
ವಿಜಯಪುರ: ಮೆಕ್ಕೆಜೋಳ ಖರೀದಿ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ವಿಷಯ, ಸಂಸತ್ತು ಅಧಿವೇಶನ ನಡೆಯುತ್ತಿದ್ದರೂ ಸಹ ರಾಜ್ಯದ ಬಿಜೆಪಿ ಸಂಸದರು ಒಂದಕ್ಷರವೂ ಮಾತನಾಡುತ್ತಿಲ್ಲ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅಸಮಾಧಾನ ಹೊರಹಾಕಿದರು.
ಮಂಗಳವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಸಂಸದ ಬಸವರಾಜ ಬೊಮ್ಮಾಯಿ ಅವರು ರೈತರ ಜೊತೆಗೆ ಹೋಗಿ ಪ್ರತಿಭಟನೆ ಮಾಡುತ್ತಾರೆ. ಆದರೆ ಲೋಕಸಭೆ ಅಧಿವೇಶನದಲ್ಲಿ ಏಕೆ ವಿಷಯ ಪ್ರಸ್ತಾಪಿಸುವುದಿಲ್ಲ ಎಂದರು.
‘ರಾಜ್ಯದಲ್ಲಿ ಹೆಚ್ಚು ಮೆಕ್ಕೆಜೋಳ ಉತ್ಪಾದನೆ ಆಗಿದೆ, ಆತಂಕದ ಪರಿಸ್ಥಿತಿ ಇದೆ ಎಂದು ಕಳೆದ ಅಕ್ಟೋಬರ್ ನಲ್ಲಿಯೇ ಪತ್ರ ಬರೆದು ಕೇಂದ್ರಕ್ಕೆ ಮನವಿ ಮಾಡಿದ್ದೇನೆ. ನಾವು ಕೇಂದ್ರಕ್ಕೆ ಎಷ್ಟೇ ಪತ್ರ ಬರೆದರೂ ಅವರು ನಮಗೆ ಮಾತುಕತೆಗೆ ಕರೆಯುತ್ತಿಲ್ಲ’ ಎಂದರು.
ಮೆಕ್ಕೆಜೋಳ ಖರೀದಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಸಿಮಿತ ಅಧಿಕಾರವಿದೆ. ಮಾಧ್ಯಮಗಳೇ ಇದರ ಬಗ್ಗೆ ಅಧ್ಯಯನ ಮಾಡಿ ಇದರಲ್ಲಿ ಯಾರ ಅಧಿಕಾರ ಜಾಸ್ತಿ ಇದೆ ಅನ್ನೋದನ್ನು ಜನರಿಗೆ ತಿಳಿಸಲಿ ಎಂದರು.
ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಮೆಕ್ಕೆಜೋಳ ಬೆಲೆ ₹1800 ಹಾಗೂ ₹2000 ಇದೆ. ಇದನ್ನು ಏಕೆ ಬಿಜೆಪಿ ನಾಯಕರು ಕೇಂದ್ರಕ್ಕೆ ಪ್ರಶ್ನೆ ಮಾಡುತ್ತಿಲ್ಲ ಎಂದು ಮರುಪ್ರಶ್ನೆ ಮಾಡಿದರು.
ಸಿಎಂ ಹಾಗೂ ಡಿಸಿಎಂ ಉಪಹಾರ ಭೇಟಿಯ ಕುರಿತು ಪ್ರತಿಕ್ರಿಯೆ ನೀಡಿ, ‘ಬಹಳ ಒಳ್ಳೆಯದಾಯ್ತು ದೇವರು ಒಳ್ಳೆಯ ಬುದ್ದಿ ಕೊಡಲಿ, ಇಬ್ಬರು ಕೂಡಿ ಮಾಧ್ಯಮಗಳಿಗೆ ನೀಡುತ್ತಿರೋ ಆಹಾರ ಬಂದ್ ಆಗಲಿ‘ ಎಂದು ಮಾರ್ಮಿಕವಾಗಿ ಹೇಳಿದರು.
ಬಿಜೆಪಿ ಚಳಿಗಾಲ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ವಿಷಯವಾಗಿಯೂ ಪ್ರತಿಕ್ರಿಯೆ ನೀಡಿದ ಅವರು, ‘140 ಜನ ಶಾಸಕರು ನಾವು ಒಗ್ಗಟ್ಟಾಗಿಲ್ಲವೇ ಹೇಗೆ? ನಮ್ಮ ಒಗ್ಗಟ್ಟಿನ ಬಗ್ಗೆ ಸಂಶಯ ಇದೆಯಾ? ನಮ್ಮಲ್ಲಿ ಯಾರೇ ಸಿಎಂ ಆದರೂ ಪಕ್ಷ ಬಹಳ ದೊಡ್ಡದು. ಪಕ್ಷವನ್ನು ಬಿಟ್ಟುಕೊಡುವುದಿಲ್ಲ. ಪಕ್ಷಕ್ಕಾಗಿ ನಾವು ಹೋರಾಟ ಮಾಡುತ್ತೇವೆ. ಸರ್ಕಾರ ನಾವು ಬೇಡ ಅಂದರು ಉಳಿಯುತ್ತದೆ. ಇನ್ನು ಬಿಜೆಪಿಗೆ ಬೇಗ ಗದ್ದುಗೆ ಏರುವ ಆತುರತೆ ಇದೆ‘ ಎಂದು ಆಕ್ರೋಶ ಹೊರಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.