ADVERTISEMENT

ರಸ್ತೆಯಲ್ಲಿನ ತಗ್ಗು-ಗುಂಡಿ ಮುಚ್ಚುವ ಮಹಾಲಕ್ಷ್ಮಿ ಹಿರೇಮಠ

ಹೆಸ್ಕಾಂ ಬಿಲ್‌ ನೀಡುವುದರ ಜೊತೆಗೆ ಸಾಮಾಜಿಕ ಕಾಳಜಿ ತೋರುವ ಮಹಿಳೆ

ಗೌರಮ್ಮ ಕಟ್ಟಿಮನಿ
Published 9 ಮಾರ್ಚ್ 2024, 4:43 IST
Last Updated 9 ಮಾರ್ಚ್ 2024, 4:43 IST
ಹೆಸ್ಕಾಂ ಬಿಲ್‌ ನೀಡುತ್ತಿರುವ ಮಹಾಲಕ್ಷ್ಮಿ ಹಿರೇಮಠ
ಹೆಸ್ಕಾಂ ಬಿಲ್‌ ನೀಡುತ್ತಿರುವ ಮಹಾಲಕ್ಷ್ಮಿ ಹಿರೇಮಠ   

ಹುಬ್ಬಳ್ಳಿ: ‘ನಿತ್ಯ ಬೇರೆ ಬೇರೆ ಬೇರೆ ಬಡಾವಣೆ, ನಗರಗಳಿಗೆ ವಿದ್ಯುತ್ ಬಿಲ್ ನೀಡಲು ಮನೆ ಮನೆಗೆ ಹೋಗುವಾಗ ರಸ್ತೆ ಮಧ್ಯೆ ತಗ್ಗು-ಗುಂಡಿ ಕಾಣಿಸಿದರೆ ತಕ್ಷಣವೇ ಸ್ಕೂಟಿ ನಿಲ್ಲಿಸುವೆ. ಅಲ್ಲೇ ಬಿದ್ದ ಮಣ್ಣು, ಕಲ್ಲುಗಳಿಂದ ಅವುಗಳನ್ನು ತಾತ್ಕಾಲಿಕವಾಗಿ ಮುಚ್ಚಿ, ಮುಂದೆ ಹೋಗುವೆ. ನೀವ್ಯಾಕೆ ಈ ಕೆಲಸ ಮಾಡುತ್ತಿರಿ ಎಂದು ಹಲವರು ಪ್ರಶ್ನಿಸುತ್ತಾರೆ.  ಇನ್ನೂ ಕೆಲವರು ಶ್ಲಾಘಿಸುತ್ತಾರೆ. ಆದರೆ ಯಾರೂ ಪಾಲಿಸಲ್ಲ. ಆದರೆ, ಒಳ್ಳೆಯ ಕೆಲಸ ಮಾಡಿದೆ ಆತ್ಮತೃಪ್ತಿ ನನಗಿದೆ...

ಹೀಗೆ ಹೇಳಿದವರು ಹುಬ್ಬಳ್ಳಿಯ ವಿದ್ಯುತ್ ನಗರದ ನಿವಾಸಿ, 51 ವರ್ಷದ ಮಹಾಲಕ್ಷ್ಮಿ ಹಿರೇಮಠ. 19 ವರ್ಷಗಳಿಂದ ಹೆಸ್ಕಾಂ ಉದ್ಯೋಗಿಯಾದ ಅವರು, ಆರೇಳು ವರ್ಷಗಳಿಂದ ತಮ್ಮ ಕೆಲಸದ ಜೊತೆ ಎಲ್ಲೆ ತಗ್ಗು-ಗುಂಡಿ ಕಾಣಿಸಿದರೂ ಅವುಗಳನ್ನು ಮುಚ್ಚುವ ಕೆಲಸ ಮಾಡುತ್ತಾರೆ. ‘ಇದೇನೂ ದೊಡ್ಡ ಕೆಲಸವಲ್ಲ. ಆದರೆ, ಅದೇ ತಗ್ಗುಗಳಿಂದ ಅಪಘಾತ ಸಂಭವಿಸಬಹುದು. ಜನರಿಗೆ ಗಾಯವಾಗಿ, ಪ್ರಾಣಕ್ಕೆ ಅಪಾಯ ಆಗಬಹುದು. ಅದನ್ನು ತಡೆಯಲು ಪ್ರಯತ್ನಿಸುತ್ತೇನೆ’ ಎಂದು ಅವರು ತಿಳಿಸಿದರು.

‘ರಸ್ತೆ ಮಧ್ಯೆ ಪ್ಲಾಸ್ಟಿಕ್ ಬಾಟಲ್, ಗಿಡದ ಟೊಂಗೆ ಹೀಗೆ ಸಂಚಾರಕ್ಕೆ ತೊಂದರೆಯಾಗುವ ವಸ್ತುಗಳು ಬಿದ್ದಲ್ಲಿ ಅವುಗಳನ್ನು ಎತ್ತಿ ಬೇರೆಡೆ ಬಿಸಾಕಿ ಹೋಗುತ್ತೇನೆ. ಶಿರೂರು ಪಾರ್ಕ್‍ನಿಂದ ಬಂಜಾರ ಕಾಲೊನಿವರೆಗೂ ಬಿಲ್ ನೀಡುತ್ತೇನೆ. ಅವಳಿ ನಗರದ ರಸ್ತೆಗಳಲ್ಲಿ ತಗ್ಗು-ಗುಂಡಿಗಳು ಸಾಮಾನ್ಯ. ಆದರೆ ಅವುಗಳಿಂದ ಆಗುವ ಪರಿಣಾಮ ಗಂಭೀರವಾದದ್ದು. ಮಕ್ಕಳಿಗೂ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇನೆ’ ಎಂದು ಮಹಾಲಕ್ಷ್ಮಿ ತಿಳಿಸಿದರು.

ADVERTISEMENT

‘ಸಮಾಜ ಸೇವೆ ದೊಡ್ಡ ಕೆಲಸ ಆಗಬೇಕೆಂದೇನಿಲ್ಲ. ಮನೆಯಿಂದಲೇ ಮಕ್ಕಳಿಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಮತ್ತೊಬ್ಬರಿಗೆ ಸಹಾಯ ಮಾಡುವ ಗುಣ ಬೆಳೆಸಬೇಕು. ನನಗ್ಯಾಕೆ ಎಂದು ನಿರ್ಲಕ್ಷಿಸಿ ಮುಂದೆ ಹೋದರೆ, ನಮ್ಮವರಿಗೆ ಅಪಾಯವಾಗಬಹುದು. ಅದಕ್ಕೆ ತಗ್ಗುಗಳನ್ನು ಮುಚ್ಚುವ ಕೆಲಸ ಮುಂದುವರೆಸಿದ್ದೇನೆ’ ಎಂದು ಮಹಾಲಕ್ಷ್ಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.