ADVERTISEMENT

ವಿಜಯಪುರ: ಮಾಲದಂಡಿ ಜೋಳಕ್ಕೆ ಭೌಗೋಳಿಕ ಮಾನ್ಯತೆಗೆ ಪ್ರಯತ್ನ

ಜಿಲ್ಲಾಡಳಿತಕ್ಕೆ ಕೆಪೆಕ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಸಿ.ಎಸ್.ಶಿವಪ್ರಕಾಶ್ ಸಲಹೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 7:12 IST
Last Updated 30 ಆಗಸ್ಟ್ 2025, 7:12 IST
ವಿಜಯಪುರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಕೆಪೆಕ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಸಿ.ಎಸ್.ಶಿವಪ್ರಕಾಶ್ ಮತ್ತು ಜಿಲ್ಲಾಧಿಕಾರಿ ಡಾ.ಆನಂದ ಕೆ.ಜಂಟಿಯಾಗಿ ಉದ್ಘಾಟಿಸಿದರು –ಪ್ರಜಾವಾಣಿ ಚಿತ್ರ
ವಿಜಯಪುರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಕೆಪೆಕ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಸಿ.ಎಸ್.ಶಿವಪ್ರಕಾಶ್ ಮತ್ತು ಜಿಲ್ಲಾಧಿಕಾರಿ ಡಾ.ಆನಂದ ಕೆ.ಜಂಟಿಯಾಗಿ ಉದ್ಘಾಟಿಸಿದರು –ಪ್ರಜಾವಾಣಿ ಚಿತ್ರ   

ವಿಜಯಪುರ: ‘ರಾಜ್ಯದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಮಾತ್ರ ಬೆಳೆಯುವ ಪ್ರಸಿದ್ಧ ಮಾಲದಂಡಿ ಜೋಳಕ್ಕೆ ಭೌಗೋಳಿಕ ಮಾನ್ಯತೆ ಪಡೆಯಲು ಜಿಲ್ಲಾಡಳಿತ ಮುಂದಾಗಬೇಕು’ ಎಂದು ಕೆಪೆಕ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಸಿ.ಎಸ್. ಶಿವಪ್ರಕಾಶ್ ಸಲಹೆ ನೀಡಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಕೃಷಿ ಇಲಾಖೆ ಹಾಗೂ ಕೆಪೆಕ್ ಸಂಸ್ಥೆ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆ(ಪಿಎಂಎಫ್‌ಎಂಇ) ಕುರಿತ ಜಿಲ್ಲಾಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಪಿಎಂಎಫ್‌ಎಂಇಯಿಂದ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ಅಭಿವೃದ್ಧಿಗೆ ಸುವರ್ಣಾವಕಾಶ ಇದೆ. ಆದರೆ, ಜನರಿಗೆ ಈ ಯೋಜನೆಯಡಿ ಲಭಿಸುವ ಸಾಲ–ಸೌಲಭ್ಯಗಳ ಮಾಹಿತಿ ಕೊರತೆ ಇದೆ’ ಎಂದರು.

ADVERTISEMENT

‘ಪಿಎಂಎಫ್‌ಎಂಇ ಯೋಜನೆಯಡಿ ಹೊಸ ಆಹಾರ ಸಂಸ್ಕರಣ ಉದ್ದಿಮೆ ಪ್ರಾರಂಭಿಸಲು ಹಾಗೂ ಚಾಲ್ತಿಯಲ್ಲಿರುವ ಉದ್ದಿಮೆಗಳನ್ನು ವಿಸ್ತರಿಸಲು ಶೇ 35ರಷ್ಟು ಸಹಾಯಧನ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಶೇ 15ರಷ್ಟು ಸಹಾಯಧನ(ಸಬ್ಸಿಡಿ), ಗರಿಷ್ಠ ₹15 ಲಕ್ಷ ಅಥವಾ ಶೇ 50ರಷ್ಟು ಸಹಾಯಧನ ಪಡೆಯಲು ಅವಕಾಶ ಇದೆ’ ಎಂದರು.

