ಆಲಮಟ್ಟಿ: ಅಲ್ಲಿ ಬಾಜಾ ಭಜಂತ್ರಿಯೂ ಇತ್ತು, ಅರಿಶಿಣ ಹಚ್ಚುವ, ಸುರಗಿ ಕಟ್ಟುವ, ಬೀಗರು ಎದುರುಗೊಳ್ಳುವ, ತಾಳಿ ಕಟ್ಟುವ ಪದ್ಧತಿಯೂ ನಡೆಯಿತು. ಮದುವೆಯ ನಂತರ ಊಟದ ವ್ಯವಸ್ಥೆಯೂ ಇತ್ತು. ಆದರೆ ಅದು ನಿಜವಾದ ಮದುವೆಯಾಗಿರಲಿಲ್ಲ. ಅಲ್ಲಿ ನಡೆದಿದ್ದು ಗೊಂಬೆಗಳ ಮದುವೆ.
ಆಲಮಟ್ಟಿ ಗ್ರಾಮದ ವಾರ್ಡ್ ನಂ-3 ರಲ್ಲಿ ಮಳೆಗಾಗಿ ಪ್ರಾರ್ಥಿಸಲು ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ ಶೆಟ್ಟಿ ಬಣ) ಮಹಿಳಾ ಘಟಕದಿಂದ ಗೊಂಬೆಗಳ ಮದುವೆ ಹಾಗೂ ಗುರ್ಜಿ ಪೂಜೆ ಮಂಗಳವಾರ ನಡೆಯಿತು.
ವಿಜಯಪುರದಿಂದ ಬಂದ ಕೆಲ ಮಹಿಳೆಯರು ತಂದ ಹೆಣ್ಣು ಗೊಂಬೆಗೆ ಪಾರ್ವತಿ ಎಂದೂ, ಆಲಮಟ್ಟಿಯಿಂದ ಬಂದ ಗೊಂಬೆಗೆ ಶಿವ ಅಂತ ನಾಮಕರಣ ಮಾಡಲಾಯಿತು.
ವಿಜಯಪುರದಿಂದ ಹೆಣ್ಣು ಗೊಂಬೆ ಸಮೇತ ಬಂದ ಮಹಿಳೆಯರನ್ನು ಬೀಗರು ಎಂದು ತಿಳಿದು, ಬೀಗರ ಎದುರುಗೊಳ್ಳುವ ಸಂಪ್ರದಾಯ ನಡೆಯಿತು. ಕಳಸ ಹೊತ್ತುಕೊಂಡು, ಆರತಿ ಹಿಡಿದು ಹೆಣ್ಣು ಗೊಂಬೆಯನ್ನು ಮದುವೆ ಮಂಟಪದ ಬಳಿ ಕರೆದುಕೊಂಡು ಬರಲಾಯಿತು. ಎರಡೂ ಗೊಂಬೆಗಳಿಗೆ ಸುರಗಿ ಸುತ್ತಿ ಅರಿಷಣ ಹಚ್ಚಿ ಸ್ನಾನ ಮಾಡಿಸಲಾಯಿತು.
ಹೆಣ್ಣು ಗೊಂಬೆಗೆ ಸೀರೆ ಉಡಿಸಿ, ಮೂಗಿನಲ್ಲಿ ನತ್ತು ಹಾಕಿ ವಿವಿಧ ಆಭರಣ ತೊಡಿಸಲಾಯಿತು. ನಂತರ ಮೊದಲೇ ಸಿದ್ಧಗೊಂಡಿದ್ದ ಮದುವೆ ಮಂಟಪದಲ್ಲಿ, ಎರಡೂ ಗೊಂಬೆಗಳನ್ನು ಕೂಡಿಸಿ ಶಾಸ್ತ್ರೋಕ್ತ ಮದುವೆ ಮಾಡಿಸಲಾಯಿತು. ಮದುವೆಯ ಎಲ್ಲಾ ಸಂಪ್ರದಾಯಗಳನ್ನು ಪಾಲಿಸಲಾಯಿತು. ಹಲವು ಮಹಿಳೆಯರು ಜನಪದ ಹಾಡು ಹಾಡಿದರು. ಊಟದ ವ್ಯವಸ್ಥೆಯನ್ನು ಸಂಘಟನೆಯಿಂದ ಮಾಡಲಾಗಿತ್ತು.
ಮದುವೆಗೂ ಮುನ್ನ ಮೊದಲು ಗುರ್ಜಿ ಪೂಜೆಯೂ ಜರುಗಿತು. ಬಾಲಕನೊಬ್ಬ ಗುರ್ಜಿ ಹೊತ್ತುಕೊಂಡು ಮನೆ ಮನೆಗೆ ಮಹಿಳೆಯರೊಂದಿಗೆ ತೆರಳಿದ. ಮಹಿಳೆಯರೆಲ್ಲಾ ಗುರ್ಜಿಗೆ ನೀರು ಹಾಕಿ, ಗುರ್ಜಿ ಹಾಡು ಹಾಡಿ ಪೂಜೆ ಸಲ್ಲಿಸಿದರು.
ರೇಷ್ಮಾ ಬಾರಕೇರ, ಸೈದಮ್ಮ ಬೆಣ್ಣಿ, ಪ್ರೀತಿ ಹೊನಕೇರಿ, ಕಾವೇರಿ ಭಜಂತ್ರಿ, ಲಕ್ಷ್ಮಿ ರಾಠೋಡ, ಯಲ್ಲಪ್ಪ ಭಜಂತ್ರಿ, ರಾಮು ರಾಠೋಡ ಇನ್ನೀತರರಿದ್ದು, ವಿವಿಧ ಸಂಪ್ರದಾಯಗಳನ್ನು ಕೈಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.