ADVERTISEMENT

ವಿಜಯಪುರ | ಹೋರಾಟಗಾರರು ಬಂಧಮುಕ್ತ; ವಿಜಯೋತ್ಸವ

ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟಗಾರರಿಗೆ ಲಭಿಸಿದ ಜಯ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 2:50 IST
Last Updated 15 ಜನವರಿ 2026, 2:50 IST
ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದಿಂದ ಬುಧವಾರ ರಾತ್ರಿ ಬಿಡುಗಡೆಯಾದ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟಗಾರರನ್ನು ಸನ್ಮಾನಿಸಲಾಯಿತು
ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದಿಂದ ಬುಧವಾರ ರಾತ್ರಿ ಬಿಡುಗಡೆಯಾದ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟಗಾರರನ್ನು ಸನ್ಮಾನಿಸಲಾಯಿತು   

ವಿಜಯಪುರ: ಖಾಸಗಿ–ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿರೋಧಿಸಿ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಡೆದ ಹೋರಾಟದಲ್ಲಿ ಬಂಧನಕ್ಕೆ ಒಳಗಾಗಿ, 14 ದಿನಗಳಿಂದ ಸೆರೆವಾಸದಲ್ಲಿದ್ದ ಆರು ಹೋರಾಟಗಾರರು ಬುಧವಾರ ಜೈಲಿನಿಂದ ಬಿಡುಗಡೆಯಾದರು.

ಹೋರಾಟಗಾರರಾದ ಅನಿಲ ಹೊಸಮನಿ, ಅರವಿಂದ ಕುಲಕರ್ಣಿ, ಬಿ. ಭಗವಾನ್‌ರೆಡ್ಡಿ, ಭೋಗೇಶ ಸೋಲಾಪುರ, ಸಿದ್ದರಾಮ ಹಳ್ಳೂರ ಹಾಗೂ ಹುಳಶ್ಯಾಳದ ಸಂಗನ ಬಸವ ಸ್ವಾಮೀಜಿ ಅವರು ಸಂಜೆ 7.30ಕ್ಕೆ ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದಿಂದ (ದರ್ಗಾ ಜೈಲ್‌) ಬಿಡುಗಡೆಯಾದರು. ಅವರು ಹೊರಬರುತ್ತಿದ್ದಂತೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿ ಸದಸ್ಯರು, ವಿವಿಧ ಸಂಘಟನೆಗಳ ಹಾಗೂ ರಾಜಕೀಯ ಪಕ್ಷಗಳ ಮುಖಂಡರು, ಕುಟುಂಬದವರು, ಬಂಧುಗಳು, ಸ್ನೇಹಿತರು, ಹಿತೈಷಿಗಳು ಹೂವಿನ ಹಾರ ಹಾಕಿ ಅಭಿನಂದಿಸಿದರು. ಸಿಹಿ ತಿನ್ನಿಸಿ ಸಂಭ್ರಮಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಹೋರಾಟಗಾರ ಅನಿಲ ಹೊಸಮನಿ, ‘ಇದು ಜನರ ಗೆಲುವು. ಈ ಹೋರಾಟದ ಫಲವಾಗಿ ವಿಜಯಪುರ ಅಷ್ಟೇ ಅಲ್ಲದೆ ರಾಜ್ಯದ ಇನ್ನುಳಿದ ಜಿಲ್ಲೆಗಳಲ್ಲೂ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ನಿರ್ಧಾರವನ್ನು ಸರ್ಕಾರ ಕೈ ಬಿಡಲು ಮುಂದಾಗಿದೆ. ಇದು ನಮ್ಮ ಹೋರಾಟಕ್ಕೆ ದೊಡ್ಡ ಜಯ ತಂದುಕೊಟ್ಟಿದೆ’ ಎಂದರು.