‘18 ವರ್ಷ ಮೇಲ್ಪಟ್ಟವರು, ಸರ್ಕಾರದ ಇತರೆ ಯೋಜನೆಗಳಲ್ಲಿ ಸಹಾಯಧನ ಪಡೆದಿದ್ದರೂ, ಬ್ಯಾಂಕ್‌ ಸಾಲ ಪಡೆದಿದ್ದರೂ ಸಹ ಈ ಯೋಜನೆಯಡಿ ಸಾಲ–ಸೌಲಭ್ಯ ಪಡೆಯಬಹುದಾಗಿದೆ’ ಎಂದು ಹೇಳಿದರು.

‘ಆಹಾರ ಸಂಸ್ಕರಣ ಚಟುವಟಿಕೆಗಳಲ್ಲಿ ತೊಡಗಿರುವ ಸ್ವಸಹಾಯ ಸಂಘಗಳ ಸದಸ್ಯರಿಗೆ ದುಡಿಯುವ ಬಂಡವಾಳ ಮತ್ತು ಸಣ್ಣ ಉಪಕರಣಗಳ ಖರೀದಿಗಾಗಿ ಪ್ರತಿ ಸದಸ್ಯರಿಗೆ ₹40 ಸಾವಿರ ಹಾಗೂ ಪ್ರತಿ ಸ್ವಸಹಾಯ ಸಂಘಕ್ಕೆ ಗರಿಷ್ಠ ₹4 ಲಕ್ಷ ಪಡೆಯಲು ಅವಕಾಶ ಇದೆ’ ಎಂದರು.

ಮಾಹಿತಿ ಕೊರತೆ

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಆನಂದ ಕೆ., ‘ವಿಜಯಪುರ ಕೃಷಿ ಪ್ರಧಾನ ಜಿಲ್ಲೆಯಾಗಿದೆ. ಆಹಾರ ಸಂಸ್ಕರಣ ಘಟಕಗಳು ಹೆಚ್ಚಾಗಬೇಕಿದೆ. ರೈತರಿಗೆ ಸರಿಯಾದ ಸಾಲ, ಸೌಲಭ್ಯಗಳು ಸಿಗುತ್ತಿಲ್ಲ. ಈ ಯೋಜನೆಯಡಿ ಸಾಲಸೌಲಭ್ಯ ಕೊಡಿಸಲು ಶ್ರಮಿಬೇಕಿದೆ’ ಎಂದರು. 

‘ಆಹಾರ ಸಂಸ್ಕರಣೆ ಜೊತೆಗೆ ಗುಣಮಟ್ಟಕ್ಕೆ ಆದ್ಯತೆ ನೀಡಬೇಕಿದೆ. ಗ್ರೇಡಿಂಗ್, ಪ್ಯಾಕಿಂಗ್,  ಜಾಹೀರಾತು, ಸಾಮಾನ್ಯ ಬ್ರಾಂಡ್‌ ಅಭಿವೃದ್ಧಿ, ಚಿಲ್ಲರೆ ಮಾರಾಟ ಸಂಸ್ಥೆಗಳೊಂದಿಗೆ ಒಡಂಬಡಿಕೆ, ಆನ್‌ಲೈನ್ ‌ಮಾರ್ಕೆಟ್ ಸದುಪಯೋಗ ಪಡಿಸಿಕೊಳ್ಳಬೇಕಿದೆ’ ಎಂದರು.

