ADVERTISEMENT

ತಿಡಗುಂದಿ ವಿವಾದ: ಲಾಕ್‍ಡೌನ್ ನಿಯಮ ಉಲ್ಲಂಘಿಸಿಲ್ಲ ಎಂದ ಎಂ.ಬಿ ಪಾಟೀಲ

ತಿಡಗುಂದಿ ಜಲಸೇತುವೆಗೆ ಗಂಗಾಪೂಜೆ ವಿವಾದ: ಜಿಲ್ಲಾಧಿಕಾರಿಗೆ ಪತ್ರ ಬರೆದ ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2020, 13:47 IST
Last Updated 30 ಏಪ್ರಿಲ್ 2020, 13:47 IST
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ   

ವಿಜಯಪುರ: ‘ತಿಡಗುಂದಿ ಜಲಸೇತುವೆಗೆ ಗಂಗಾಪೂಜೆ ನೆರವೇರಿಸುವಾಗ ಲಾಕ್‍ಡೌನ್ ನಿಯಮ ಉಲ್ಲಂಘಿಸಿಲ್ಲ. ಅಲ್ಲದೇ, ಈ ಸಂದರ್ಭದಲ್ಲಿ ಪರಸ್ಪರ ಅಂತರವನ್ನು ಕಾಪಾಡಲಾಗಿದೆ’ ಎಂದು ಶಾಸಕ ಎಂ.ಬಿ.ಪಾಟೀಲ ತಿಳಿಸಿದ್ದಾರೆ.

ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಕಾರ್ಯಕ್ರಮ ನಡೆಸಲಾಗಿದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಆಕ್ಷೇಪ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಎಂ.ಬಿ.ಪಾಟೀಲ ಅವರೂ ಸಹ ಜಿಲ್ಲಾಧಿಕಾರಿಗೆ ಪತ್ರ ಮುಖೇನ ಸ್ಪಷ್ಟನೆ ನೀಡಿದ್ದಾರೆ.

‘ಗಂಗಾಪೂಜೆ ಸಂದರ್ಭದಲ್ಲಿ ಯಾವುದೇ ಸಭೆ, ಸಮಾರಂಭ ನಡೆಸಿಲ್ಲ. ಇದೊಂದು ಖಾಸಗಿ ಕಾರ್ಯಕ್ರಮವಾಗಿರುವುದರಿಂದ ಯಾವುದೇ ಶಿಷ್ಟಾಚಾರದ ಪ್ರಶ್ನೆಯೇ ಉದ್ಬವಿಸುವುದಿಲ್ಲ’ ಎಂದು ಇಂಡಿ ಶಾಸಕರಿಗೆ ತಿರುಗೇಟು ನೀಡಿದ್ದಾರೆ.

ADVERTISEMENT

‘ಮುಳವಾಡ ಏತನೀರಾವರಿ ಯೋಜನೆ, ತಿಡಗುಂದಿ ಜಲಸೇತುವೆಗೆ ಪ್ರಥಮ ಬಾರಿಗೆ ನೀರು ಹರಿದಾಗ ಸಂಪ್ರದಾಯದಂತೆ ಖಾಸಗಿಯಾಗಿ ಗಂಗಾಪೂಜೆ ನೆರವೇರಿಸಲಾಗಿದೆ. ಈ ಕುರಿತು ಕೆಲವರು ತಮಗೆ ದೂರು ನೀಡಿ, ಲಾಕ್‍ಡೌನ್ ನಿಯಮ ಉಲ್ಲಂಘಿಸಲಾಗಿದೆ. ಶಿಷ್ಟಾಚಾರ ಅನುಸಾರ ಕಾರ್ಯಕ್ರಮ ಜರುಗಿಸಿಲ್ಲ ಎಂದು ದೂರಿರುವುದರಲ್ಲಿ ಸತ್ಯಾಂಶವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಕೃಷಿ ಹಾಗೂ ತೋಟಗಾರಿಕಾ ಚಟುವಟಿಕೆಗಳಿಗೆ ಲಾಕ್‍ಡೌನ್‍ನಿಂದ ವಿನಾಯಿತಿ ಇದೆ. ಹೀಗಾಗಿ ಶಾಸಕರಾದ ದೇವಾನಂದ ಚವ್ಹಾಣ, ಬಸನಗೌಡ ಪಾಟೀಲ ಯತ್ನಾಳ ಮತ್ತು ನಾನು ಸೇರಿಕೊಂಡು ಸಾಂಕೇತಿಕವಾಗಿ ತಿಡಗುಂದಿ ಜಲಸೇತುವೆಗೆ ಗಂಗಾಪೂಜೆ ನೆರವೇರಿಸಿರುತ್ತೇವೆ’ ಎಂದು ತಿಳಿಸಿದ್ದಾರೆ.

‘ಕೊರೊನಾ ಸಂಕಷ್ಟದ ಸಮಯದಲ್ಲಿ ಲಾಕ್‍ಡೌನ್ ಪಾಲಿಸುವುದು ಮತ್ತು ಅಂತರವನ್ನು ಕಾಯ್ದಿಕೊಳ್ಳುವುದು ನಮ್ಮೆಲ್ಲರ ಆದ್ಯತೆಯಾಗಿದೆ. ಈ ಕುರಿತು ಜಿಲ್ಲಾಡಳಿತದ ಜೊತೆಗೆ ನಮ್ಮ ಬಿ.ಎಲ್.ಡಿ.ಇ ಸಂಸ್ಥೆಯ ವೈದ್ಯಕೀಯ ಕಾಲೇಜಿನ ವತಿಯಿಂದ ಮತ್ತು ಎಂ.ಬಿ.ಪಾಟೀಲ ಫೌಂಡೇಷನ್‌ನಿಂದ ಹತ್ತು ಹಲವು ಕಾರ್ಯಗಳನ್ನು ಕೊರೊನಾ ಆರಂಭದಿಂದ ಇದುವರೆಗೂ ಮಾಡುತ್ತಾ ಬಂದಿದ್ದೇವೆ’ ಎಂದು ಗಮನಕ್ಕೆ ತಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.