ವಿಜಯಪುರ: ಸಾರ್ವಜನಿಕರ ದೂರಿನ ಮೇರೆಗೆ ಹಾಗೂ ಲೋಕಾಯುಕ್ತ ವಾರೆಂಟ್ ಹಿನ್ನೆಲೆಯಲ್ಲಿ ವಿಜಯಪುರ ಮಹಾನಗರ ಪಾಲಿಕೆ ಕಚೇರಿಗಳ ಮೇಲೆ ಗುರುವಾರ ಲೋಕಾಯುಕ್ತ ಪೊಲೀಸರ ತಂಡ ದಾಳಿ ನಡೆಸಿದ್ದು, ತಡ ರಾತ್ರಿ ವರೆಗೂ ಪರಿಶೀಲನೆ ನಡೆಸಿದರು.
ಲೋಕಾಯುಕ್ತ ಎಸ್‌ಪಿ ಟಿ.ಮಲ್ಲೇಶ್ ನೇತೃತ್ವದಲ್ಲಿ ಒಬ್ಬ ಡಿಎಸ್‌ಪಿ, ಐದು ಜನ ಇನ್‌ಸ್ಪೆಕ್ಟರ್ ಸೇರಿದಂತೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ 40ಕ್ಕೂ ಅಧಿಕ ಸಿಬ್ಬಂದಿ ಮಹಾನಗರ ಪಾಲಿಕೆ ಜಲನಗರದ ಕೇಂದ್ರ ಕಚೇರಿ ಹಾಗೂ ಬಡಿ ಕಮಾನ್ ಬಳಿ ಇರುವ ವಲಯ ಕಚೇರಿ 1 ಮತ್ತು ಗಾಂಧಿ ಚೌಕಿಯಲ್ಲಿರುವ ವಲಯ ಕಚೇರಿ 2ರ ಮೇಲೆ ದಾಳಿ ನಡೆಸಿದ್ದು, ಕಾಗದ ಪತ್ರಗಳನ್ನು ತಡ ರಾತ್ರಿ 12ರ ವರೆಗೂ ಪರಿಶೀಲಿಸಿದರು. ಬಾರಿ ಅಕ್ರಮಗಳು ಪತ್ತೆಯಾಗಿವೆ.
‘ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ, ಪ್ರತಿಯೊಂದು ಕೆಲಸಕ್ಕೂ ಮಧ್ಯವರ್ತಿಗಳನ್ನು ಸಂಪರ್ಕಿಸಬೇಕು, ಅಧಿಕಾರಿಗಳು ಕೆಲಸ ಮಾಡಲು ಹಣಕ್ಕೆ ಬೇಡಿಕೆ ಇಡುತ್ತಾರೆ, ಅನಗತ್ಯವಾಗಿ ಸತಾಯಿಸುತ್ತಾರೆ ಎಂದು ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಯಿತು’ ಎಂದು ಲೋಕಾಯುಕ್ತ ಎಸ್‌ಪಿ ಟಿ.ಮಲ್ಲೇಶ್ ‘ಪ್ರಜಾವಾಣಿ’ಗೆ ಹೇಳಿದರು.
‘ದಾಳಿ ವೇಳೆ ಬಡಿ ಕಮಾನ್ ಬಳಿ ಇರುವ ಉಪ ಕಚೇರಿಯಲ್ಲಿ ಬಿಸಾಡಲಾಗಿದ್ದ ₹88 ಸಾವಿರ ನಗದು ಪತ್ತೆಯಾಗಿದೆ. ಉಳಿದಂತೆ ಪಾಲಿಕೆ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಅಧಿಕವಾಗಿರುವುದು ಕಂಡುಬಂದಿದೆ’ ಎಂದು ತಿಳಿಸಿದರು.
‘2024ರಿಂದ ಸಾರ್ವಜನಿಕರು ಸಲ್ಲಿಸಿರುವ ಇ ಖಾತಾ, ಅಂಗಡಿ, ವಾಣಿಜ್ಯ ಮಳಿಗೆಗಳಿಗೆ ಪರವಾನಗಿ, ಕಟ್ಟಡ ಪರವಾನಗಿ ಸೇರಿದಂತೆ ಇನ್ನಿತರ ಕೆಲಸಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಸಲ್ಲಿಸಿರುವ ಸಾವಿರಾರು ಅರ್ಜಿಗಳನ್ನು ಸಕಾರಣವಿಲ್ಲದೇ ಬಾಕಿ ಇರಿಸಿಕೊಂಡಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ’ ಎಂದು ಹೇಳಿದರು.