ADVERTISEMENT

‘ಕೊನೆಗೂ ರಾಜ್ಯ ಸರ್ಕಾರ ಪಿಪಿಪಿ ಕೈಬಿಟ್ಟು, ಸರ್ಕಾರ ವೈದ್ಯಕೀಯ ಕಾಲೇಜು ಸ್ಥಾಪಿಸುವ ನಿರ್ಧಾರ ಪ್ರಕಟಿಸಿರುವುದು ಸಂತೋಷ ತಂದಿದೆ. ಜೈಲಿನಲ್ಲಿ ಸಚಿವ ಶಿವಾನಂದ ಪಾಟೀಲ ಅವರು ಭೇಟಿಯಾಗಿ ಮುಂಬರುವ ಬಜೆಟ್‌ನಲ್ಲಿ ಮೆಡಿಕಲ್ ಕಾಲೇಜ್ ಘೋಷಣೆ ಮಾಡುವ ಭರವಸೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಸಹ ಸ್ಪಂದಿಸಿ, ಮೆಡಿಕಲ್ ಕಾಲೇಜ್ ಸ್ಥಾಪನೆಯ ನಿಟ್ಟಿನಲ್ಲಿ ಶ್ರಮಿಸುವುದಾಗಿ ಹೇಳಿದ್ದಾರೆ’ ಎಂದರು.

ಮುಖಂಡರಾದ ಶ್ರೀನಾಥ ಪೂಜಾರಿ, ಮಲ್ಲಿಕಾರ್ಜುನ ಯಂಡಿಗೇರಿ, ಎಂ.ಸಿ.‌ ಮುಲ್ಲಾ, ಅಕ್ರಂ ಮಾಶ್ಯಾಳಕರ, ಎಚ್.ಟಿ. ಭರತಕುಮಾರ, ಎಚ್.ಟಿ. ಮಲ್ಲಿಕಾರ್ಜುನ, ಸುರೇಖಾ ರಜಪೂತ, ಲಲಿತಾ ಬಿಜ್ಜರಗಿ, ಬಾಬುರಾವ್‌ ಬೀರಕಬ್ಬಿ, ಸುರೇಶ ಜೀಬಿ, ವಿನೋದ ಖೇಡ, ಸುರೇಶ ಬಿಜಾಪುರ ಇದ್ದರು.

ರಾಜ್ಯ ಸರ್ಕಾರ ಮುಂಬರುವ ಬಜೆಟ್‌ನಲ್ಲಿ ವಿಜಯಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅಗತ್ಯ ಅನುದಾನ ಮೀಸಲಿಟ್ಟು ಆದಷ್ಟು ಶೀಘ್ರ ಕಾಲೇಜು ಕಾರ್ಯಾರಂಭಕ್ಕೆ ಆದ್ಯತೆ ನೀಡಬೇಕು
ಅನಿಲ ಹೊಸಮನಿ ಹಿರಿಯ ಹೋರಾಟಗಾರ

ತೆರೆದ ವಾಹನದಲ್ಲಿ ಮೆರವಣಿಗೆ ಜೈಲಿನ ಮುಂಭಾಗದಲ್ಲಿ ಗುಂಪುಗೂಡಿದ್ದ ನೂರಾರು ಜನರು ‘ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟಕ್ಕೆ ಜಯವಾಗಲಿ’ ‘ಹೋರಾಟಗಾರರಿಗೆ ಜಯವಾಗಲಿ’ ಎಂಬ ಘೋಷಣೆಗಳನ್ನು ಮೊಳಗಿಸಿದರು. ಬಳಿಕ ತೆರೆದ ವಾಹನಗಳಲ್ಲಿ ಹೋರಾಟಗಾರರನ್ನು ವಾಟರ್‌ ಟ್ಯಾಂಕ್‌ ಸರ್ಕಲ್ ಶಿವಾಜಿ ಸರ್ಕಲ್ ಗಾಂಧಿ ಚೌಕಿ ಬಸವೇಶ್ವರ ಚೌಕಿ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಮೆರವಣಿಗೆ ಮಾಡಿದರು. ಹತ್ತಾರು ವಾಹನಗಳು ಮೆರವಣಿಗೆಯಲ್ಲಿ ಸಾಲಾಗಿ ಸಾಗಿದವು. ರಸ್ತೆಯ ಇಕ್ಕೆಲಗಳಲ್ಲಿ ಜನರು ನಿಂತು ವೀಕ್ಷಿಸಿ ಹೋರಾಟಗಾರರನ್ನು ಅಭಿನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.