮ್ಮನಿದ್ದೇನೆ’ ಎಂದು ಹೇಳಿದರು.

‘ಮಹೇಶ ಜೋಶಿ ಅವರ ಸರ್ವಾಧಿಕಾರಿ ಧೋರಣೆ ವಿರುದ್ಧ ನಾನು ಹೇಳಿಕೆ ನೀಡಿದ್ದೆ. ಅದಕ್ಕೆ ಜೋಶಿ ಅವರು ಫೋನ್‌ ಮಾಡಿ ನಿಮ್ಮ ಜಿಲ್ಲೆಯಲ್ಲಿ ಸಮ್ಮೇಳನ ನಡೆಯುತ್ತಿದೆ. ನೀವೇ ಹೇಳಿಕೆ ನೀಡಿದರೆ ಹೇಗೆ? ಎಂದರು. ಹೀಗಾಗಿ ಅವರ ವಿರುದ್ಧದ ಹೇಳಿಕೆ ಹಿಂಪಡೆದಿದ್ದೇನೆಯೇ ಹೊರತು, ಬೇರೆ ಉದ್ದೇಶವಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಹೊಡಕೊಂಡವರು, ಪಡಕೊಂಡವರು ನನ್ನ ವಿರುದ್ಧ ಟೀಕೆ ಮಾಡುತ್ತಿರುವುದು ಖಂಡನೀಯ. ಜೋಶಿ ವಿರುದ್ಧ ಹೋರಾಡುವವರು ಹೋರಾಡಿ, ದಯವಿಟ್ಟು ಅದರಿಂದ ನನ್ನನ್ನು ದೂರವಿಡಿ’ ಎಂದು ವಿನಂತಿಸಿಕೊಂಡರು.

ಯುದ್ಧವಾದರೆ ಪರಿಸ್ಥಿತಿ ಹೇಳತೀರದು:

‘ರಷ್ಯ– ಉಕ್ರೇನ್‌, ಇಸ್ರೇಲ್‌–ಪ್ಯಾಲಿಸ್ಟೇನ್‌ ಯುದ್ಧದಿಂದ ಜಗತ್ತಿನ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಜೊತೆಗೆ ಅಮೇರಿಕಾ ಅಧ್ಯಕ್ಷ ಟ್ರಂಪ್‌ ನೀತಿಯಿಂದ ಇಡೀ ಪ್ರಪಂಚದ ಆರ್ಥಿಕ ಸ್ಥಿತಿ ಅಲ್ಲೋಲ, ಕಲ್ಲೋಲ ಆಗುತ್ತಿದೆ. ಈ ನಡುವೆ ಭಾರತವು ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಣೆಗೆ ಸಿದ್ಧತೆ ಮಾಡುತ್ತಿದೆ. ಇಲ್ಲೂ ಯುದ್ಧ ಶುರುವಾದರೆ ಪರಿಸ್ಥಿತಿ ಹೇಳತೀರದಷ್ಟು ಬಿಗಡಾಯಿಸುತ್ತದೆ’ ಎಂದು ಕುಂ.ವೀರಭದ್ರಪ್ಪ ಆತಂಕ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರ ₹ 9 ಲಕ್ಷ ಕೋಟಿ ಶ್ರೀಮಂತರ, ಕುಬೇರರ ಸಾಲವನ್ನು ಮನ್ನಾ ಮಾಡಿರುವುದನ್ನು ಯಾರೂ ಪ್ರಶ್ನಿಸುತ್ತಿಲ್ಲ. ಆದರೆ, ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆಯಡಿ ಹಸಿದ ಬಡವರಿಗೆ 5 ಕೆ.ಜಿ.ಅಕ್ಕಿ ಉಚಿತವಾಗಿ ನೀಡಿದಕ್ಕೆ ಬಾಯಿ ಬಡಿದುಕೊಳ್ಳುತ್ತಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಈ ದೇಶದ ಸಂವಿಧಾನವನ್ನು ಗೌರವಿಸದೇ ಇದ್ದರೆ ಅಂಬೇಡ್ಕರ್‌ ಅವರನ್ನು ಅಗೌರವಿಸಿದಂತೆ. ಮನು ಎಂಬ ಮುಠಾಳ ಬರೆದ ಸ್ಮೃತಿಯನ್ನು ಸಂವಿಧಾನದ ಸ್ಥಾನದಲ್ಲಿ ಇಡಬೇಕು ಎಂದು ಅನಂತಕುಮಾರ ಹೆಗಡೆ ಅವರಂತಹ ಅನೇಕ ಗೌರವಾನ್ವಿತ ಮುಠಾಳರು ಪ್ರಯತ್ನಿಸುತ್ತಿದ್ದಾರೆ. ಈ ಮುಠಾಳರ ವಿರುದ್ಧ ಪ್ರತಿಭಟಿಸದಿದ್ದರೇ ನಾವು ಉಳಿಯಲು ಸಾಧ್ಯವಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.