ADVERTISEMENT

ವಿಜಯಪುರ | ಸಾರವಾಡಕ್ಕೆ ಏತ ನೀರಾವರಿ ಸೌಲಭ್ಯ: ಸಚಿವ ಎಂ. ಬಿ. ಪಾಟೀಲ ಭರವಸೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 2:30 IST
Last Updated 26 ಡಿಸೆಂಬರ್ 2025, 2:30 IST
ಸಾರವಾಡದಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮವನ್ನು ಸಚಿವ ಎಂ. ಬಿ. ಪಾಟೀಲ ಉದ್ಘಾಟಿಸಿದರು 
ಸಾರವಾಡದಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮವನ್ನು ಸಚಿವ ಎಂ. ಬಿ. ಪಾಟೀಲ ಉದ್ಘಾಟಿಸಿದರು    

ವಿಜಯಪುರ: ಸಾರವಾಡ, ತೊನಶ್ಯಾಳ, ದದಾಮಟ್ಟಿ, ಹೊನಗನಹಳ್ಳಿ, ಸವನಹಳ್ಳಿ, ಅತಾಲಟ್ಟಿ, ತೊರವಿ ಮುಂತಾದ ಗ್ರಾಮಗಳಿಗೆ ರೇವಣಸಿದ್ಧೇಶ್ವರ ಏತನೀರಾವರಿ ಯೋಜನೆ 2ನೇ ಹಂತದಲ್ಲಿ ನೀರಾವರಿ ಸೌಲಭ್ಯ ಒದಗಿಸಲಾಗುವುದು ಎಂದು  ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದರು.

ಬಬಲೇಶ್ವರ ತಾಲ್ಲೂಕಿನ ಸಾರವಾಡ ಗ್ರಾಮದಲ್ಲಿ ಮಂಗಳವಾರ ಲೋಕೋಪಯೋಗಿ ಇಲಾಖೆಯ ₹10 ಕೋಟಿ ಅನುದಾನದಲ್ಲಿ ಸಾರವಾಡ - ಬಬಲೇಶ್ವರ ರಸ್ತೆಯ ಹಲಗಣಿ ಕ್ರಾಸ್ ವರೆಗೆ ಸುಧಾರಣೆ ಕಾಮಗಾರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯ ₹2 ಕೋಟಿ ಅನುದಾನದಲ್ಲಿ ಸಾರವಾಡ – ತೊನಶ್ಯಾಳ ರಸ್ತೆ ಸುಧಾರಣೆ ಕಾಮಗಾರಿ, ಲೋಕೋಪಯೋಗಿ ಇಲಾಖೆಯ ₹5 ಕೋಟಿ ಅನುದಾನದಲ್ಲಿ ಸಾರವಾಡ - ದದಾಮಟ್ಟಿ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ, ₹2 ಕೋಟಿ ವೆಚ್ಚದ ಡೋಣಿ ನದಿಯಲ್ಲಿರುವ ಹೂಳೆತ್ತುವ ಕಾರ್ಯಕ್ಕೆ ಚಾಲನೆ, ₹1 ಕೋಟಿ ವೆಚ್ಚದಲ್ಲಿ ಚಿಕ್ಕಪ್ಪಯ್ಯ ಗುಡಿ ರಸ್ತೆ ಸುಧಾರಣೆ ಕಾಮಗಾರಿ ಭೂಮಿ ಪೂಜೆ, ಎಂ.ಪಿ.ಎಸ್ ಶಾಲೆಯಲ್ಲಿ ಮಕ್ಕಳ ಆಟಿಕೆ ಸಾಧನಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಸಾರವಾಡ ಈಶ್ವರ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕೆ ₹1 ಕೋಟಿ ಅನುದಾನ ನೀಡುತ್ತೇನೆ. ಮತಕ್ಷೇತ್ರದ 100 ಸರ್ಕಾರಿ ಶಾಲೆಗಳ ಪೈಕಿ ಈಗಾಗಲೇ 58 ಶಾಲೆಗಳಲ್ಲಿ ಕ್ರೀಡಾ ಸಲಕರಣೆಗನ್ನು ಅಳವಡಿಸಲಾಗಿದೆ. ಸಾರವಾಡದಲ್ಲಿ ಟೊಯೊಟಾ ಕಿರ್ಲೋಸ್ಕರ್ ಸಿ.ಎಸ್.ಆರ್ ಅನುದಾನದಲ್ಲಿ ಪ್ರಾಥಮಿಕ ಶಾಲೆ ಅಭಿವೃದ್ಧಿ ಮಾಡಲಾಗುವುದು. ಬಾಲಕಿಯರ ಮತ್ತು ಉರ್ದು ಶಾಲೆಯನ್ನೂ ಅಭಿವೃದ್ಧಿ ಪಡಿಸಲಾಗುವುದು ಎಂದರು.

