
ವಿಜಯಪುರ: ‘ಪಿಪಿಪಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ ಕನಸಿನ ಕೂಸು, ವಿಜಯಪುರ ಜಿಲ್ಲೆಗೆ ಅನ್ಯಾಯ ಮಾಡಿದ್ದು ಈ ಹಿಂದಿನ ಬಿಜೆಪಿ ಸರ್ಕಾರ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ವಾಗ್ದಾಳಿ ನಡೆಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಜಯಪುರ ಸೇರಿದಂತೆ ರಾಜ್ಯದ 11 ಜಿಲ್ಲೆಗಳಲ್ಲಿ ಸಾರ್ವಜನಿಕ ಖಾಸಗಿ ಸಹಬಾಗಿತ್ವದಲ್ಲಿ(ಪಿಪಿಪಿ) ವೈದ್ಯಕೀಯ ಕಾಲೇಜು ಪ್ರಾರಂಭಿಸಲು 2022ರಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ ಅವರು ತೀರ್ಮಾನ ಕೈಗೊಂಡಿದ್ದರು’ ಎಂದು ದಾಖಲೆಗಳನ್ನು ಪ್ರದರ್ಶಿಸಿದರು.
‘ಪಿಪಿಪಿ ಮಾಡಿದವರೂ ಬಿಜೆಪಿಯವರೇ, ಈಗ ವಿರುದ್ಧವಾಗಿ ಮಾತನಾಡುವವರೂ ಬಿಜೆಪಿಯವರೇ, ಈ ವಿಷಯದಲ್ಲಿ ನಾಟಕ ಮಾಡುತ್ತಿದ್ದಾರೆ. ಜನರನ್ನು ಪ್ರಚೋದನೆ ಮಾಡುತ್ತಿದ್ದಾರೆ. ಹೋರಾಟಗಾರರು ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.
‘ಪಿಪಿಪಿ ವಿರೋಧಿಸಿ ವಿಜಯಪುರದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲಿಸುವ ನೆಪದಲ್ಲಿ ಬಿಜೆಪಿ ಇಬ್ಬರು ಪುಡಾರಿಗಳು (ಎಲ್ಲರೂ ಅಲ್ಲ) ನನ್ನ ವಿರುದ್ಧ ಏನೇನೋ ಮಾತನಾಡಿದ್ದಾರೆ. ಇದನ್ನು ಸಹಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.
‘ಇದೇ ಡಿಸೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಪಿಪಿಪಿ ಮಾದರಿಯಲ್ಲಿ ದೇಶದಲ್ಲಿ 11 ವೈದ್ಯಕೀಯ ಕಾಲೇಜು ಸ್ಥಾಪಿಸಲು ಮುಂದಾಗಿದೆ. ಈ ಬಗ್ಗೆ ಬಿಜೆಪಿಯವರು ಏನು ಹೇಳುತ್ತಾರೆ. ಪಿಪಿಪಿ ಬೇಡ ಎಂದು ಹೇಳುತ್ತಿರುವ ಬಿಜೆಪಿಯವರು ಪ್ರಧಾನಿ ಮೋದಿ ಅವರ ಬಳಿ ಮೊದಲು ಹೋಗಿ ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಪಿಪಿಪಿಯನ್ನು ವಿರೋಧಿಸಲಿ’ ಎಂದು ಸವಾಲು ಹಾಕಿದರು.
‘ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟವನ್ನು ಬೆಂಬಲಿಸುವ ಮುನ್ನಾ ಬಿಜೆಪಿಯವರು, ಪಿಪಿಪಿ ಮಾಡಿದದ್ದು ನಾವೇ, ತಪ್ಪಾಗಿದೆ ಎಂಬುದನ್ನು ಒಪ್ಪಿಕೊಳ್ಳಲಿ’ ಎಂದರು.
‘ಪಟ್ಟಿ ಎತ್ತಿ ಸರ್ಕಾರಿ ವೈದ್ಯಕೀಯ ಕಾಲೇಜು ಮಾಡುತ್ತೇವೆ’ ಎಂಬ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಚಿವರು ಮುಗುಳ್ನಕ್ಕು, ಕೈಮುಗಿದರು.