‘ಕೃಷಿ ಚಟುವಟಿಕೆಯೊಂದಿಗೆ ರೈತರು ಆಹಾರ ಸಂಸ್ಕರಣಾ ಉದ್ದಿಮೆ ಆರಂಭಿಸಲು ಆಸಕ್ತಿ ವಹಿಸಬೇಕು. ಈ ಬಗ್ಗೆ ಸಂಬಂಧಿಸಿದ ಇಲಾಖೆಗಳು ಪೂರಕ ಮಾಹಿತಿ ಒದಗಿಸುವಂತೆ  ಬ್ಯಾಂಕಗಳು ಅರ್ಹರಿಗೆ ಸಾಲ ಸೌಲಭ್ಯ ಒದಗಿಸಿ ಈ ಯೋಜನೆಯ ಲಾಭ ಅರ್ಹರಿಗೆ ತಲುಪಿಸುವಂತೆ ಅವರು ಹೇಳಿದರು.  

ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಎಸ್.ಪಾಟೀಲ, ಸ್ವಂತ ಉದ್ಯಮ ಆರಂಭಿಸಲು ಈ ಯೋಜನೆ ಸಹಾಯವಾಗಲಿದೆ. ಹೆಚ್ಚೆಚ್ಚು ರೈತರನ್ನು ಈ ಯೋಜನೆ ವ್ಯಾಪ್ತಿಗೆ ತರಲು ಕೃಷಿ ಇಲಾಖೆ ಆದ್ಯತೆ ನೀಡಲಿದೆ ಎಂದರು.

ಜಿಲ್ಲಾ ಲೀಡ್ ಬ್ಯಾಂಕ್ ಅಧ್ಯಕ್ಷ ಬಿ. ಸಿದ್ದಯ್ಯ, ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಕಾಶಿಬಾಯಿ ಖ್ಯಾಡಗಿ,ಉಪ ಕೃಷಿ ನಿರ್ದೇಶಕ ಶರಣಗೌಡ ರಂಗನಗೌಡ, ಚಂದ್ರಕಾಂತ ಪವಾರ, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕ ಬಾಲರಾಜ ರಂಗರಾವ್‌, ಆನಂದ ನಿಂಬರಗಿ, ಜಾನಮಟ್ಟಿ ಇದ್ದರು. 

ಮಹಿಳಾ ಸ್ವಸಹಾಯಕ ಸಂಘಗಳು ತಯಾರಿಸಿದ ವಿವಿಧ ಆಹಾರೋತ್ಪನ್ನಗಳ ಪ್ರದರ್ಶನ, ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. 

ಆಹಾರ ಸಂಸ್ಕರಣ ಘಟಕಗಳನ್ನು ರೈತರು ಸ್ಥಾಪಿಸಲು ಅಗತ್ಯ ಮಾಹಿತಿಯನ್ನು ಒದಗಿಸಿ ಅರ್ಜಿ ಸಲ್ಲಿಸಲು ಹಾಗೂ ಬ್ಯಾಂಕಿನಲ್ಲಿ ಅರ್ಜಿಗಳು ತಿರಸ್ಕೃತವಾಗದಂತೆ ಹೆಚ್ಚಿನ ಆದ್ಯತೆ ನೀಡಬೇಕಿದೆ.
– ಡಾ.ಆನಂದ ಕೆ., ಜಿಲ್ಲಾಧಿಕಾರಿ 
ಕೃಷಿ ಆಧಾರಿತ ವಿಜಯಪುರ ಜಿಲ್ಲೆಯಲ್ಲಿ ಆಹಾರ ಸಂಸ್ಕರಣ ಘಟಕಗಳು ಸದ್ಯ ಒಟ್ಟು 350 ಘಟಕ ಇವೆ. ಇವುಗಳ ಸಂಖ್ಯೆ 500ಕ್ಕೂ ಅಧಿಕವಾಗಲು ಶ್ರಮಿಸಬೇಕಿದೆ.
– ಸಿ.ಎಸ್.ಶಿವಪ್ರಕಾಶ್, ವ್ಯವಸ್ಥಾಪಕ ನಿರ್ದೇಶಕಕೆಪೆಕ್ ಸಂಸ್ಥೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.