ದಾಳಿಯಿಂದ ಪಾಲಿಕೆ ಅಧಿಕಾರಿಗಳು ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. ಪರಿಶೀಲನೆ ವೇಳೆ ಯಾವುದೇ ಅಧಿಕಾರಿ, ಸಿಬ್ಬಂದಿ ಕಚೇರಿಯಿಂದ ಹೊರಹೋಗದಂತೆ ಕಚೇರಿಯ ಬಾಗಿಲುಗಳನ್ನು ಬಂದ್ ಮಾಡಲಾಗಿತ್ತು. ಅಲ್ಲದೇ, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.
ವಿಜಯಪುರ ಮಹಾಣಗರ ಪಾಲಿಕೆ ಕಚೇರಿಗಳ ಮೇಲೆ ದಾಳಿ ವೇಳೆ ಬಹಳಷ್ಟು ಅಕ್ರಮಗಳು ಪತ್ತೆಯಾಗಿದ್ದು ಇನ್ನೂ ಪರಿಶೀಲನೆಗೆ ಬಾಕಿ ಇವೆ. ಎಲ್ಲವನ್ನು ತಿಳಿದ ಬಳಿಕ ಸಂಬಂಧಿಸಿದ ಅಧಿಕಾರಿ ಸಿಬ್ಬಂದಿಗಳ ವಿರುದ್ಧ ದೂರು ದಾಖಲಿಸಿಕೊಂಡು ಕಾನೂನು ಕ್ರಮಕೈಗೊಳ್ಳಲಾಗುವುದು ಟಿ.ಮಲ್ಲೇಶ್ಲೋಕಾಯುಕ್ತ ಎಸ್‌ಪಿ ವಿಜಯಪುರ
ಅಧಿಕಾರಿ ಸಿಬ್ಬಂದಿಗಳ ದರ್ಬಾರ್
ವಿಜಯಪುರ: ಮಹಾನಗರ ಪಾಲಿಕೆ ಚುನಾಯಿತ ಪ್ರತಿನಿಧಿಗಳಿಲ್ಲದ ಕಾರಣ ಯಾವುದೇ ಲಂಗು ಲಗಾಮು ಇಲ್ಲದೇ ಸಂಪೂರ್ಣ ಹಳ್ಳ ಹಿಡಿದಿದೆ. ‘ಪ್ರತಿಯೊಂದು ಕೆಲಸಕ್ಕೂ ಹತ್ತಾರು ಬಾರಿ ಪಾಲಿಕೆ ಕಚೇರಿಗೆ ಅಲೆದಾಡಿ ಸುಸ್ತಾಗಿ ಹೋಗಿದ್ದೇವೆ. ಪ್ರತಿ ಕೆಲಸಕ್ಕೂ ಲಂಚಕ್ಕೆ ಬೇಡಿಕೆ ಇಡುತ್ತಾರೆ ನೇರವಾಗಿ ನಾವು ಹೋದರೆ ಯಾವುದೇ ಕೆಲಸ ಆಗುವುದಿಲ್ಲ ಮಧ್ಯವರ್ತಿಗಳ ಮೂಲಕವೇ ಹೋಗಬೇಕಾದ ವ್ಯವಸ್ಥೆ ನಿರ್ಮಾಣವಾಗಿದೆ’ ಎಂಬುದು ಸಾರ್ವಜನಿಕರ ಆರೋಪ.
ಪಾಲಿಕೆ ಮೇಯರ್ ಉಪಮೇಯರ್ ಸೇರಿದಂತೆ ಎಲ್ಲ 35 ಸದಸ್ಯರನ್ನು ರಾಜ್ಯ ಸರ್ಕಾರ ಅನರ್ಹ ಮಾಡಿರುವ ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದ್ದು ಯಾವುದೇ ಪ್ರಗತಿ ಪರಿಶೀಲನೆ ಸಭೆಗಳು ನಡೆಯದೇ ಅಧಿಕಾರಿಗಳದ್ದೇ ದರ್ಬಾರ್ ನಡೆದಿದೆ. ಬೀದಿ ದೀಪ ದುರಸ್ತಿಗೂ ಹತ್ತಾರು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂಬ ದೂರು ಕೇಳಿಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.