ಸಿಎಂ ಬಳಿಗೆ ನಿಯೋಗ: ಭರವಸೆ
ವಿಜಯಪುರ:‘ಮುಖ್ಯಮಂತ್ರಿ ಬಳಿಗೆ ಶೀಘ್ರದಲ್ಲೇ ಮತ್ತೊಮ್ಮೆ ಹೋರಾಟಗಾರರ ನಿಯೋಗ ಕರೆದುಕೊಂಡು ಹೋಗಿ ಪಿಪಿಪಿ ಬೇಡ ಸರ್ಕಾರಿ ವೈದ್ಯಕೀಯ ಕಾಲೇಜು ಆದಷ್ಟು ಶೀಘ್ರ ಆಗಲಿ ಎಂದು ನಾನೇ ಸ್ಪಷ್ಟವಾಗಿ ಮನವರಿಕೆ ಮಾಡುತ್ತೇನೆ’ ಎಂದು ಸಚಿವ ಎಂ.ಬಿ.ಪಾಟೀಲ ಭರವಸೆ ನೀಡಿದರು.
‘ಪಿಪಿಪಿ ಬೇಡ ಎಂಬುದು ನನ್ನ ಸ್ಪಷ್ಟ ನಿರ್ಧಾರ ಪಿಪಿಪಿ ಮುಗಿದ ಅಧ್ಯಾಯ ಜನವರಿ 9ಕ್ಕೆ ಮುಖ್ಯಮಂತ್ರಿ ಬರುತ್ತಾರೆ. ಸಾಧ್ಯವಾದರೆ ಅಂದೇ ಹೋರಾಟಗಾರರನ್ನು ಭೇಟಿ ಮಾಡಿಸುತ್ತೇನೆ’ ಎಂದರು. ‘ಹೋರಾಟಗಾರರ ಬಗ್ಗೆ ನನಗೆ ವೈಯಕ್ತಿವಾಗಿ ಗೌರವ ಇದೆ. ಈ ಹಿಂದೆ ನಿಯೋಗವನ್ನು ಕರೆದೊಯ್ದು ಭೇಟಿ ಮಾಡಿಸಿದಾಗ ಮುಖ್ಯಮಂತ್ರಿಯವರು ಬೇಡಿಕೆಗೆ ಸ್ಪಂದಿಸಿದ್ದಾರೆ. ಸರ್ಕಾರಿ ವೈದ್ಯಕೀಯ ಕಾಲೇಜು ಮಾಡಲು ಅನುದಾನ ಸಮಯ ಬೇಕು ಮುಂದು ಪರಿಗಣಿಸುತ್ತೇವೆ ಎಂದು ಹೇಳಿದ್ದಾರೆ’ ಎಂದರು.
‘ಎರಡು ವರ್ಷವಾಗಲಿ 10 ವರ್ಷವಾಗಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಿ ಎಂದು ಹೋರಾಟಗಾರರೇ ಹೇಳಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲೇ ಆದಷ್ಟು ಶೀಘ್ರವಾಗಿ ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಕಾರ್ಯಾರಂಭ ಮಾಡುತ್ತೇವೆ’ ಎಂದು ಸ್ಪಷ್ಟಪಡಿಸಿದರು. ‘ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುತ್ತೇವೆ ಎಂದು ಲಿಖಿತವಾಗಿ ಭರವಸೆ ಕೊಡಿ ಎಂದು ಹೋರಾಟಗಾರರ ಹೇಳಿದರೆ ಆಗುವುದಿಲ್ಲ. ಸರ್ಕಾರದ ಹಣಕಾಸು ಪರಿಸ್ಥಿತಿ ನೋಡಿಕೊಂಡು ಶೀಘ್ರ ಆರಂಭಿಸುತ್ತೇವೆ’ ಎಂದು ಹೇಳಿದರು.