ADVERTISEMENT

ಪ್ರಗತಿಪಥ ಯೋಜನೆಯಡಿ ಗ್ರಾಮೀಣ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಸಾರವಾಡದಲ್ಲಿ 110 ಕೆವಿ ಸ್ಟೇಷನ್ ನಿರ್ಮಾಣ, ಡೋಣಿ ಸೇತುವೆ ಅಗಲೀಕರಣ ಮಾಡಲಾಗುವುದು. ಗ್ರಾಮದಲ್ಲಿ ಮೂರು ಎಕರೆಯಲ್ಲಿ ಸುಸಜ್ಜಿತವಾಗಿ ನಿವೇಶನಗಳನ್ನು ಅಭಿವೃದ್ಧಿ ಪಡಿಸಿ 123 ದಲಿತ ಕುಟುಂಬಗಳಿಗೆ ಹಂಚಿಕೆ ಮಾಡಲಾಗುವುದು ಎಂದರು.

ದದಾಮಟ್ಟಿ- ಜುಮನಾಳ ಕ್ರಾಸ್ ರಸ್ತೆ ಅಭಿವೃದ್ಧಿ, ಬಸ್ ನಿಲ್ದಾಣ ನಿರ್ಮಾಣ, ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ, ಡೋಣಿ ನದಿ ಹೂಳೆತ್ತುವ ಕಾಮಗಾರಿ ಮಾಡಲಾಗುವುದು. ಡೋಣಿ ನದಿ ಹೂಳೆತ್ತುವ ಯೋಜನೆ ಪರಿಷ್ಕೃತ ಯೋಜನೆಯನ್ನು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಕಳುಹಿಸಲಾಗಿದೆ. ಒಂದು ವರ್ಷದೊಳಗೆ ಸಾರವಾಡದ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದು ಹೇಳಿದರು.

ಸಾರಂಗಪ್ಪಯ್ಯ  ಸ್ವಾಮೀಜಿ, ರೇಣುಕಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮುಖಂಡರಾದ ವಿ. ಎಸ್. ಪಾಟೀಲ, ಚನ್ನಪ್ಪ ಕೊಪ್ಪದ,  ಸೋಮನಾಥ ಕಳ್ಳಿಮನಿ,ಕಂಟೆಪ್ಪ ಕಣಬೂರ, ಈರಗೊಂಡ ಬಿರಾದಾರ, ಸದಾಶಿವ ಚಿಕರೆಡ್ಡಿ, ಶರಣಪ್ಪ ಬಿದರಿ, ಈಶ್ವರ ಇನಾಮದಾರ, ಗಂಗಾಧರ ಸಂಬಣ್ಣಿ, ಎಂ.ಎಸ್ ಪಾಟೀಲ, ಈಶ್ವರಪ್ಪ ಚಿಕರೆಡ್ಡಿ, ಜಯಗೌಡ ಪಾಟೀಲ, ಶಶಿಧರ ಬಿದರಿ ಉಪಸ್ಥಿತರಿದ್ದರು. 

ಸಾರವಾಡ ಗ್ರಾಮಸ್ಥರ ಉಪಕಾರ ನನ್ನ ಮೇಲೆ ಇದೆ. 2018ರಲ್ಲಿ ಮೋದಿ ಅಮಿತ ಶಾ ಇಲ್ಲಿಗೆ ಬಂದು  ಭರ್ಜರಿ ಪ್ರಚಾರ ಮಾಡಿದರೂ ಗ್ರಾಮಸ್ಥರು ನನಗೆ 1600 ಮತಗಳ ಲೀಡ್ ನೀಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ 
ಎಂ. ಬಿ. ಪಾಟೀಲಜಿಲ್ಲಾ ಉಸ್ತುವಾರಿ ಸಚಿವ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.