ರಾಮನ ಹೆಸರಲ್ಲಿ ನರೇಗಾ ನಿರ್ನಾಮ: ಎಂ.ಬಿ.ಪಾಟೀಲ
ವಿಜಯಪುರ: ‘ನರೇಗಾ ಯೋಜನೆಯಿಂದ ಮಹಾತ್ಮ ಗಾಂಧಿ ಹೆಸರನ್ನು ಬದಲಿಸಿ ರಾಮನ ಹೆಸರನ್ನು ಇಟ್ಟಿರುವುದು ಸರಿಯಲ್ಲ. ರಾಮನ ಹೆಸರಿಟ್ಟಿರುವ ಕಾರಣಕ್ಕಾದರೂ ಯೋಜನೆಯನ್ನು ಬಲಿಷ್ಠಗೊಳಿಸಬೇಕಿತ್ತು. ಆದರೆ ರಾಮನ ಹೆಸರಲ್ಲಿ ಯೋಜನೆಯನ್ನು ಬಲಹೀನಗೊಳಿಸಿ ನಿರ್ನಾಮ ಮಾಡಲು ಪ್ರಧಾನಿ ಮೋದಿ ಹೊರಟಿದ್ದಾರೆ’ ಎಂದು ಸಚಿವ ಎಂ.ಬಿ.ಪಾಟೀಲ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ದ್ವೇಷ ಭಾಷಣ ವಿದೇಯಕವನ್ನು ಬಿಜೆಪಿಯವರು ವಿರೋಧಿಸುತ್ತಿರುವುದು ಏಕೆ ಎಂಬುದು ತಿಳಿಯುತ್ತಿಲ್ಲ. ಈ ವಿದೇಯಕ ಕೇವಲ ಬಿಜೆಪಿಯವರಿಗಲ್ಲ ಕಾಂಗ್ರೆಸಿನವರಿಗೂ ಅನ್ವಯಿಸುತ್ತದೆ. ಕುಂಬಳಕಾಯಿ ಕಳ್ಳ ಎಂದಾಕ್ಷಣ ಹೆಗಲು ಮುಟ್ಟಿಕೊಳ್ಳುವುದು ಏಕೆ? ದ್ವೇಷ ಭಾಷಣ ಮಾಡಿ ಸಮಾಜದ ಶಾಂತಿ ಕೆಡಿಸುವವರನ್ನು ನಿಯಂತ್ರಿಸಲು ಈ ಕಾನೂನಿನಿಂದ ಅನುಕೂಲವಾಗಲಿದೆ’ ಎಂದರು.
ಕಬ್ಬು ಬೆಳೆಗಾರರಿಗೆ ಮೋಸ: ‘ಪ್ರತಿ ಟನ್ ಕಬ್ಬಿಗೆ ಕೇಂದ್ರ ಸರ್ಕಾರ ₹3550 ನಿಗದಿ ಮಾಡಿದೆ. ಆದರೆ ಇದರಲ್ಲಿ ₹700 ರಿಂದ ₹800 ಕಟಾವು ಮತ್ತು ಸಾಗಾಟ(ಎಚ್ ಅಂಡ್ ಟಿ)ಕ್ಕೆ ಸೇರಿದೆ. ಇದನ್ನು ಕಳೆದರೆ ರೈತರಿಗೆ ಪ್ರತಿ ಟನ್‌ಗೆ ಸಿಗುವುದು ₹2750 ಮಾತ್ರ. ಇದು ರೈತರಿಗೆ ಮೋದಿ ಸರ್ಕಾರ ನೀಡುವ ದರ. ಇದನ್ನು ರೈತರು ರೈತ ಹೋರಾಟಗಾರರು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.
‘ಎಥೆನಾಲ್ ಉತ್ಪಾದನೆಗೆ ಕೇಂದ್ರ ಸರ್ಕಾರ ಉತ್ತೇಜನ ನೀಡಿ ದೊಡ್ಡ ಮಟ್ಟದ ಪ್ರಚಾರ ಮಾಡಿತು. ಆದರೆ ಕಾರ್ಖಾನೆಗಳಿಂದ ಉತ್ಪಾದನೆಯಾದ ಅರ್ಧದಷ್ಟು ಖರೀದಿಸದೇ ಮೋಸ ಮಾಡಿದೆ. ಇದರ ಪರಿಣಾಮ ರೈತರು ಕಾರ್ಖಾನೆಯವರು ಅನುಭವಿಸುವಂತಾಗಿದೆ’ ಎಂದು ದೂರಿದರು.
ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿಷಯದಲ್ಲಿ ವಿಜಯಪುರಕ್ಕೆ ಅನ್ಯಾಯ ಮಾಡಿದವರು ಬಿಜೆಪಿಯವರೇ ಹೊರತು ಕಾಂಗ್ರೆಸ್ ಸರ್ಕಾರವಲ್ಲ ನಾನೂ ಕೂಡ ಜಿಲ್ಲೆಗೆ ಅನ್ಯಾಯ ಮಾಡಿಲ್ಲ ಮಾಡುವುದಿಲ್ಲಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.